ವಿವಾದದ ಕೇಂದ್ರಬಿಂದುವಾದ ಉಡುಪಿ ಕಂಬಳ : ಜಿಲ್ಲಾಡಳಿತದಿಂದ ನಿಷೇಧಾಜ್ಞೆ ಜಾರಿ
ಕಂಬಳ ಕರಾವಳಿ ಭಾಗದ ಗ್ರಾಮೀಣ ಕ್ರೀಡೆ, ಈ ಭಾಗದ ಜನರ ಅಸ್ಮಿತೆ ಕೂಡ. ಆದರೆ ಉಡುಪಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಉಡುಪಿ ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿರುವ ಕಂಬಳ ರಾಜಕೀಯ ಕಚ್ಚಾಟ ವೇದಿಕೆ ಹಾಡಿದೆ. ಈ ಗಲಾಟೆ ಯಾವ ಮಟ್ಟಿಗೆ ತಲುಪಿದೆ ಎಂದು ಮಣಿಪಾಲ ಸಮೀಪದ 80 ಬಡಗುಬೆಟ್ಟು ಗ್ರಾಮ ವ್ಯಾಪ್ತಿಯಲ್ಲಿ ಬಿಎನ್ಎಸ್ ಕಲಂ 163 ನಿಷೇಧಾಜ್ಞೆಯನ್ನೇ ಜಾರಿಗೊಳಿಸಲಾಗಿದೆ..!
ಏನಿದು ಕಂಬಳ ವಿವಾದ ?
ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಡಳಿತದ ನೇತೃತ್ವದಲ್ಲಿ ಹಾಗೂ ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿ ವತಿಯಿಂದ ಕಂಬಳ ಆಯೋಜಿಸಲಾಗಿತ್ತು. ಸ್ಥಳೀಯ ಬಿಜೆಪಿ ಶಾಸಕರಾಗಿರುವ ಗುರ್ಮೆ ಸುರೇಶ್ ಶೆಟ್ಟಿ ಇಂದು ಉಡುಪಿ ಕಂಬಳದ ಶಂಕುಸ್ಥಾಪನೆ ಕಾರ್ಯಕ್ರಮ ನಿಗದಿಪಡಿಸಿದ್ದರು. ಆದರೆ ಇಂದು ಕಾರ್ಯಕ್ರಮ ಆಯೋಜಿಸುವುದಕ್ಕೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ವಿನಯ್ ಕುಮಾರ್ ಸೊರಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉಡುಪಿ ಕಂಬಳ ಕಾರ್ಯಕ್ರಮದ ಶಂಕುಸ್ಥಾಪನೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದಲೇ ನಡೆಯಬೇಕು. ಹೀಗಾಗಿ ಈ ಕಾರ್ಯಕ್ರಮವನ್ನು ಮಾರ್ಚ್ 4ಕ್ಕೆ ಮುಂದೂಡುವಂತೆ ವಿನಯ್ ಕುಮಾರ್ ಸೊರಕೆ ತಗಾದೆ ತೆಗೆದಿದ್ದಾರೆ. ಇದಕ್ಕೆ ಒಪ್ಪದ ಗುರ್ಮೆ ಸುರೇಶ್ ಶೆಟ್ಟಿ ಪೂರ್ವನಿಗದಿಯಂತೆ ಇಂದೇ ಶಂಕುಸ್ಥಾಪನೆ ಕಾರ್ಯಕ್ರಮ ನಡೆಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಕಾರ್ಕಳ ಅಂಬೇಡ್ಕರ್ ಭವನ ಲೋಕಾರ್ಪಣೆ, ಶಾಸಕ ಸುನೀಲ್ ಕುಮಾರ್ ಫೋಟೋಗೆ ಕತ್ತರಿ : ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ
ಯುವಜನ ಕ್ರೀಡಾ ಇಲಾಖೆ ಜಮೀನಿನಲ್ಲಿ ಶಂಕು ಸ್ಥಾಪನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಇದೀಗ ಉಡುಪಿ ಜಿಲ್ಲಾಡಳಿತ ಈ ಭಾಗದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ. ಸರ್ಕಾರಿ ಜಮೀನಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಇಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಾರ್ಚ್ 4ರಂದು ಕಂಬಳ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಈ ಕಂಬಳ ಗಲಾಟೆ ಯಾವ ಮಟ್ಟಕ್ಕೆ ಹೋಗಿ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಿದೆ.



