ಈರುಳ್ಳಿ ಪಕೋಡಾ ತಿಂದು ಬೇಜಾರಾಗಿದ್ಯಾ; ಸುರಿಯೋ ಮಳೆಯಲ್ಲಿ ಸವಿಯಿರಿ ಸೋರೆಕಾಯಿ ಪಕೋಡಾ

bottle gourd pakoda : ಮಳೆಗಾಲ ಪ್ರಾರಂಭವಾಗಿದೆ. ಎಲ್ಲೆಲ್ಲೂ ವರುಣನ ಆರ್ಭಟ ಶುರುವಾಗಿದೆ. ಗಾಳಿ, ಮಳೆಯಿಂದಾಗಿ ವಾತಾವರಣ ತಂಪಾಗಿದೆ. ನಿರಂತರವಾಗಿ ಸುರಿವ ಮಳೆಗೆ ಮೈಮನವೆಲ್ಲ ಜಿಡ್ಡುಗಟ್ಟಿರುವ ಅನುಭವವಾಗುತ್ತಿದೆ. ಇಂತಹ ಸಮಯದಲ್ಲಿ ನಾಲಿಗೆ ರುಚಿ ಹೆಚ್ಚಿಸುವ ಬಿಸಿ ಬಿಸಿ ಭಕ್ಷ್ಯಗಳು ಮೂಡ್ ಅನ್ನು ಸರಿದಾರಿಗೆ ತರಬಲ್ಲದು.
ಈ ಕಾರಣದಿಂದಲೇ ಮಳೆಗಾಲದಲ್ಲಿ ಬಿಸಿ ಬಿಸಿ ಚಹಾದೊಂದಿಗೆ ಬಜ್ಜಿ, ಪಕೋಡಾಗಳನ್ನು ತಯಾರಿಸಿ ಸವಿಯುವುದೆಂದರೆ ಎಲ್ಲರಿಗೂ ಇಷ್ಟ. ಆದರೆ ಯಾವಾಗಲೂ ನೀವು ಒಂದೇ ರೀತಿಯ ಈರುಳ್ಳಿ ಪಕೋಡಾ, ಆಲೂಗಡ್ಡೆ ಬಜ್ಜಿ ಮಾಡ್ತಾ ಇದ್ರೆ, ಅದನ್ನು ತಿಂದು ಬೇಜಾರಾಗಬಹುದು. ಅದೇ ಹೊಸ ಹೊಸ ರುಚಿ ಪ್ರಯತ್ನಿಸಿದರೆ, ಜಿಹ್ವಾ ಚಪಲ ತೀರಿಸಿಕೊಳ್ಳುವುದರ ಜೊತೆಗೆ ಮನೆ ಮಂದಿಗೆಲ್ಲ ಸಂತೋಷ ನೀಡಬಹುದು.
ಅದಕ್ಕೆ ಸೋರೆಕಾಯಿ ಪಕೋಡಾ ಪ್ರಯತ್ನಿಸಿ. ಪೌಷ್ಟಿಕಾಂಶಗಳ ಗಣಿಯಾಗಿರುವ ಸೋರೆಕಾಯಿಯಿಂದ ತರತರಹದ ಅಡುಗೆ ಮಾಡುತ್ತಾರೆ. ಹಾಲು ಕುಂಬಳಕಾಯಿ, ಕಂಬಳಕಾಯಿ, ಬಾಟಲ್ ಗಾರ್ಡ್, ಲೋಕಿ ಎಂದೆಲ್ಲಾ ಕರೆಯುವ ಈ ಸೋರೆಕಾಯಿಯಿಂದ ಹುಳಿ, ಪಲ್ಯ, ಪಾಯಸ, ಹಲ್ವ ಎಂದೆಲ್ಲಾ ಮಾಡಿ ಸವಿಯುತ್ತಾರೆ.
