ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಶಿಕ್ಷಣ ಇಲಾಖೆ ಕ್ರಮ : ಎಲ್ಲಾ ಶಾಲೆಗಳಲ್ಲಿ ಇನ್ಮುಂದೆ ವಾಟರ್ ಬೆಲ್ ಕಡ್ಡಾಯ
ಶಾಲಾ ಅವಧಿಯಲ್ಲಿ ಮಕ್ಕಳು ನೀರು ಕುಡಿಯುವ ಗೋಜಿಗೇ ಹೋಗುವುದಿಲ್ಲ. ಇದರಿಂದ ನಿರ್ಜಲೀಕರಣ, ಕಿಡ್ನಿ ಸಂಬಂಧಿ ಸಮಸ್ಯೆಗಳು ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳು ವಿದ್ಯಾರ್ಥಿಗಳಲ್ಲಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಇನ್ಮುಂದೆ ಎಲ್ಲಾ ಶಾಲೆಗಳಲ್ಲಿ ವಾಟರ್ ಬೆಲ್ ಕಡ್ಡಾಯಗೊಳಿಸುವಂತೆ ಆದೇಶ ಹೊರಡಿಸಲಾಗಿದೆ. ಪಿಎಂ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯ ಅಡಿಯಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ.
ಶಾಲೆಗಳಲ್ಲಿ ವಾಟರ್ ಬೆಲ್ ಬಾರಿಸುತ್ತಿದ್ದಂತೆಯೇ ಶಿಕ್ಷಕರು ವಿದ್ಯಾರ್ಥಿಗಳಿಗೆ ನೀರು ಕುಡಿಯುವಂತೆ ಹೇಳಬೇಕು. ಅಲ್ಲದೇ ಕುಡಿಯುವ ನೀರಿನ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಎಲ್.ಕೆ.ಜಿ, ಯು.ಕೆ.ಜಿ ಇಂದ ಹಿಡಿದು ಪ್ರೌಢಶಾಲೆಯವರೆಗಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಈ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಇದನ್ನೂ ಓದಿ: ರಾಜ್ಯದ ಸರ್ಕಾರಿ ಶಾಲೆಗಳ ಹಾಜರಾತಿಗೆ ಹೈಟೆಕ್ ಸ್ಪರ್ಶ : ಚಹರೆ ಗುರುತಿನ ಹಾಜರಾತಿ ಶೀಘ್ರದಲ್ಲೇ ಜಾರಿ
ಕೇರಳದಲ್ಲಿ ಈಗಾಗಲೇ ಈ ಯೋಜನೆ ಜಾರಿಯಲ್ಲಿದೆ. ತರಗತಿ ಮುಗಿದಾಗ ಗಂಟೆ ಬಾರಿಸುವುದು ಮಾತ್ರವಲ್ಲದೇ ನೀರು ಕುಡಿಯುವುದನ್ನು ನೆನಪಿಸಲೂ ಸಹ ಗಂಟೆ ಬಾರಿಸಲಾಗುತ್ತಿದೆ. ಇನ್ಮುಂದೆ ಈ ವಿಧಾನ ರಾಜ್ಯದ ಶಾಲೆಗಳಲ್ಲೂ ಇರಲಿದ್ದು ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಪೋಷಕರು ಅತ್ಯಂತ ಸಂತಸದಿಂದ ಸ್ವಾಗತಿಸಿದ್ದಾರೆ.



