ಉಡುಪಿ: ಮೀನು ಲೋಡಿಂಗ್ ಕೆಲಸದವನ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ! ಮಲ್ಪೆಯಲ್ಲಿ ಹೈಟೆಕ್ ಸೈಬರ್ ವಂಚನೆ ಜಾಲ
udupi malpe cyber fraud : ಉಡುಪಿ: ಮೀನು ಲೋಡಿಂಗ್ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬನ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡ ಇಬ್ಬರು ವ್ಯಕ್ತಿಗಳು, ಆತನ ಹೆಸರಿನಲ್ಲಿ ನಕಲಿ ಕಂಪನಿ ತೆರೆದು ಕೋಟ್ಯಾಂತರ ರೂಪಾಯಿ ಅಕ್ರಮ ವ್ಯವಹಾರ ನಡೆಸಿರುವ ಆಘಾತಕಾರಿ ಘಟನೆ ಮಲ್ಪೆಯಲ್ಲಿ ಬೆಳಕಿಗೆ ಬಂದಿದೆ.
Udupi malpe cyber fraud : ಉಡುಪಿ: ಮೀನು ಲೋಡಿಂಗ್ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬನ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡ ಇಬ್ಬರು ವ್ಯಕ್ತಿಗಳು, ಆತನ ಹೆಸರಿನಲ್ಲಿ ನಕಲಿ ಕಂಪನಿ ತೆರೆದು ಕೋಟ್ಯಾಂತರ ರೂಪಾಯಿ ಅಕ್ರಮ ವ್ಯವಹಾರ ನಡೆಸಿರುವ ಆಘಾತಕಾರಿ ಘಟನೆ ಮಲ್ಪೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಉಡುಪಿ ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಏನಿದು ಹೈಟೆಕ್ ಸೈಬರ್ ವಂಚನೆ ಜಾಲ ?
ಮೂಲತಃ ವಿಜಯನಗರ ಜಿಲ್ಲೆಯವರಾದ ರಾಜಾನಾಯ್ಕ (32) ಎಂಬುವವರು ಮಲ್ಪೆಯ ಐಸ್ ಪ್ಲಾಂಟ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಮೀನು ಲೋಡಿಂಗ್ ಕೆಲಸ ಮಾಡುತ್ತಿದ್ದರು. ಇವರ ಪರಿಚಯಸ್ಥರಾಗಿದ್ದ ಮಲ್ಪೆಯ ಸೂರಜ್ ಸಾಲ್ಯಾನ್ ಎಂಬಾತ, ವ್ಯವಹಾರದ ಆಸೆ ತೋರಿಸಿ ರಾಜಾನಾಯ್ಕ ಅವರನ್ನು ಪುಸಲಾಯಿಸಿದ್ದಾನೆ. ನಂತರ ಮಣಿಪಾಲದ ವಿಳಾಸ ನೀಡಿ ‘SR Fisheries’ ಹೆಸರಿನಲ್ಲಿ ಒಂದು ಸಂಸ್ಥೆಯನ್ನು ತೆರೆಯಲಾಗಿದೆ.
ಖಾತೆ ತೆರೆದು ದಾಖಲೆಗಳ ದುರುಪಯೋಗ
ಆರೋಪಿ ಸೂರಜ್ ಸಾಲ್ಯಾನ್, ರಾಜಾನಾಯ್ಕ ಅವರ ದಾಖಲೆಗಳನ್ನು ಬಳಸಿಕೊಂಡು ಉಡುಪಿಯ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮತ್ತು ಆದಿ ಉಡುಪಿಯ ಕರ್ನಾಟಕ ಬ್ಯಾಂಕ್‌ನಲ್ಲಿ ಚಾಲ್ತಿ (Current) ಹಾಗೂ ಉಳಿತಾಯ ಖಾತೆಗಳನ್ನು ತೆರೆಸಿದ್ದಾನೆ. ಅಚ್ಚರಿಯ ವಿಷಯವೆಂದರೆ, ಈ ಖಾತೆಗಳಿಗೆ ರಾಜಾನಾಯ್ಕ ಅವರ ಮೊಬೈಲ್ ಸಂಖ್ಯೆಯನ್ನೇ ಲಿಂಕ್ ಮಾಡಿಸಲಾಗಿತ್ತು. ಆದರೆ, ಬ್ಯಾಂಕ್ ನೀಡಿದ ಚೆಕ್ ಬುಕ್, ಎಟಿಎಂ ಕಾರ್ಡ್ ಮತ್ತು ಪಾಸ್ ಪುಸ್ತಕಗಳನ್ನು ಸೂರಜ್ ತನ್ನ ವಶದಲ್ಲೇ ಇಟ್ಟುಕೊಂಡಿದ್ದನು.