Also Read : Coconut Rice Recipe : ಚಿತ್ರಾನ್ನದಷ್ಟೇ ರುಚಿಕರವಾದ ತೆಂಗಿನಕಾಯಿ ರೈಸ್ ರೆಸಿಪಿ ಒಮ್ಮೆ ಟ್ರೈ ಮಾಡಿ
ಎಂದಾದರೂ ನೀವು ಈ ಸೋರೆಕಾಯಿಯ ಪಕೋಡಾ ಮಾಡಿ ಸವಿದಿದ್ದೀರಾ? ಮಳೆಗಾಲದ ತಂಪು ವಾತಾವರಣಕ್ಕೆ ಸೋರೆಕಾಯಿಯ ಪಕೋಡಾ ಸೂಪರ್ ಆಗಿರುತ್ತದೆ. ಹಾಗಾದ್ರೆ ಸೋರೆಕಾಯಿ ಪಕೋಡಾ ತಯಾರಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

Bottle gourd pakoda : ಸೋರೆಕಾಯಿ ಪಕೋಡಾ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
ಸೋರೆಕಾಯಿ: 1
ಕಡಲೆ ಹಿಟ್ಟು: 1 ಕಪ್
ಅಕ್ಕಿ ಹಿಟ್ಟು: 2 ಚಮಚ
ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ: 1–2
ಶುಂಠಿ–ಬೆಳ್ಳುಳ್ಳಿ ಪೇಸ್ಟ್: 1 ಚಮಚ
ಅರಿಶಿಣ ಪುಡಿ: 1/4 ಚಮಚ
ಅಚ್ಚಖಾರದ ಪುಡಿ: 1/2 ಚಮಚ
ಕೊತ್ತಂಬರಿ ಪುಡಿ: 1ಚಮಚ
ಇಂಗು: 1 ಚಿಟಿಕೆ
ಸಣ್ಣಗೆ ಹೆಚ್ಚಿದ ಕೊತ್ತೊಂಬರಿ ಸೊಪ್ಪು: 2 ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ನೀರು: ಅಗತ್ಯವಿದ್ದಷ್ಟು
ಅಡುಗೆ ಎಣ್ಣೆ: ಪಕೋಡಾ ಕರಿಯಲು
Also Read : Jeera Soda Juice Recipe : ಬೇಸಿಗೆಯ ದಾಹಕ್ಕಾಗಿ ಮನೆಯಲ್ಲೇ ತಯಾರಿಸಿ ತಂಪಾದ ಜೀರಾ ಸೋಡ
Bottle gourd pakoda : ಸೋರೆಕಾಯಿ ಪಕೋಡಾ ತಯಾರಿಸುವ ವಿಧಾನ
- ಮೊದಲಿಗೆ ಸೋರೆಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು ತುರಿದುಕೊಳ್ಳಿ. ಪಕೋಡಾ ಗರಿಗರಿಯಾಗಿ ಬರಲು ಅದರಲ್ಲಿರುವ ಹೆಚ್ಚುವರಿ ನೀರಿನಂಶವನ್ನು ಒತ್ತಿ ತೆಗೆಯಿರಿ.
- ಒಂದು ದೊಡ್ಡ ಪಾತ್ರೆಗೆ, ಮೇಲೆ ಹೇಳಿರುವ ಅಳತೆಯ ಪ್ರಮಾಣದಲ್ಲಿ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ, ಕೊತ್ತೊಂಬರಿ ಸೊಪ್ಪು, ಅರಿಶಿಣ, ಕೊತ್ತಂಬರಿ ಪುಡಿ, ಅಚ್ಚಖಾರದ ಪುಡಿ, ಇಂಗು ಮತ್ತು ಉಪ್ಪನ್ನು ಒಂದೊಂದಾಗಿ ಸೇರಿಸುತ್ತಾ ಬನ್ನಿ.
- ಈಗ ಆ ಮಿಶ್ರಣಕ್ಕೆ ತುರಿದಿಟ್ಟುಕೊಂಡಿರುವ ಸೋರೆಕಾಯಿಯನ್ನು ಸೇರಿಸಿ.
- ಒಮ್ಮೆ ಎಲ್ಲವನ್ನು ಮಿಕ್ಸ್ ಮಾಡಿಕೊಳ್ಳಿ. ಪಕೋಡಾ ಹಿಟ್ಟಿನ ಹದ ಬರುವ ಸಲುವಾಗಿ ಸ್ವಲ್ಪ ನೀರಿನ್ನು ಸೇರಿಸಿಕೊಂಡು ಮತ್ತೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
- ನಂತರ ಒಂದು ಪ್ಯಾನ್‌ಗೆ ಅಡುಗೆ ಎಣ್ಣೆಯನ್ನು ಹಾಕಿ. ಮಧ್ಯಮ ಉರಿಯಲ್ಲಿ ಚೆನ್ನಾಗಿ ಕಾಯಿಸಿಕೊಳ್ಳಿ.
- ಈಗ ಪಕೋಡಾ ಹಿಟ್ಟನ್ನು ಕೈಯಲ್ಲಿ ತೆಗೆದುಕೊಂಡ ನಂತರ ಅದನ್ನು ಸ್ವಲ್ಪ ದುಂಡಗಿನ ಆಕಾರ ಬರುವಂತೆ ಮಾಡಿ, ಎಣ್ಣೆಯಲ್ಲಿ ಬಿಡಿ. ನೀವು ಚಮಚದ ಸಹಾಯದಿಂದಲೂ ಪಕೋಡಾವನ್ನು ಎಣ್ಣೆಗೆ ಹಾಕಬಹುದು.
- ಎರಡೂ ಕಡೆ ಹೊಂಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಪಕೋಡಾವನ್ನು ಗರಿಗರಿಯಾಗಿ ಕರಿಯಿರಿ.
- ಈಗ ಸೋರೆಕಾಯಿ ಪಕೋಡಾ ಸವಿಯಲು ಸಿದ್ಧ.
- ಇದನ್ನು ಟೊಮೆಟೊ ಸಾಸ್ ಅಥವಾ ಹಸಿರು ಚಟ್ನಿಯೊಂದಿಗೆ ಸವಿಯಿರಿ. ಜೊತೆಗೆ ಹಬೆಯಾಡುವ ಮಸಾಲಾ ಟೀ ಇದ್ದರೆ ಸಂಜೆಯ ಈ ತಿಂಡಿಯ ರುಚಿ ದುಪ್ಪಟ್ಟಾಗುವುದು ಗ್ಯಾರಂಟಿ.
food mansoon recipes how to make bottle gourd pakoda at home easily in kannada News



