ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯಲು ಶಿಕ್ಷಣ ಇಲಾಖೆಯಿಂದ ಹೊಸ ಪ್ಲಾನ್
ಪೋಷಕರು ಖಾಸಗಿ ಶಾಲೆಗಳ ಮೇಲೆ ವಿಶೇಷ ಒಲವು ತೋರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಹೀಗಾಗಿ ವಿದ್ಯಾರ್ಥಿಗಳನ್ನು ಪುನಃ ಸರ್ಕಾರಿ ಶಾಲೆಗಳತ್ತ ಸೆಳೆಯಲು ಶಿಕ್ಷಣ ಇಲಾಖೆ ಮಾಸ್ಟರ್ ಪ್ಲಾನ್ ರೂಪಿಸಿದೆ.
ಕಳೆದೊಂದು ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ 2.25 ಲಕ್ಷದಷ್ಟು ಕುಸಿತ ಕಂಡಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೂ ವಿವಿಧ ಭಾಗ್ಯಗಳನ್ನು ನೀಡಲು ಶಿಕ್ಷಣ ಇಲಾಖೆ ಪ್ಲಾನ್ ರೂಪಿಸಿದೆ. ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ, ಶೂ, ಬಟ್ಟೆ ಮತ್ತು ಮಧ್ಯಾಹ್ನದ ಊಟವನ್ನು ನೀಡಲಾಗ್ತಿದೆ. ಇದರ ಜೊತೆಯಲ್ಲಿ ಇನ್ಮುಂದೆ 6 ಉಚಿತ ನೋಟ್ಬುಕ್ಗಳು, ವಾರದಲ್ಲಿ ಐದು ದಿನ ಮೊಟ್ಟೆಯನ್ನೂ ಸರ್ಕಾರ ನೀಡಲಿದೆ. ಜನವರಿಯಿಂದಲೇ ದಾಖಲಾತಿ ಪ್ರಕ್ರಿಯೆ ಆರಂಭದ ಜೊತೆಗೆ ಯಾವುದೇ ಶುಲ್ಕಗಳು ಇಲ್ಲದಿರುವ ಬಗ್ಗೆ ಪಾಲಕರಿಗೆ ಮನವರಿಕೆ ಮಾಡಲು ಅಭಿಯಾನ ಕೂಡ ನಡೆಯಲಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಶಿಕ್ಷಣ ಇಲಾಖೆ ಕ್ರಮ : ಎಲ್ಲಾ ಶಾಲೆಗಳಲ್ಲಿ ಇನ್ಮುಂದೆ ವಾಟರ್ ಬೆಲ್ ಕಡ್ಡಾಯ
ಹೇಗಾದರೂ ಮಾಡಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಮುಂದಾಗಿರುವ ರಾಜ್ಯ ಸರ್ಕಾರ ಹಲವು ಆಫರ್ಗಳನ್ನು ನೀಡುತ್ತಿದೆ. ಈ ಆಫರ್ಗಳಿಂದಾದರೂ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.



