ಯು.ಟಿ ಖಾದರ್ ಸಿಎಂ ಆಗಬೇಕೆಂದ ಬಿಜೆಪಿ ಶಾಸಕ ಸುರೇಶ್ ಶೆಟ್ಟಿ : ಬಿಜೆಪಿ ಕಾರ್ಯಕರ್ತರಿಂದ ಆಕ್ರೋಶ

MLA Suresh Shetty Khader : ಉಡುಪಿ : ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಅವರನ್ನು ಹೊಗಳುವ ಭರದಲ್ಲಿ ಕಾಪು ಬಿಜೆಪಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಯು.ಟಿ ಖಾದರ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರುವುದನ್ನು ನೋಡಲು ಇಚ್ಛಿಸುತ್ತೇನೆ. ಇದು ನನ್ನ ಕನಸು. ಮಾತ್ರವಲ್ಲ ಇದನ್ನು ನನಸಾಗಿಸಿಗಲು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆಂದು ಹೇಳಿಕೆ ನೀಡುವ ಮೂಲಕ ಗುರ್ಮೆ ಸುರೇಶ್ ಶೆಟ್ಟಿ ಉಡುಪಿ ಹಾಗೂ ದಕ್ಷಿಣ ಕನ್ನಡ ಭಾಗದ ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕರ್ನಾಟಕದ ವಿಧಾನಸಭೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಸಾಮರ್ಥ್ಯ ಹೊಂದಿರುವವರು ಯುಟಿ ಖಾದರ್ ಎನ್ನುವ ಮೂಲಕ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಮ್ಮ ಭಾಷಣ ಆರಂಭಿಸಿದ್ದರು. ಖಾದರ್ ಒಬ್ಬ ಉದಾತ್ತ ರಾಜಕಾರಣಿ. ಅವರ ತಂದೆ ಯು.ಟಿ ಫರೀದ್ ಕೂಡ ದಯಾಳು ನಾಯಕರಾಗಿದ್ದರು. ಖಾದರ್ ಕೂಡ ತಂದೆಯ ಹಾದಿಯಲ್ಲಿಯೇ ಸಾಗುತ್ತಿದ್ದಾರೆ.
Also Read : ಸಿದ್ದಾಪುರ: ಆಯಿಲ್ ಮಿಲ್ನಲ್ಲಿ ಬಾರೀ ಅಗ್ನಿ ಅವಘಡ, ಲಕ್ಷಾಂತರ ಮೌಲ್ಯದ ನಷ್ಟ
ಅದೇ ಮಾದರಿಯ ರಾಜಕೀಯ ನಡವಳಿಕೆಗಳನ್ನು ಹೊಂದಿದ್ದಾರೆ. ಅವರು ರಾಜಕೀಯ ಜೀವನದಲ್ಲಿ ಮತ್ತಷ್ಟು ಬೆಳೆಯಬೇಕು. ಅವರು ಸಚಿವರಾರಬೇಕು. ಮಾತ್ರವಲ್ಲ ಮುಂದೊಂದು ದಿನ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಅವರನ್ನು ನೋಡುವುದು ಕೂಡ ನನ್ನ ಕನಸು. ಇದಕ್ಕಾಗಿ ನಾವು ಜಗತ್ತಿನ ಸರ್ವಶಕ್ತಿಗಳಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಸುರೇಶ್ ಶೆಟ್ಟಿ ಅವರ ಈ ಹೇಳಿಕೆಯು ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರಲ್ಲಿ ತೀವ್ರ ಅಸಮಾಧಾನವನ್ನು ಉಂಟು ಮಾಡಿದೆ. ಸುರೇಶ್ ಶೆಟ್ಟಿ ಒಬ್ಬ ಬಿಜೆಪಿ ನಾಯಕರಾಗಿ ಈ ರೀತಿ ಬೇರೆ ಸಮುದಾಯದ, ಬೇರೆ ಪಕ್ಷದ ರಾಜಕೀಯ ನಾಯಕರನ್ನು ಬಹಿರಂಗವಾಗಿ ಹೊಗಳುವುದು ಎಷ್ಟು ಸರಿ ? ನಿಮ್ಮ ಆಲೋಚನೆಗಳು ಈ ರೀತಿ ಇರುವಾಗ ತಳಮಟ್ಟದ ಕಾರ್ಯಕರ್ತರನ್ನೇಕೆ ನೀವು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟುವಂತಹ ಕಾರ್ಯ ಮಾಡುತ್ತಿದ್ದೀರಿ ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಬಿಜೆಪಿ ಕಾರ್ಯಕರ್ತರೊಬ್ಬರು, ಚುನಾವಣಾ ಸಂದರ್ಭದಲ್ಲಿ ನಾವು ತಳಮಟ್ಟದಿಂದ ಶ್ರಮಿಸುತ್ತೇವೆ. ಕೋಮು ಸಂಘರ್ಷದಲ್ಲಿ ಬಿಜೆಪಿ ಕಾರ್ಯಕರ್ತರು ಬಲಿಯಾಗಿದ್ದಾರೆ. ಚುನಾವಣಾ ಸಂದರ್ಭದಲ್ಲಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಬಿಜೆಪಿ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡುತ್ತಾರೆ. ಆದರೆ ವಾಸ್ತವದಲ್ಲಿ ಅವರು ಅದೇ ಸಮುದಾಯದ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದು ಯಾವ ರೀತಿಯ ನಿಲುವು ಎಂದು ಪ್ರಶ್ನೆ ಮಾಡಿದ್ದಾರೆ.
Also Read : ಬೆಂಗಳೂರಿನಿಂದ ಮಂಗಳೂರು ಪ್ರಯಾಣ ಮತ್ತಷ್ಟು ಸುಲಭ : ಕೇವಲ 5 ಗಂಟೆ ಸಾಕು..!
ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಕೂಡ ಇದೇ ವಿಚಾರವಾಗಿ ಮಾತನಾಡಿದ್ದು, ಸುರೇಶ್ ಶೆಟ್ಟಿ ಅವರಿಗೆ ಖಾದರ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕೆಂಬ ಮಹದಾಸೆ ಇದ್ದರೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.
ಅಲ್ಲದೇ ಈ ರೀತಿ ಬೇರೆ ಸಮುದಾಯದ, ಬೇರೆ ಪಕ್ಷದ ನಾಯಕರನ್ನು ಬಹಿರಂಗವಾಗಿ ಹೊಗಳುವ ಬಿಜೆಪಿ ಶಾಸಕರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕ್ರಮ ಕೈಗೊಳ್ಳಬೇಕು. ಸುರೇಶ್ ಶೆಟ್ಟಿ ವಿರುದ್ಧ ನೋಟಿಸ್ ಜಾರಿಗೊಳಿಸಬೇಕು ಹಾಗೂ ಸುರೇಶ್ ಶೆಟ್ಟಿ ಪಕ್ಷದ ಕಾರ್ಯಕರ್ತರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕೆಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ .
BJP Workers Angered Over MLA Suresh Shetty Khader for CM Remark – Udupi News



