SSLC ಪರೀಕ್ಷೆ ಹೊಸ ಗೈಡ್ಲೈನ್ಸ್: ಶಿಕ್ಷಕರಿಗೆ ಮೊಬೈಲ್ ಬಳಕೆ ನಿರ್ಬಂಧ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ರೆ ಜೈಲೂಟ
ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ವಾಮಮಾರ್ಗ ಆಯ್ಕೆಮಾಡಿಕೊಂಡಿದ್ದ ಶಿವಮೊಗ್ಗ ಹಾಗೂ ಕಲಬುರಗಿ ಶಾಲೆಗಳ ಕೆಲ ಶಿಕ್ಷಕರು ತಾವಾಗಿಯೇ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದ ಬೆನ್ನಲ್ಲೇ ಶಿಕ್ಷಣ ಇಲಾಖೆ ಅಲರ್ಟ್ ಆಗಿದ್ದು ಹೊಸ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ. ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲದೇ ಶಿಕ್ಷಕರಿಗೂ ಮೊಬೈಲ್ ಬಳಕೆಗೆ ನಿರ್ಬಂಧ ಹೇರಲಾಗಿದೆ.
ಈ ಮೊದಲು ಪರೀಕ್ಷೆಗಳನ್ನು ಕರ್ನಾಟಕ ಪರೀಕ್ಷಾ ಮಂಡಳಿ ಮೌಲ್ಯ ನಿರ್ಣಯ ಮಂಡಳಿ ನೇತೃತ್ವದಲ್ಲಿ ನಡೆಸಲಾಗಿತ್ತು. ಆದರೆ ಇನ್ಮುಂದೆ 2 ಹಾಗೂ 3ನೇ ಪರೀಕ್ಷೆ ಆಯುಕ್ತರ ನೇತೃತ್ವದಲ್ಲಿ ಪರೀಕ್ಷೆಗಳು ನಡೆಯಲಿವೆ. ಡಿಡಿಪಿಐ ಹಾಗೂ ಬಿಇಒಗಳಿಗೆ ಪರೀಕ್ಷೆಯ ಜವಾಬ್ದಾರಿ ನೀಡಿ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ.
ಇದನ್ನೂ ಓದಿ: ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯಲು ಶಿಕ್ಷಣ ಇಲಾಖೆಯಿಂದ ಹೊಸ ಪ್ಲಾನ್
ಪ್ರಶ್ನೆಪತ್ರಿಕೆಗಳನ್ನು ಮುಖ್ಯೋಪಾಧ್ಯಯರು ಮಾತ್ರವೇ ಡೌನ್ಲೋಡ್ ಮಾಡಬೇಕು. ಯಾವುದೇ ಕಾರಣಕ್ಕೂ ಪರೀಕ್ಷಾ ಪತ್ರಿಕೆ ಸೋರಿಕೆಯಾಗಬಾರದು. ಒಂದು ವೇಳೆ ಪರೀಕ್ಷಾ ಪತ್ರಿಕೆ ಸೋರಿಕೆ ಮಾಡಿದರೆ ಅಂಥವರ ವಿರುದ್ಧ ಸ್ಥಳೀಯ ಠಾಣೆಗಳಲ್ಲಿ ದೂರು ದಾಖಲಾಗಬೇಕು. ಪ್ರಾಂಶುಪಾಲರು ಸಹ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಬೇಕು. ಪರೀಕ್ಷೆಯ ಸಂದರ್ಭದಲ್ಲಿ ಶಿಕ್ಷಕರು ಮೊಬೈಲ್ ಬಳಕೆ ಮಾಡುವಂತೆಯೇ ಇಲ್ಲ ಎಂದು ಆದೇಶ ಹೊರಡಿಸಲಾಗಿದೆ.



