ವಾರ ಕಳೆದರೂ ಮುಗಿಯದ ಇಂಡಿಗೊ ಅವ್ಯವಸ್ಥೆ : 500ಕ್ಕೂ ಅಧಿಕ ವಿಮಾನಯಾನ ರದ್ದು
IndiGo Chaos: ಒಂದು ವಾರಗಳೇ ಕಳೆಯುತ್ತಾ ಬಂದರೂ ಇಂಡಿಗೊ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ಮಾತ್ರ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಪೈಲಟ್ ಡ್ಯೂಟಿ ನಿಯಮಗಳೂ ಹಾಗೂ ಆಂತರಿಕ ಯೋಜನೆಗಳ ದೋಷದಿಂದಾಗಿ ಸೋಮವಾರ ಕೂಡ ವಿಮಾನಯಾನ ವ್ಯತ್ಯಯ ಮುಂದುವರಿದಿದ್ದು 500ಕ್ಕೂ ಅಧಿಕ ವಿಮಾನಗಳು ರದ್ದಾಗಿವೆ.
ಬೆಂಗಳೂರಿನಲ್ಲಿ ಸೋಮವಾರಂದು 127 ಇಂಡಿಯೋ ವಿಮಾನಗಳು ರದ್ದಾಗಿವೆ. ದೆಹಲಿಯಲ್ಲಿ 134 ಹಾಗೂ ಹೈದರಾಬಾದ್ನಲ್ಲಿ 77 ವಿಮಾನಯಾನ ಸೇವೆ ರದ್ದು ಮಾಡಲಾಗಿದೆ. ಇನ್ನುಳಿದಂತೆ ಮುಂಬೈ, ಚೆನ್ನೈ ಹಾಗೂ ಜೈಪುರದಲ್ಲಿಯೂ ಇದೇ ಸಮಸ್ಯೆ ಮುಂದುವರಿದಿದೆ. ಇನ್ನು ನವೆಂಬರ್ 21ರಿಂದ ಡಿಸೆಂಬರ್ 7ರ ನಡುವೆ ರದ್ದಾಗಿರುವ ವಿಮಾನಯಾನ ಟಿಕೆಟ್ನ ರಿಫಂಡ್ ಪ್ರಕ್ರಿಯೆ ಮುಂದುವರಿದಿದೆ. ಇಂಡಿಗೋ ಸಂಸ್ಥೆಯು ಈವರೆಗೆ 827 ಕೋಟಿ ರೂಪಾಯಿಗಳನ್ನು ಪ್ರಯಾಣಿಕರಿಗೆ ಮರುಪಾವತಿ ಮಾಡಿದೆ.
ಇದನ್ನೂ ಓದಿ: ಶಬರಿಮಲೆ ಭಕ್ತಾದಿಗಳಿಗೆ ಶುಭ ಸುದ್ದಿ : ರೈಲ್ವೆ ಇಲಾಖೆಯಿಂದ ಕರ್ನಾಟಕ – ಕೇರಳ ವಿಶೇಷ ರೈಲು
ಈ ಎಲ್ಲದರ ನಡುವೆ ವಿಮಾನಗಳ ರದ್ದತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಇಲ್ಲ ಎಂದಿದೆ. ಕೇಂದ್ರ ಸರ್ಕಾರವೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಇರುವಾಗ ನ್ಯಾಯಾಂಗದ ಮಧ್ಯಪ್ರವೇಶದ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಇತ್ತ ಪ್ರಯಾಣಿಕರ ಲಗೇಜ್ ವಿಲೇವಾರಿ ವಿಚಾರದಲ್ಲಿಯೂ ಸಾಕಷ್ಟು ಸಮಸ್ಯೆ ಉಂಟಾಗಿದೆ. 48 ಗಂಟೆಗಳ ಒಳಗಾಗಿ ಪ್ರಯಾಣಿಕರ ಲಗೇಜ್ಗಳನ್ನು ಅವರ ಕೈಗೆ ಹಸ್ತಾಂತರಿಸುವಂತೆ ಇಂಡಿಗೋ ಸಂಸ್ಥೆಗೆ ಕೇಂದ್ರ ಸರ್ಕಾರ ತಾಕೀತು ಮಾಡಿದೆ. ಈ ವರೆಗೆ 4500 ಬ್ಯಾಗುಗಳನ್ನು ಇಂಡಿಗೋ ಸಂಸ್ಥೆ ಪ್ರಯಾಣಿಕರಿಗೆ ನೀಡಿದೆ. ಇನ್ನೂ ಇಷ್ಟೇ ಸಂಖ್ಯೆಯ ಬ್ಯಾಗುಗಳ ಹಸ್ತಾಂತರ ಪ್ರಕ್ರಿಯೆ ನಡೆಯಬೇಕಿದ್ದು ಮುಂದಿನ 36 ಗಂಟೆಗಳ ಒಳಗಾಗಿ ಈ ಕಾರ್ಯವನ್ನು ಮಾಡಿಮುಗಿಸುವ ಗುರಿಯನ್ನು ಇಂಡಿಗೋ ವಿಮಾನಯಾನ ಸಂಸ್ಥೆ ಹೊಂದಿದೆ.



