ಇಂದು ಧನ್ತೇರಸ್‌, ಧನ್ವಂತರಿ ಜಯಂತಿ: ಈ ದಿನದ ಮಹತ್ವ ತಿಳಿಯಿರಿ

Dhanteras 2025: ‘ಆರೋಗ್ಯಂ ಧನ ಸಂಪದಂ’ ಅಂದರೆ ಆರೋಗ್ಯವೇ ನಮ್ಮ ದೊಡ್ಡ ಸಂಪತ್ತು. ಅದೆಷ್ಟೇ ಹಣವಿದ್ದು ಆರೋಗ್ಯವೊಂದಿರದಿದ್ದರೆ ಅದೆಲ್ಲವೂ ವ್ಯರ್ಥ. ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಯಾವುದೂ ಇಲ್ಲ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ನಮ್ಮ ಪುರಾಣಗಳ ಪ್ರಕಾರ ಧನ್ವಂತರಿಯು ಆರೋಗ್ಯವನ್ನು ಕರುಣಿಸುವ ದೇವರು.

ಆಶ್ವಯುಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಂದು ಧನ್ವಂತರಿ ದೇವರ ಜಯಂತಿಯನ್ನು ಆಚರಿಸಲಾಗುತ್ತದೆ. ಇದು ಧನ, ಸಮೃದ್ಧಿ ಮತ್ತು ಆರೋಗ್ಯದ ಮಹತ್ವವನ್ನು ಸಾರುವ ದಿನವಾಗಿದೆ. ಈ ದಿನವನ್ನು ಧನ ತ್ರಯೋದಶಿ ಅಥವಾ ಧನ್ತೇರಸ್‌ ಎಂದೂ ಆಚರಿಸಲಾಗುತ್ತದೆ.

ಈ ವರ್ಷ ಧನ್ವಂತರ ಜಯಂತಿ ಹಾಗೂ ಧನ್ತೇರಸ್‌ ಅನ್ನು ಅಕ್ಟೋಬರ್‌ 18 ರಂದು ಆಚರಿಸಲಾಗುತ್ತಿದೆ. ಈ ದಿನ ಮುಖ್ಯವಾಗಿ ಮೂರು ದೇವರುಗಳನ್ನು ಪೂಜಿಸಲಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿ ಮತ್ತು ಕುಬೇರನ ಜೊತೆಗೆ ಆರೋಗ್ಯ ಸಂಪತ್ತನ್ನು ನೀಡುವ ಧನ್ವಂತರಿಯನ್ನು ಪೂಜಿಸಲಾಗುತ್ತದೆ.

ಹಾಗಾದರೆ ಧನ್ತೇರಸ್‌ ದಿನದಂದು ಆರೋಗ್ಯ ಕರುಣಿಸುವ ಧನ್ವಂತರಿ ದೇವರನ್ನು ಏಕೆ ಪೂಜಿಸಲಾಗುತ್ತದೆ? ಎಂದು ತಿಳಿಯೋಣ.

ಧನ್ವಂತರಿ ದೇವರು ಯಾರು?

ಕ್ಷೀರಸಾಗರವನ್ನು ಮಂಥನ ಮಾಡಿದಾಗ ಅದರಿಂದ ಅಮೃತ ಕಲಶವನ್ನು ಹೊತ್ತು ತಂದವನು ಧನ್ವಂತರಿ. ಅವನನ್ನು ಆಯುರ್ವೇದದ ಪಿತಾಮಹ ಮತ್ತು ದೇವತೆಗಳ ವೈದ್ಯ ಎಂದು ಕರೆಯಲಾಯಿತು. ಭಗವಾನ್‌ ಧನ್ವಂತರಿಯು ನಾಲ್ಕು ಕೈಗಳನ್ನು ಹೊಂದಿದ್ದಾನೆ.

ಒಂದರಲ್ಲಿ ಅಮೃತದ ಕಲಶ, ಎರಡನೇ ಕೈಯಲ್ಲಿ ಶಂಖ, ಮೂರನೇ ಕೈಯಲ್ಲಿ ಚಕ್ರ ಹಾಗೂ ನಾಲ್ಕನೇ ಕೈಯಲ್ಲಿ ಗಿಡಮೂಲಿಕೆಯನ್ನು ಹಿಡಿದಿದ್ದಾನೆ. ಅತ್ಯಂತ ಪ್ರಕಾಶಮಾನವಾದ ತೇಜಸ್ಸು ಅವನ ಮುಖದ ಮೇಲೆ ಕಾಣಿಸುತ್ತದೆ.

ಅಮೃತ ಮತ್ತು ಗಿಡಮೂಲಕೆಯನ್ನು ಹಿಡಿದಿರುವುದರಿಂದ ಆತನನ್ನು ರೋಗಗಳಿಂದ ಪರಿಹಾರ ನೀಡುವ ಹಾಗೂ ದೀರ್ಘಾಯುಷ್ಯದ ವರವನ್ನು ನೀಡುವ ದೇವರು ಎಂದು ಪರಿಗಣಿಸಲಾಗಿದೆ.

ಧನ್ವಂತರಿ ದೇವರನ್ನು ಪೂಜಿಸುವುದರ ಮಹತ್ವವೇನು?

ಉತ್ತಮ ಆರೋಗ್ಯವೇ ಮಾನವನ ಶ್ರೇಷ್ಠ ಸಂಪತ್ತು. ದೇಹವು ಆರೋಗ್ಯದಿಂದ್ದಾಗ ಮಾತ್ರ ಸಂಪತ್ತನ್ನು ಗಳಿಸಲು ಸಾಧ್ಯ ಜೊತೆಗೆ ಗಳಿಸಿದ ಸಂಪತ್ತನ್ನು ಆನಂದಿಸಲು ಸಾಧ್ಯವಾಗುತ್ತದೆ. ಈ ದಿನವನ್ನು ಧನ್ತೇರಸ್‌ ಎಂದೂ ಆಚರಿಸುತ್ತಾರೆ. ಇದು ಕೇವಲ ಚಿನ್ನ, ಬೆಳ್ಳಿಯನ್ನು ಖರೀದಿಸುವ ಹಬ್ಬವೊಂದೇ ಅಲ್ಲ, ಇದು ಜೀವನದಲ್ಲಿ ಆರೋಗ್ಯವೇ ಅತ್ಯಂತ ಅಮೂಲ್ಯವಾದ ಸಂಪತ್ತು ಎಂದು ತಿಳಿಯುವ ದಿನವಾಗಿದೆ.

ಧನ್ತೇರಸ್‌ ಪೂಜೆಗೆ ಶುಭ ಸಮಯ ಯಾವುದು?

ಧನ್ವಂತರಿ ಜಯಂತಿಯಂದು ಧನ್ತೇರಸ್‌ ಅನ್ನು ಸಹ ಆಚರಿಸಲಾಗುತ್ತದೆ. ಕೆಲವು ಭಾಗಗಳಲ್ಲಿ ಇದು ದೀಪಾವಳಿಯ ಆರಂಭದ ಸಂಕೇತ.

ತ್ರಯೋದಶಿ ತಿಥಿಯು ಅಕ್ಟೋಬರ್ 18, 2025 ರಂದು ಮಧ್ಯಾಹ್ನ 12:18 ರಿಂದ ಪ್ರಾರಂಭವಾಗುತ್ತದೆ.
ತ್ರಯೋದಶಿ ತಿಥಿಯು ಅಕ್ಟೋಬರ್ 19, 2025 ಮಧ್ಯಾಹ್ನ 01:51 ಕ್ಕೆ ಕೊನೆಗೊಳ್ಳುತ್ತದೆ.

ಧನ್ತೇರಸ್‌ ಪೂಜೆಗೆ ಶುಭ ಸಮಯ ಸಂಜೆ 07:15 ರಿಂದ ರಾತ್ರಿ 08:19 ರವರೆಗೆ.
ಪ್ರದೋಷ ಕಾಲದ ಪೂಜೆ: ಸಂಜೆ 05:48 ರಿಂದ 08:19 ರವರೆಗೆ.
ಈ ದಿನ ಯಮ ದೀಪವನ್ನು ಹಚ್ಚಲಾಗುತ್ತದೆ. ಅದನ್ನು ಪ್ರದೋಷ ಕಾಲದಲ್ಲಿ ನೆರವೇರಿಸುತ್ತಾರೆ.

ಧನ್ವಂತರಿ ದೇವರ ಪೂಜೆಗೆ ಮಂತ್ರ

ಓಂ ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಯೇ: ಅಮೃತಕಲಶ ಹಸ್ತಾಯ ಸರ್ವ ಭಯವಿನಾಶಾಯ ಸರ್ವ ರೋಗನಿವಾರಣಾಯ ತ್ರಿಲೋಕಪಥಾಯ ತ್ರಿಲೋಕನಾಥಾಯ ಶ್ರೀ ಮಹಾವಿಷ್ಣುಸ್ವರೂಪ ಶ್ರೀ ಧನ್ವಂತರಿ ಸ್ವರೂಪ ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ನಮಃ ||

ಇದನ್ನೂ ಓದಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಲಕ್ಷ್ಮೀ ಕೃಪಾಕಟಾಕ್ಷ ನಿಮಗೆ ದೊರೆಯಬೇಕೆ : ಹಾಗಿದ್ದಲ್ಲಿ ಈ ವಸ್ತುಗಳನ್ನು ಮನೆಯಿಂದ ದೂರದಲ್ಲಿರಿಸಿ

(what is significant of Dhanvantari Jayanti 2025 and know the puja time and history)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories