ಬಾಂಗ್ಲಾದೇಶದ ಭಾರತ ವಿರೋಧಿ ನಾಯಕನ ಹತ್ಯೆ; ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ
ಬಾಂಗ್ಲಾದೇಶದ ರಾಜಕೀಯದಲ್ಲಿ (Bangladesh Politics) ಸಂಚಲನ ಮೂಡಿಸಿದ್ದ ತೀವ್ರಗಾಮಿ ಭಾರತ ವಿರೋಧಿ ವಿದ್ಯಾರ್ಥಿ ನಾಯಕ ಹಾಗೂ ಭಾರತ ವಿರೋಧಿ ಶರೀಫ್ ಉಸ್ಮಾನ್ ಹಾದಿ (Sharif Osman Hadi) ನಿಧನದ ನಂತರ ಬಾಂಗ್ಲಾದೇಶದ ರಾಜಧಾನಿ ಢಾಕಾ ಸೇರಿದಂತೆ ಹಲವು ನಗರಗಳಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿದೆ. ಈ ಕುರಿತಾದ ಪ್ರಮುಖ ವಿವರಗಳು ಇಲ್ಲಿವೆ:
ಯಾರೀ ಶರೀಫ್ ಉಸ್ಮಾನ್ ಹಾದಿ?
32 ವರ್ಷದ ಶರೀಫ್ ಉಸ್ಮಾನ್ ಹಾದಿ, ಬಾಂಗ್ಲಾದೇಶದ ‘ಇಂಕಿಲಾಬ್ ಮಂಚ್’ (Inqilab Mancha) ಸಂಘಟನೆಯ ವಕ್ತಾರನಾಗಿದ್ದ. 2024ರ ಜುಲೈನಲ್ಲಿ ಶೇಖ್ ಹಸೀನಾ ಸರ್ಕಾರವನ್ನು ಪದಚ್ಯುತಗೊಳಿಸಿದ ವಿದ್ಯಾರ್ಥಿ ಚಳವಳಿಯಲ್ಲಿ ಇವರು ಮುಂಚೂಣಿಯಲ್ಲಿದ್ದ. ಭಾರತದ ಈಶಾನ್ಯ ರಾಜ್ಯಗಳನ್ನು ಒಳಗೊಂಡ ವಿವಾದಾತ್ಮಕ ‘ಗ್ರೇಟರ್ ಬಾಂಗ್ಲಾದೇಶ’ (Greater Bangladesh) ನಕ್ಷೆಯನ್ನು ಹಂಚುವ ಮೂಲಕ ಭಾರತದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ.
ಘಟನೆಯ ಹಿನ್ನೆಲೆ
ಕಳೆದ ವಾರ (ಡಿಸೆಂಬರ್ 12, 2025) ಢಾಕಾದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಹಾದಿ ಅವರ ತಲೆಗೆ ಗುಂಡು ಹಾರಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಹಾದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 18ರಂದು ನಿಧನರಾಗಿದ್ದಾನೆ.
ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
ಹಾದಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಢಾಕಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದ ಪರ ಒಲವು ಹೊಂದಿವೆ ಎನ್ನಲಾದ ‘ಡೈಲಿ ಸ್ಟಾರ್’ ಮತ್ತು ‘ಪ್ರಥಮ್ ಅಲೋ’ ಪತ್ರಿಕಾ ಕಚೇರಿಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.
ಇದನ್ನೂ ಓದಿ: ಜಿಯೋ ಹ್ಯಾಪಿ ಇಯರ್ ಆಫರ್
ಭಾರತ ವಿರೋಧಿ ಘೋಷಣೆ: ಹಾದಿ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಭಾರತೀಯ ಹೈಕಮಿಷನ್ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅವಾಮಿ ಲೀಗ್ ಪಕ್ಷದ ಕಚೇರಿಗಳು ಮತ್ತು ಶೇಖ್ ಮುಜಿಬುರ್ ರೆಹಮಾನ್ ಅವರ ಸ್ಮಾರಕಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಲಾಗಿದೆ.
ಸರ್ಕಾರದ ಪ್ರತಿಕ್ರಿಯೆ
ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್, ಹಾದಿ ಅವರನ್ನು “ಜುಲೈ ಕ್ರಾಂತಿಯ ಅಪ್ರತಿಮ ಯೋಧ” ಎಂದು ಬಣ್ಣಿಸಿದ್ದಾರೆ. ಹಾದಿ ಗೌರವಾರ್ಥ ಶನಿವಾರ ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದ್ದು, ಹಂತಕರನ್ನು ಶೀಘ್ರವೇ ಬಂಧಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಸದ್ಯ ಢಾಕಾದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪರಿಸ್ಥಿತಿ ಸ್ಫೋಟಕವಾಗಿದೆ.



