ಆಪರೇಷನ್‌ ಸಿಂಧೂರ್‌ ಹೊಗಳಿದ ಪಾಕ್‌ ರಾಜಕಾರಣಿ! ಭಾರತ ಮಾಡಿದ್ದು ಸರಿ ಎಂದ ಮೌಲಾನಾ ಫಜ್ಲರ್ ರೆಹಮಾನ್

Operation Sindoor: ಇಸ್ಲಾಮಾಬಾದ್/ಕರಾಚಿ: ಗಡಿಯಾಚೆಗಿನ ದಾಳಿಗಳ ವಿಷಯದಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಸೇನೆಯು ಅನುಸರಿಸುತ್ತಿರುವ ವಿಭಿನ್ನ ನಿಲುವುಗಳನ್ನು ಪಾಕಿಸ್ತಾನದ ಹಿರಿಯ ರಾಜಕಾರಣಿ ಹಾಗೂ ಜಮಿಯತ್ ಉಲೇಮಾ-ಎ-ಇಸ್ಲಾಂ-ಎಫ್ (JUI-F) ಮುಖ್ಯಸ್ಥ ಮೌಲಾನಾ ಫಜ್ಲರ್ ರೆಹಮಾನ್ ಕಟುವಾಗಿ ಟೀಕಿಸಿದ್ದಾರೆ. ಕರಾಂಚಿಯ ಲಿಯಾರಿಯಲ್ಲಿ ನಡೆದ ಧಾರ್ಮಿಕ ವಿದ್ವಾಂಸರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಫ್ಘಾನಿಸ್ತಾನದ ಮೇಲೆ ಪಾಕ್ ಸೇನೆ ನಡೆಸುತ್ತಿರುವ ದಾಳಿಗಳನ್ನು ಕಟುವಾಗಿ ಪ್ರಶ್ನಿಸಿದ್ದಾರೆ.

ಸೇನೆಯ ಇಬ್ಬಂದಿ ಧೋರಣೆ:
“ನಾವು ಶತ್ರುಗಳನ್ನು ಮಟ್ಟಹಾಕಲು ಅಫ್ಘಾನಿಸ್ತಾನದೊಳಗೆ ದಾಳಿ ನಡೆಸುತ್ತಿರುವುದು ಸರಿಯಾದ ಕ್ರಮ ಎಂದು ನೀವು ಹೇಳುತ್ತೀರಿ. ಆದರೆ, ಅದೇ ತರ್ಕವನ್ನು ಬಳಸಿ ಭಾರತವು ಬಹಾವಲ್ಪುರ್ ಮತ್ತು ಮುರಿದ್ಕೆಯಂತಹ ಪ್ರದೇಶಗಳಲ್ಲಿರುವ ತನ್ನ ಶತ್ರುಗಳ ಮೇಲೆ ದಾಳಿ ನಡೆಸಿದಾಗ (ಆಪರೇಷನ್ ಸಿಂದೂರ್) ನೀವು ಯಾಕೆ ಆಕ್ಷೇಪ ವ್ಯಕ್ತಪಡಿಸುತ್ತೀರಿ?” ಎಂದು ರೆಹಮಾನ್ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರನ್ನು ಪ್ರಶ್ನಿಸಿದ್ದಾರೆ.

ನೈತಿಕ ಹಕ್ಕಿಲ್ಲ:
ಒಂದು ದೇಶಕ್ಕೆ ಅನ್ವಯವಾಗುವ ನಿಯಮಗಳು ನಮಗೂ ಅನ್ವಯವಾಗಬೇಕು. ಅಫ್ಘಾನಿಸ್ತಾನದ ಸಾರ್ವಭೌಮತ್ವವನ್ನು ಉಲ್ಲಂಘಿಸಿ ನಾವು ದಾಳಿ ಮಾಡುತ್ತಿರುವಾಗ, ಭಾರತವು ನಮ್ಮ ನೆಲದ ಮೇಲಿನ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ನಡೆಸುವ ಕಾರ್ಯಾಚರಣೆಯನ್ನು ವಿರೋಧಿಸುವ ನೈತಿಕ ಹಕ್ಕನ್ನು ಪಾಕಿಸ್ತಾನ ಕಳೆದುಕೊಂಡಿದೆ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ಆಪರೇಷನ್ ಸಿಂದೂರ್ ಉಲ್ಲೇಖ:
2025ರ ಮೇ ತಿಂಗಳಲ್ಲಿ ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ನಡೆಸಿದ್ದ ‘ಆಪರೇಷನ್ ಸಿಂದೂರ್’ ಬಗ್ಗೆ ಪಾಕಿಸ್ತಾನದ ಒಳಗಡೆಯೇ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಈ ಕಾರ್ಯಾಚರಣೆಯು ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯಕ್ಕೆ ದೊಡ್ಡ ಹೊಡೆತ ನೀಡಿತ್ತು ಎಂಬ ಅಂಶವನ್ನು ರೆಹಮಾನ್ ಅವರ ಮಾತುಗಳು ಪರೋಕ್ಷವಾಗಿ ಪುಷ್ಟೀಕರಿಸಿವೆ.

ಪಾಕಿಸ್ತಾನದ ವಿದೇಶಾಂಗ ನೀತಿಯು ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದ ಅವರು, “ಝಾಹಿರ್ ಶಾ ಕಾಲದಿಂದ ಅಶ್ರಫ್ ಘನಿಯವರೆಗೆ ಯಾವುದೇ ಅಫ್ಘಾನ್ ಸರ್ಕಾರವು ಪಾಕಿಸ್ತಾನದೊಂದಿಗೆ ಸೌಹಾರ್ದಯುತವಾಗಿರಲಿಲ್ಲ. ಇದಕ್ಕೆ ಅಫ್ಘಾನಿಸ್ತಾನವನ್ನು ದೂಷಿಸುವ ಬದಲು ನಮ್ಮ ನೀತಿಗಳಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.

ಇದನ್ನೂ ಓದಿ: Karungali Mala: ಯಾರಾದ್ರೂ ಗಿಫ್ಟ್‌ ಕೊಟ್ರು ಅಂತ ಈ ಮಾಲೆ ಹಾಕೋಬೇಡಿ! ಅಪಾಯ ಎದುರಾದೀತು!!

ಇತ್ತೀಚೆಗೆ ಪಾಕಿಸ್ತಾನವು ಅಫ್ಘಾನಿಸ್ತಾನದ ಗಡಿಯೊಳಗೆ ವೈಮಾನಿಕ ದಾಳಿಗಳನ್ನು ನಡೆಸಿತ್ತು. ಈ ದಾಳಿಯಲ್ಲಿ ಹಲವಾರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ತಾಲಿಬಾನ್ ಸರ್ಕಾರ ಆರೋಪಿಸಿತ್ತು. ಈ ಘಟನೆಯನ್ನು ಖಂಡಿಸಿರುವ ಫಜ್ಲರ್ ರೆಹಮಾನ್, ಪಾಕಿಸ್ತಾನ ಸೇನೆಯು ಜನಸಾಮಾನ್ಯರ ಮೇಲೆ ಅಧಿಕಾರ ಚಲಾಯಿಸುವುದನ್ನು ಬಿಟ್ಟು ಸಾಂವಿಧಾನಿಕ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಎಚ್ಚರಿಸಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories