Online Jobs : ಆನ್‌ಲೈನ್‌ ಜಾಬ್‌ ಆಮಿಷ : ಮಹಿಳೆಗೆ 10.98 ಲಕ್ಷ ರೂ. ವಂಚನೆ

Online Job Scam : ಕಾರವಾರ: ಮನೆಯಲ್ಲೇ ಕುಳಿತು ಆನ್‌ಲೈನ್ ನಲ್ಲಿ ಉದ್ಯೋಗ ಮಾಡುವ ಮೂಲಕ ನಿತ್ಯವೂ ಸಾವಿರಾರು ರೂಪಾಯಿ ಗಳಿಸಬಹುದು ಅನ್ನೋ ಆಸೆಗೆ ಬಿದ್ದ ಮಹಿಳೆ 10.98 ರೂ. ವಂಚನೆಗೆ ಒಳಗಾಗಿರುವ ಘಟನೆ ಕಾರವಾರದಲ್ಲಿ ನಡೆದಿದೆ.

ವಂಚನೆಯ ಕುರಿತು ಕಾರವಾರದ ಸೈಬರ್ ಕ್ರೈಂ (ಸಿಇಎನ್) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನವೆಂಬರ್‌ 11ರಂದು ಮಹಿಳೆಗೆ ಟೆಲಿಗ್ರಾಮ್ ಆ್ಯಪ್‌ನಲ್ಲಿ “Mishika” ಎಂಬ ಹೆಸರಿನ ಐಡಿಯಿಂದ ಸಂದೇಶವೊಂದು ಬಂದಿತ್ತು.

ಅದರಲ್ಲಿ “ಆನ್‌ಲೈನ್ ಪಾರ್ಟ್ ಟೈಂ ಜಾಬ್ ಇದೆ, ಮನೆಯಲ್ಲೇ ಕುಳಿತು ಪ್ರತಿದಿನ 3,000 ರೂ. ಗಳವರೆಗೆ ಆದಾಯ ಗಳಿಸಬಹುದು” ಎಂದು ನಂಬಿಸಲಾಗಿತ್ತು. ಇದನ್ನು ನಂಬಿ ಆಸಕ್ತಿ ತೋರಿದಾಗ, ವಂಚಕರು ವಾಟ್ಸಾಪ್ ಮೂಲಕ ಸಂಪರ್ಕಿಸಿದ್ದಾರೆ.

ಒಂದು ಲಿಂಕ್ ಕಳುಹಿಸಿ ‘Rent’ ಎಂಬ ವೆಬ್‌ಸೈಟ್‌ಗೆ ಲಾಗಿನ್ ಆಗುವಂತೆ ಸೂಚಿಸಿದ್ದರು. ಅಲ್ಲಿ ವಿವಿಧ ಕಂಪನಿಗಳ ಉತ್ಪನ್ನಗಳಿಗೆ ರೇಟಿಂಗ್ ಮತ್ತು ರಿವ್ಯೂ ನೀಡುವ ಕೆಲಸ ನೀಡಲಾಗಿತ್ತು.

ಇದನ್ನೂ ಓದಿ : ರಾಜ್ಯದಲ್ಲಿ ಮತ್ತೊಮ್ಮೆ ಜಾರಿಯಾಗಲಿದೆ ಶೇಕಡಾ 50 ರಷ್ಟು ದಂಡ ವಿನಾಯಿತಿ

Online Job Scam : ನಂಬಿಸಲು ಲಾಭದ ಆಮಿಷ:

ಆರಂಭದಲ್ಲಿ ಮಹಿಳೆ 10,000 ರೂ. ಹೂಡಿಕೆ ಮಾಡಿದಾಗ, ವಂಚಕರು ವಿಶ್ವಾಸಗಳಿಸಲು ಲಾಭಾಂಶ ಸೇರಿ 15,268 ರೂ.ಗಳನ್ನು ವಾಪಸ್ ನೀಡಿದ್ದರು. ಇದರಿಂದ ಉತ್ತೇಜಿತರಾದ ಅವರಿಗೆ, ಹೆಚ್ಚಿನ ಲಾಭಕ್ಕಾಗಿ ಇನ್ನೂ ಹೆಚ್ಚು ಹಣ ಹೂಡಿಕೆ ಮಾಡಲು ಆರೋಪಿತರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಿಳೆಯು, ಪ್ರಕರಣದ ಇತರ ಇಬ್ಬರು ವ್ಯಕ್ತಿಗಳ ಪ್ರಚೋದನೆಯ ಮೇರೆಗೆ ಹಾಗೂ ಅವರ ಆರ್ಥಿಕ ಸಹಾಯದೊಂದಿಗೆ ಹಂತ ಹಂತವಾಗಿ ವಂಚಕರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 10,98,113 ರೂ.ಗಳನ್ನು ವರ್ಗಾಯಿಸಿದ್ದಾರೆ.

ಇಷ್ಟೊಂದು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದ ನಂತರ ಯಾವುದೇ ಲಾಭಾಂಶವಾಗಲಿ ಅಥವಾ ಅಸಲು ಹಣವಾಗಲಿ ಬಾರದೇ ಇದ್ದಾಗ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ.

ಈ ಸಂಬಂಧ ಕಾರವಾರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ಮೊಬೈಲ್ ಬಳಕೆದಾರ ಹಾಗೂ ಇತರ ಇಬ್ಬರು ವ್ಯಕ್ತಿಗಳ ವಿರುದ್ಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬರುವ ‘ಪಾರ್ಟ್ ಟೈಂ ಜಾಬ್’, ‘ಮನೆಯಲ್ಲೇ ಕುಳಿತು ಸುಲಭವಾಗಿ ಹಣ ಗಳಿಸಿ’ ಎಂಬಂತಹ ಸಂದೇಶಗಳನ್ನು ನಂಬಿ ಅಪರಿಚಿತರಿಗೆ ಹಣ ವರ್ಗಾವಣೆ ಮಾಡದಂತೆ ಮತ್ತು ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Woman Loses Over ₹10 Lakh in Online Job Scam Karwar

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories