ಅವಸಾನದ ಅಂಚಿಗೆ ತಲುಪಿದ ಬೃಹತ್ ಶಿಲಾಯುಗದ ಶಿಲಾಗೋರಿಗಳು

ಉಡುಪಿ: ಸುಮಾರು ಮೂರರಿಂದ ಮೂರೂವರೆ ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಹೊತ್ತಿರುವ ಬೃಹತ್ ಶಿಲಾಯುಗದ ಶಿಲಾಗೋರಿಗಳು ಉಡುಪಿ ಜಿಲ್ಲೆಯ ಒಂಡಾರು ವ್ಯಾಪ್ತಿಯ ಕಕ್ಕುಂಜೆ–ಗಾವಳಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಇಂದು ಅವಸಾನದ ಅಂಚಿಗೆ ತಲುಪಿವೆ. ಈ ಪ್ರದೇಶದಲ್ಲಿ ಒಟ್ಟು ಐದು ಪ್ರಾಚೀನ ಶಿಲಾಗೋರಿಗಳು ಪತ್ತೆಯಾಗಿದ್ದು, ಅವುಗಳಲ್ಲಿ ಒಂದೇ ಒಂದು ಶಿಲಾಗೋರಿ ಮಾತ್ರ ನೆಟ್ಟಗಿದ್ದು, ಉಳಿದ ನಾಲ್ಕು ಶಿಲಾಗೋರಿಗಳು ನೆಲಕ್ಕೆ ಕುಸಿದ ಸ್ಥಿತಿಯಲ್ಲಿ ಕಂಡುಬರುತ್ತಿವೆ.

ಅರಣ್ಯ ಇಲಾಖೆಯ ವತಿಯಿಂದ ನೆಡಲಾಗಿರುವ ಅಕೇಶಿಯ ಮರಗಳು ವರ್ಷಗಳಿಂದ ಬೃಹದಾಕಾರವಾಗಿ ಬೆಳೆದು, ಅವುಗಳ ಬೇರುಗಳು ಶಿಲಾಗೋರಿಗಳ ನೆಲೆಯನ್ನು ದುರ್ಬಲಗೊಳಿಸಿರುವುದಲ್ಲದೇ, ನಿಧಿಗಳ್ಳರ ಹಾವಳಿಯಿಂದಲೂ ಈ ಅಪರೂಪದ ಪುರಾತತ್ವ ಸ್ಮಾರಕಗಳು ಹಾನಿಗೊಳಗಾಗಿವೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ, ಇಂತಹ ಅಪೂರ್ವ ಐತಿಹಾಸಿಕ ಪುರಾವೆಗಳನ್ನು ಸರ್ಕಾರ ತಕ್ಷಣ ಸಂರಕ್ಷಿಸಿ, ಮುಂದಿನ ತಲೆಮಾರಿಗೆ ಪರಿಚಯಿಸುವ ಜವಾಬ್ದಾರಿ ವಹಿಸಬೇಕು ಎಂದು ಸ್ಥಳೀಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಶಿಲಾಗೋರಿಗಳನ್ನು ಪುನಃ ನೆಟ್ಟಗೆ ಸ್ಥಾಪಿಸಿ, ಸೂಕ್ತ ರಕ್ಷಣಾ ವ್ಯವಸ್ಥೆ, ದಾರಿದೀಪಗಳು, ಮಾಹಿತಿ ಫಲಕಗಳು, ಶಿಲಾಗೋರಿಗಳ ಇತಿಹಾಸ ವಿವರಿಸುವ ಚಿತ್ರಫಲಕಗಳ ಅಳವಡಿಕೆ ಹಾಗೂ ಕಾಂಕ್ರೀಟ್ ರಸ್ತೆ ಮತ್ತು ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಕರಾವಳಿ ಭಾಗದಲ್ಲಿ ಬೀಚ್ ಡೆವಲಪ್ಮೆಂಟ್‌ಗೆ ಸರ್ಕಾರ ಹೆಚ್ಚಿನ ಆಸಕ್ತಿ ತೋರಿಸುತ್ತಿರುವ ಹಿನ್ನಲೆಯಲ್ಲಿ, ನಮ್ಮ ಪೂರ್ವಿಕರ ಜೀವನ ಶೈಲಿ, ಅಂತ್ಯಸಂಸ್ಕಾರ ಪದ್ಧತಿಗಳನ್ನು ಪ್ರತಿಬಿಂಬಿಸುವ ಇಂತಹ ಪುರಾತನ ಶಿಲಾಗೋರಿಗಳನ್ನು ಕೂಡ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಈ ಕುರಿತು ಸಾಮಾಜಿಕ ಕಾರ್ಯಕರ್ತರಾದ ಸರಳಬೆಟ್ಟು ಆದೇಶ್ ಬಿದಿಕಲ್ ಕಟ್ಟೆ, ರಂಜಿತ್ ಕಕ್ಕುಂಜೆ ಸೇರಿದಂತೆ ಹಲವರು ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿಯ ಹೊಸ್ತಿಲಿನಲ್ಲಿ ಇರುವ ಈ ಪ್ರದೇಶಕ್ಕೆ ತುರ್ತು ರಕ್ಷಣೆಯ ಅಗತ್ಯವಿದೆ ಎಂದಿದ್ದಾರೆ.

ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ನಿವೃತ್ತ ಸಂಶೋಧಕ ಪ್ರೊ. ಟಿ. ಮುರುಗೇಶಿ ಅವರು ತಮ್ಮ ಶಿಷ್ಯ ವೃಂದದೊಂದಿಗೆ ಸ್ಥಳೀಯರಿಗೆ ಶಿಲಾಗೋರಿಗಳ ಇತಿಹಾಸ ಮತ್ತು ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಇವುಗಳು ಪ್ರಾಚೀನ ಕಾಲದಲ್ಲಿ ಮೃತದೇಹಗಳನ್ನು ಆಳವಿಲ್ಲದ ಗುಂಡಿಗಳಲ್ಲಿ ಹೂಳಿ, ಕಾಡುಪ್ರಾಣಿಗಳಿಂದ ರಕ್ಷಿಸಲು ದೊಡ್ಡ ಬಂಡೆಗಲ್ಲುಗಳಿಂದ ಮುಚ್ಚುತ್ತಿದ್ದ ಸಮಾಧಿ ಸ್ಥಳಗಳಾಗಿವೆ ಎಂದು ಅವರು ವಿವರಿಸಿದರು. ಕೆಲವೆಡೆ ಮಣಿಗಳಂತಹ ವಸ್ತುಗಳೊಂದಿಗೆ ಹೂಳಲಾಗಿದ್ದ ಪುರಾವೆಗಳು ದೊರೆತಿರುವುದಾಗಿ ತಿಳಿಸಿದರು.

ಪ್ಯಾಲಿಯೋಲಿಥಿಕ್ ಮತ್ತು ನವಶಿಲಾಯುಗ ಕಾಲಘಟ್ಟಗಳ ಅಂತ್ಯಕ್ರಿಯಾ ಪದ್ಧತಿಗಳನ್ನು ಪ್ರತಿಬಿಂಬಿಸುವ ಈ ಶಿಲಾಗೋರಿಗಳು, ಮಾನವನ ಸಾವು–ಸಂಸ್ಕಾರ ಕುರಿತ ಮೊದಲ ನಂಬಿಕೆಗಳ ಸಂಕೇತಗಳಾಗಿವೆ. ಈ ಪ್ರದೇಶದ ಸುತ್ತಮುತ್ತ ಖಾಸಗಿ ಜಾಗಗಳಲ್ಲಿಯೂ ಬಂಡೆಗಳ ಮೇಲೆ ರೇಖಾಚಿತ್ರಗಳು ಕಾಣಸಿಗುತ್ತಿದ್ದು, ಇಡೀ ಪ್ರದೇಶವೇ ಪುರಾತತ್ವ ಮಹತ್ವ ಹೊಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಚಿನ್ನದ ನಿಕ್ಷೇಪದ ಸುಳಿವು : 3 ದಿನಗಳಿಂದ ವೈಮಾನಿಕ ಸಮೀಕ್ಷೆ

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಶಾಶ್ವತ ರಕ್ಷಣಾ ವ್ಯವಸ್ಥೆ ಕಲ್ಪಿಸುವ ಜೊತೆಗೆ ಸರ್ಕಾರದ ಮಟ್ಟದಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories