ಬೀದಿ ನಾಯಿಗಳಿಗೆ ಶೀಘ್ರದಲ್ಲೇ ಬಿರಿಯಾನಿ ಭಾಗ್ಯ : ಜಿಬಿಎ ಶ್ವಾನಗಳ ನಿರ್ವಹಣೆಗೆ ಪ್ರಾಣಿದಯಾ ಸಂಘ ಅಸಮಾಧಾನ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಜೋರಾಗಿದೆ. ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಿರುವ ಜಿಬಿಎ ದಿನಕ್ಕೊಂದು ಹರಸಾಹಸ ಪಡುತ್ತಿದೆ. ಈ ಎಲ್ಲದರ ನಡುವೆ ಇದೀಗ ಶ್ವಾನಗಳಿಗೆ ಮತ್ತೊಮ್ಮೆ ಬಿರಿಯಾನಿ ಭಾಗ್ಯ ಒದಗಿಸುವ ವಿಚಾರ ಬೆಳಕಿಗೆ ಬಂದಿದೆ. ಈ ಬಾರಿ ಒಂದಲ್ಲ, ಬದಲಾಗಿ 2 ಬಾರಿ ಚಿಕನ್ ಬಿರಿಯಾನಿ ಸವಿಯುವ ಭಾಗ್ಯ ಬೀದಿ ನಾಯಿಗಳಿಗೆ ಬಂದೊದಗಿದೆ.
ಮೊದಲೆಲ್ಲ ಒಂದು ಹೊತ್ತಿನ ಊಟಕ್ಕೆ ಒಂದು ಶ್ವಾನಕ್ಕೆ 22 ರೂಪಾಯಿಗಳಂತೆ ನಿಗದಿಪಡಿಸಿ ಚಿಕನ್ ಬಿರಿಯಾನಿ ತಯಾರಿಸಲಾಗುತ್ತಿತ್ತು. ಆದರೆ ಇದೀಗ ಒಂದೊತ್ತಿನ ಊಟದ ಬೆಲೆಯನ್ನು 25 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಈ ಮೂಲಕ ಒಂದು ಶ್ವಾನವು ದಿನಕ್ಕೆ 50 ರೂಪಾಯಿ ಮೌಲ್ಯದ ಚಿಕನ್ ಬಿರಿಯಾನಿಯನ್ನು ಸವಿಯಲಿದೆ. ಇದರ ಜೊತೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಜಿಬಿಎ ನಾಯಿಗಳಿಗೆ ಶೆಲ್ಟರ್ ವ್ಯವಸ್ಥೆ ಕೂಡ ಮಾಡಿಕೊಳ್ಳುತ್ತಿದೆ.
ಇನ್ನು ಬೀದಿ ನಾಯಿಗಳಿಗೆ ಒಂದು ಹೊತ್ತಿನ ಬಿರಿಯಾನಿಗೆ 150 ಗ್ರಾಂ ಅಕ್ಕಿ ಹಾಗೂ 100 ಗ್ರಾಂ ಚಿಕನ್ ಒದಗಿಸಲಾಗುತ್ತದೆ. ಇದರಿಂದ ಮಾಸಿಕ 3035 ರೂಪಾಯಿ ಖರ್ಚಾಗಲಿದೆ. ಜೊತೆಯಲ್ಲಿ ಸ್ವಚ್ಛತೆ, ಔಷಧಿ ಹಾಗೂ ಸಿಬ್ಬಂದಿಯ ವೇತನ ಸೇರಿದಂತೆ ಒಂದು ತಿಂಗಳಿಗೆ ಸುಮಾರು 66 ಲಕ್ಷ 95 ಸಾವಿರ ರೂಪಾಯಿ ಖರ್ಚಾಗಲಿದೆ ಎಂದು ಜಿಬಿಎ ಸರ್ಕಾರಕ್ಕೆ ಲೆಕ್ಕ ನೀಡಿದೆ. ಈ ಲೆಕ್ಕದ ಪ್ರಕಾರ ಹೋದರೆ ಒಂದು ವರ್ಷದಲ್ಲಿ ಜಿಬಿಎ ಕೇವಲ ಶ್ವಾನಗಳ ನಿರ್ವಹಣೆಗೆಂದೇ 8.5 ಕೋಟಿ ರೂಪಾಯಿ ಮೀಸಲಿರಿಸಬೇಕಿದೆ .
ಇದನ್ನೂ ಓದಿ: ರಾಜ್ಯದ ಬೀಡಿ ಕಾರ್ಮಿಕರಿಗೆ ಶೀಘ್ರದಲ್ಲೇ ಶುಭಸುದ್ದಿ : ತಿಂಗಳಾಂತ್ಯದೊಳಗೆ ಕನಿಷ್ಟ ವೇತನ ನಿಗದಿ
ಆದರೆ ಜಿಬಿಎ ವಿರುದ್ಧ ಪ್ರಾಣಿದಯಾ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಬೀದಿ ನಾಯಿಗಳ ನಿರ್ವಹಣೆಗೆ ಸರಿಯಾದ ಶೆಲ್ಟರ್ ನಿರ್ಮಾಣ ಮಾಡಿಲ್ಲ. ನಾಯಿಗಳನ್ನು ಸೆರೆಹಿಡಿಯುವಾಗ ಅವಳಿಗೆ ಗಾಯ ಮಾಡುವ ಸಿಬ್ಬಂದಿ ಕನಿಷ್ಠ ಚಿಕಿತ್ಸೆಯನ್ನೂ ಕೊಡಿಸದೇ ಹಾಗೆಯೇ ಬಿಡುತ್ತಾರೆ. ಶ್ವಾನಗಳ ನಿರ್ವಹಣೆಗೆ ವರ್ಷಕ್ಕೆ 8 ಕೋಟಿಗೂ ಅಧಿಕ ಹಣ ವ್ಯಯಿಸುತ್ತಿರುವ ಬಗ್ಗೆ ಸರ್ಕಾರಕ್ಕೆ ಜಿಬಿಎ ಲೆಕ್ಕ ಕೊಡ್ತಿದೆ. ಆದರೆ ಇದು ಹಣ ಮಾಡಲು ಜಿಬಿಎ ಅಧಿಕಾರಿಗಳು ಮಾಡಿರುವ ಷಡ್ಯಂತ್ರ ಎಂದು ಕಿಡಿಕಾರಿದೆ



