ದೇಶದಲ್ಲಿ ನಕಲಿ ಮತ್ತು ಕಳಪೆ ಗುಣಮಟ್ಟದ ಔಷಧಗಳ ಮಾರಾಟ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಕೇಂದ್ರ ಸರ್ಕಾರವು ಜೀವರಕ್ಷಕ ಔಷಧಗಳ ಮೇಲೆ ಕ್ಯೂಆರ್ ಕೋಡ್ ಮುದ್ರಿಸುವುದನ್ನು ಕಡ್ಡಾಯಗೊಳಿಸಿದೆ. ದೇಶದ ಆರೋಗ್ಯ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಔಷಧ ನಿಯಮಾವಳಿ ಕಾಯ್ದೆ 1945 ಕ್ಕೆ ಮಹತ್ವದ ತಿದ್ದುಪಡಿ ತಂದಿದ್ದು, ‘ಶೆಡ್ಯೂಲ್ ಎಚ್2’ ವ್ಯಾಪ್ತಿಯನ್ನು ವಿಸ್ತರಿಸಿದೆ.
ಹೊಸ ಆದೇಶದ ಅನ್ವಯ, ಇನ್ನು ಮುಂದೆ ಭಾರತದಲ್ಲಿ ತಯಾರಾಗುವ ಎಲ್ಲಾ ವಿಧದ ಲಸಿಕೆಗಳು, ಜೀವರಕ್ಷಕ ಕ್ಯಾನ್ಸರ್ ನಿರೋಧಿ ಔಷಧಗಳು ಮತ್ತು ಎನ್ಡಿಪಿಎಸ್ ಕಾಯ್ದೆಯಡಿ ಬರುವ ಸೈಕೋಟ್ರೋಪಿಕ್ ಮಾದಕ ದ್ರವ್ಯಗಳ ಪ್ಯಾಕೇಜಿಂಗ್ ಮೇಲೆ ಕಡ್ಡಾಯವಾಗಿ ಬಾರ್ ಕೋಡ್ ಅಥವಾ ಕ್ಯೂಆರ್ ಕೋಡ್ ಅಳವಡಿಸಬೇಕಾಗುತ್ತದೆ. ಔಷಧ ತಯಾರಕರು ತಮ್ಮ ಉತ್ಪನ್ನಗಳ ಪ್ರಾಥಮಿಕ ಲೇಬಲ್ ಮೇಲೆ ಅಥವಾ ಸ್ಥಳಾವಕಾಶದ ಕೊರತೆಯಿದ್ದರೆ ದ್ವಿತೀಯ ಲೇಬಲ್ ಮೇಲೆ ಇದನ್ನು ಮುದ್ರಿಸಬೇಕಿದೆ.
Also Read: ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಬಿಗ್ ರಿಲೀಫ್ : ವಾಣಿಜ್ಯ ಸಿಲಿಂಡರ್ಗಳ ಮೇಲಿದ್ದ ನಿರ್ಬಂಧ ಕೊನೆಗೂ ತೆರವು
ಗ್ರಾಹಕರು ಮತ್ತು ಫಾರ್ಮಾಸಿಸ್ಟ್‌ಗಳು ಸಾಫ್ಟ್‌ವೇರ್ ಆಪ್ಲಿಕೇಶನ್‌ಗಳ ಮೂಲಕ ಇದನ್ನು ಸ್ಕ್ಯಾನ್ ಮಾಡಿ ಔಷಧದ ಅಸಲಿಯತ್ತನ್ನು ಪರಿಶೀಲಿಸಬಹುದು. ಈ ಕೋಡ್ ಒಳಗಡೆ ಔಷಧದ ಬ್ರಾಂಡ್ ಹೆಸರು, ಬ್ಯಾಚ್ ಸಂಖ್ಯೆ, ತಯಾರಕರ ವಿಳಾಸ, ಉತ್ಪಾದನಾ ಪರವಾನಗಿ, ತಯಾರಿಕೆ ಮತ್ತು ಅವಧಿ ಮುಗಿಯುವ ದಿನಾಂಕದಂತಹ ಪ್ರಮುಖ ವಿವರಗಳು ಅಡಕವಾಗಿರಲಿವೆ.
ಈ ಹಿಂದೆ ಕೇವಲ 300 ಪ್ರಮುಖ ಬ್ರಾಂಡ್‌ಗಳಿಗೆ ಮಾತ್ರ ಈ ನಿಯಮ ಅನ್ವಯವಾಗಿತ್ತು. ಆದರೆ ಈಗ ವ್ಯಾಪ್ತಿಯನ್ನು ವಿಸ್ತರಿಸಿರುವುದರಿಂದ ನಕಲಿ ಆಂಟಿಬಯೋಟಿಕ್‌ಗಳ ಬಳಕೆಯನ್ನು ಪತ್ತೆಹಚ್ಚಲು ಸುಲಭವಾಗಲಿದೆ. ಅಲ್ಲದೆ ಇದು ರೋಗಾಣುಗಳ ಪ್ರತಿರೋಧಕ ಶಕ್ತಿ ವೃದ್ಧಿಸುವ ಜಾಗತಿಕ ಆರೋಗ್ಯ ಸಮಸ್ಯೆಯ ವಿರುದ್ಧದ ಹೋರಾಟಕ್ಕೂ ಬಲ ನೀಡಲಿದೆ.
ಫಾರ್ಮಾ ಉದ್ಯಮಗಳಿಗೆ ಈ ವ್ಯವಸ್ಥೆಗೆ ಹೊಂದಿಕೊಳ್ಳಲು ಸರ್ಕಾರ ಕಾಲಾವಕಾಶ ನೀಡಿದ್ದು, ಲಸಿಕೆ ಮತ್ತು ಕ್ಯಾನ್ಸರ್ ಔಷಧಗಳಿಗೆ ಜುಲೈ 1, 2027 ರಿಂದ ಹಾಗೂ ಆಂಟಿಮೈಕ್ರೋಬಿಯಲ್ ಔಷಧಗಳಿಗೆ ಜುಲೈ 1, 2028 ರಿಂದ ಈ ಹೊಸ ನಿಯಮಗಳು ಕಡ್ಡಾಯವಾಗಿ ಜಾರಿಗೆ ಬರಲಿವೆ ಎಂದು ಸಚಿವಾಲಯ ತಿಳಿಸಿದೆ.
Breaking the scourge of fake medicines in the country QR Code mandatory on vaccines and cancer drugs



