ಭೂಮಿ ಯೋಜನೆ : ಅರ್ಜಿ ವಿಲೇವಾರಿಯಲ್ಲಿ ಶಿರಸಿಗೆ ರಾಜ್ಯಕ್ಕೆ ಪ್ರಥಮ

ಶಿರಸಿ: ಭೂಮಿ ಯೋಜನೆಯ (Bhoomi project) ಅರ್ಜ ವಿಲೇವಾರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಶಿರಸಿ ಅದ್ವಿತೀಯ ಸಾಧನೆ ಮಾಡಿದೆ.
ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಭೂಮಿ ಯೋಜನೆಯಡಿ ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿಗಳನ್ನು ತ್ವರಿತವಾಗಿ ಮತ್ತು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡುವಲ್ಲಿ ಶಿರಸಿ ತಾಲೂಕು ಕಂದಾಯ ಕಚೇರಿ ರಾಜ್ಯಮಟ್ಟದಲ್ಲಿಯೇ ಅತ್ಯುನ್ನತ ಸಾಧನೆ ಮಾಡಿದೆ.
ಈ ಮೂಲಕ ಶಿರಸಿ ಕಂದಾಯ ಕಚೇರಿ ತನ್ನ ಕಾರ್ಯವೈಖರಿಗಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಕ್ಟೋಬರ್ 2025ರ ಮಾಹೆಯ ಕಾರ್ಯಕ್ಷಮತೆಯನ್ನು ಆಧರಿಸಿ ಇಲಾಖೆಯು ಬಿಡುಗಡೆ ಮಾಡಿದ ಶ್ರೇಯಾಂಕದಲ್ಲಿ, ಶಿರಸಿ ತಾಲೂಕು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಗಮನ ಸೆಳೆದಿದೆ.
ಅಕ್ಟೋಬರ್ ತಿಂಗಳಲ್ಲಿ ಸ್ವೀಕೃತವಾದ ಅರ್ಜಿಗಳನ್ನು ವಿಲೇವಾರಿ ಮಾಡಿದ ಸೂಚ್ಯಂಕದಲ್ಲಿ ಶಿರಸಿ ತಾಲೂಕು ಬರೋಬ್ಬರಿ 5.348 ಅಂಕಗಳನ್ನು ಗಳಿಸಿದೆ. ಈ ಅಂಕವು ಕಚೇರಿಯು ನಾಗರಿಕ ಸೇವೆಗಳನ್ನು ಎಷ್ಟು ಪರಿಣಾಮಕಾರಿಯಾಗಿ, ವಿಳಂಬವಿಲ್ಲದೆ ಒದಗಿಸಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
ಸಾರ್ವಜನಿಕ ಸೇವೆಗಳ ಅನುಷ್ಠಾನದಲ್ಲಿ ತಹಶೀಲ್ದಾರ್ ಮತ್ತು ಅವರ ಸಂಪೂರ್ಣ ಕಚೇರಿ ಸಿಬ್ಬಂದಿ ವರ್ಗವು ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಿದ್ದು ಈ ಸಾಧನೆಗೆ ಕಾರಣವಾಗಿದೆ.
ಶಿರಸಿ ತಾಲೂಕಿನ ಈ ಉತ್ತಮ ಸಾಧನೆಯನ್ನು ಕಂದಾಯ ಇಲಾಖೆಯು ಗಂಭೀರವಾಗಿ ಪರಿಗಣಿಸಿ, ತಹಶೀಲ್ದಾರ್ ಪಟ್ಟರಾಜ ಗೌಡ ಮತ್ತು ಅವರ ಸಮರ್ಥ ತಂಡದ ಕಾರ್ಯವೈಖರಿಗೆ ಮುಕ್ತಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿ,
ಉತ್ತರ ಕನ್ನಡ ಜಿಲ್ಲೆಯ ಇತರ ತಾಲೂಕುಗಳು ಶಿರಸಿಯ ಕಾರ್ಯವೈಖರಿಯನ್ನು ಮಾದರಿಯಾಗಿ ತೆಗೆದುಕೊಳ್ಳುವಂತೆ ಇಲಾಖೆಯು ಪ್ರೇರೇಪಿಸಿದೆ.
Bhoomi project: sirsi becomes first in the state in processing applications