ಕೋಟ್ಯಾಂತರ ರೂಪಾಯಿ ವರ್ಗಾವಣೆ ಪತ್ತೆ!
ದಿನ ಕಳೆದಂತೆ ಅನುಮಾನಗೊಂಡ ರಾಜಾನಾಯ್ಕ ಅವರು ಬ್ಯಾಂಕಿಗೆ ತೆರಳಿ ಪರಿಶೀಲಿಸಿದಾಗ ಸ್ಫೋಟಕ ಸತ್ಯ ಹೊರಬಂದಿದೆ. ಅವರ ಹೆಸರಿನಲ್ಲಿದ್ದ ಖಾತೆಗಳಲ್ಲಿ ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಈ ಖಾತೆಗಳ ಮೇಲೆ ಈಗಾಗಲೇ ದೇಶದ ವಿವಿಧೆಡೆ ಹಲವು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.
Also Read: ಉಡುಪಿಯಲ್ಲಿ ಮಟ್ಕಾ ದಂಧೆ : ಹಿರಿಯಡ್ಕ-ಮಲ್ಪೆಯಲ್ಲಿ ಆರೋಪಿಗಳ ಬಂಧನ
ಆರೋಪಿಗಳ ವಿರುದ್ಧ ಕೇಸ್ ದಾಖಲು
ತನ್ನನ್ನು ನಂಬಿಸಿ, ಸುಳ್ಳು ಮಾಹಿತಿ ನೀಡಿ ಬ್ಯಾಂಕ್ ಖಾತೆಯನ್ನು ಸೈಬರ್ ವಂಚನೆಗೆ ಬಳಸಿಕೊಂಡಿದ್ದಾರೆ ಎಂದು ರಾಜಾನಾಯ್ಕ ಅವರು ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಸೂರಜ್ ಸಾಲ್ಯಾನ್ ಮತ್ತು ಆತನಿಗೆ ಸಾಥ್ ನೀಡಿದ ರೋಷನ್ ಸೋನ್ಸ್ ಎಂಬುವವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಈ ಕುರಿತು ಉಡುಪಿ ಸೆನ್ (CEN) ಪೊಲೀಸ್ ಠಾಣೆ.
ಸಾರ್ವಜನಿಕರಿಗೆ ಎಚ್ಚರಿಕೆ:
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಮುಗ್ಧ ಜನರ ದಾಖಲೆಗಳನ್ನು ಪಡೆದು ‘ಮ್ಯೂಲ್ ಅಕೌಂಟ್’ (Mule Accounts) ಆಗಿ ಬಳಸುತ್ತಿದ್ದಾರೆ. ಯಾರೇ ಆಗಲಿ ಕೆಲಸ ಕೊಡಿಸುವ ಅಥವಾ ವ್ಯವಹಾರದ ಆಸೆ ತೋರಿಸಿ ನಿಮ್ಮ ಹೆಸರಿನಲ್ಲಿ ಖಾತೆ ತೆರೆದು ಅದರ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಂಡರೆ ತಕ್ಷಣ ಪೊಲೀಸರಿಗೆ ದೂರು ನೀಡಿ. ನಿಮ್ಮ ಒಂದು ಸಹಿ ನಿಮ್ಮನ್ನು ದೊಡ್ಡ ಸಂಕಷ್ಟಕ್ಕೆ ಸಿಲುಕಿಸಬಹುದು!
udupi malpe cyber fraud case sr fisheries bank account misuse



