Makara Jyoti: ರಾಜ್ಯದಲ್ಲಿ ಹಿಂದೆಂದೂ ಕಾಣದ ಪವಾಡ ಅಂಕೋಲಾದಲ್ಲಿ; ಬೆಟ್ಟದ ತುದಿಯಲ್ಲಿ ಬೆಳಕಲ್ಲ ʼದರ್ಶನ!ʼ

ಭಕ್ತರಿಗಾಗಿ ಭಗವಂತ ಎಂಬುದು ಲೋಕಾರೂಢಿ ಮಾತು, ಆ ಮಾತು ಬರಲು ಕಾರಣವೂ ಪುರಾಣ-ಪುಣ್ಯಕಥೆಗಳಲ್ಲಿ ನಾವು ಕೇಳುತ್ತಾ ಬಂದ ಭಕ್ತಿಯ ಪ್ರಸಂಗಗಳು. ಈಗ ಅದಕ್ಕೆ ಮಾದರಿಯಾಗಿ ನಿಂತಿದೆ ಅಂಕೋಲಾದ ಪರ್ವತಶ್ರೇಣಿಗಳ ದಟ್ಟ ಕಾಡು! ಹೌದು, ಇಲ್ಲಿನ ನಿರ್ಜನ ಪ್ರದೇಶದಲ್ಲಿ ನಡೆಯುವ ಮಕರ ಸಂಕ್ರಾಂತಿಯಂದು ನಡೆಯುವ ಪವಾಡ ನಿಜಕ್ಕೂ ಕಲಿಯುಗದಲ್ಲೂ ಭಗವಂತನ ಇರುವಿಕೆಯನ್ನು ತೋರ್ಪಡಿಸುತ್ತದೆ

ಇಲ್ಲೂ ಬರುತ್ತಾನೆ ಅಯ್ಯಪ್ಪ

ಈ ಊರಿಂದ ಶಬರಿಮಲೆಗೆ 785 ಕಿಲೋಮೀಟರ್ ದೂರವಿದೆ, ಆದರೂ ಶಬರಿಮಲೆಯ ಅಯ್ಯಪ್ಪ ಇಲ್ಲೂ ಜ್ಯೋತಿ ಸ್ವರೂಪದಲ್ಲಿ ದರ್ಶನ ನೀಡುತ್ತಾನೆ ಅನ್ನೋದು ಜನರ ನಂಬಿಕೆಯಾಗಿದೆ! ಅದಕ್ಕೆ ಪುಷ್ಠಿ ನೀಡುವಂತೆ ಈ ಬಾರಿ ಮಕರ ಸಂಕ್ರಮಣದಂದು ಶಾಂತಮಲೆ ಬೆಟ್ಟದ ಮೇಲೆ ಉತ್ತರಾ ನಕ್ಷತ್ರ ಸಮೇತವಾಗಿ ಜ್ಯೋತಿ ಕಾಣಿಸಿದೆ! ಅದೂ ಸಹ ಶಬರಿಮಲೆಯಲ್ಲಿ ನಡೆಯುವ ಹಾಗೆ!

19 ವರ್ಷದಿಂದ ಮಕರ ಜ್ಯೋತಿಯ ದರ್ಶನ

ಈ ಘಟನೆಯ ಹಿಂದೆ ಒಂದು ಸ್ವಾರಸ್ಯಕರ ಸಂಗತಿ ಇದೆ, ಅದೇನೆಂದರೆ ಇದು ಗಂಗಾವಳಿ ತೀರ ಪ್ರದೇಶದ ಬೆಟ್ಟಗಳ ಸಮೂಹ ಹೊಂದಿರುವ ಉಳುವರೆ ಗ್ರಾಮ, ಈ ಗ್ರಾಮ ಬೃಹದಾಕಾರದ ಶಾಂತಮಲೆ ಬೆಟ್ಟದ ಕೆಳಗೆ ಇದೆ.  ಕಳೆದ 19 ವರ್ಷಗಳಿಂದ ಉಳುವರೆಯ ದೊಡ್ಡಕಲ್ಲು ಗುಡ್ಡದ ಮೇಲೆ ಮಕರ ಜ್ಯೋತಿಯ ದಿವ್ಯ ದರ್ಶನವಾಗುತ್ತಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ಇಲ್ಲಿಯ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಶಾಂತಮಲೆ ಎಂದು ನಾಮಕರಣ ಮಾಡಲಾಗಿದೆ.

ಮಾಣಿಗೆ ಒಲಿದ ಅಯ್ಯಪ್ಪ

ಇಲ್ಲಿಯ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಅರ್ಚಕರು ಹಾಗೂ ಈ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಗುರುಸ್ವಾಮಿಗಳಾದ ಮಾಣಿ ನಾಗಪ್ಪ ಗೌಡ ಅವರು 2006ರಲ್ಲಿ ಒಬ್ಬರೇ ಮಕರ ಜ್ಯೋತಿ ವೀಕ್ಷಿಸಿದ್ದರಂತೆ. ಗುರುಸ್ವಾಮಿಗಳಾದ ಮಾಣಿ ಅವರಿಗೆ 15 ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಚಿಕಿತ್ಸೆ ಕೂಡ ಫಲಕಾರಿಯಾಗಿರಲಿಲ್ಲ. ಹೀಗಿರುವಾಗ ಮಾಣಿ ಗೌಡ ಅವರಿಗೆ ಕನಸಿನಲ್ಲಿ ಅಯ್ಯಪ್ಪ ಸಾಕ್ಷಾತ್ಕಾರಗೊಂಡು ನೀನು ಅಯ್ಯಪ್ಪ ವ್ರತಧಾರಿಯಾಗಿ 41 ದಿನದ ಕಟ್ಟುನಿಟ್ಟಿನ ವ್ರತ ಪೂರೈಸಿದರೆ ಮಕರ ಜ್ಯೋತಿಯ ದರ್ಶನವನ್ನು ನಿನಗೆ ಇಲ್ಲಿಯ ದೊಡ್ಡಕಲ್ಲು ಗುಡ್ಡದ ಮೇಲೆ ಮಾಡಿಸುತ್ತೇನೆ, ಹಾಗೆಯೇ ನಿನ್ನ ಇಷ್ಟಾರ್ಥ ನೇರವೇರುತ್ತದೆ ಎಂದು ಅಯ್ಯಪ್ಪನ ಸಾಕ್ಷಾತ್ಕಾರದ ನುಡಿ ಕೇಳಿಸಿತಂತೆ.

ಇದನ್ನೂ ಓದಿ: ವಾರಾಹಿ ಯೋಜನೆ ರದ್ದು : ಕರಾವಳಿಯಲ್ಲಿ ಬುಗಿಲೆದ್ದ ಆಕ್ರೋಶ, ಏನಿದು ವಿವಾದ ?

ಅಯ್ಯಪ್ಪನ ಪವಾಡಕ್ಕೆ ಮಾಣಿ ಗೌಡರೇ ಜೀವಂತ ಸಾಕ್ಷಿ

ಆನಂತರ ಅವರು ವ್ರತಧಾರಿಯಾಗಿ ಅಯ್ಯಪ್ಪ ವ್ರತ ಪೂರೈಸಿ, ಇಲ್ಲಿಯೆ ಮಕರ ಜ್ಯೋತಿ ದರ್ಶನ ಪಡೆದರಂತೆ. ಆನಂತರದ ವರ್ಷದಲ್ಲಿ ಅವರಿಗೆ ಹೆಣ್ಣು ಮಗುವಿನ ಸಂತಾನ ಭಾಗ್ಯ ಕಂಡು ಮಗುವಿಗೆ ನಾಗಶ್ರೀ ಎಂದು ಹೆಸರಿಟ್ಟಿದ್ದಾರೆ. ಆನಂತರದ ದಿನಗಳಲ್ಲಿ ಇಲ್ಲಿಯ ಶ್ರೀ ಅಯ್ಯಪ್ಪ ಮಹಿಮೆ ಇತರರಿಗೆ ತಿಳಿದು, ನೂರಾರು ಅಯ್ಯಪ್ಪ ಭಕ್ತರು ಮಾಲೆ ಧರಿಸಿ, ಶಬರಿಮಲೆಯಲ್ಲಿ ಮಂಡಲ ಪೂಜೆ ಮಾಡಿಕೊಂಡು ಮಕರ ಜ್ಯೋತಿಯ ದರ್ಶನ ಭಾಗ್ಯ ಕಾಣಲು ಇಲ್ಲಿಗೆ ಬರುತ್ತಾರೆ.

ಗ್ರಾಮಸ್ಥರು ಹೇಳೋದು ಕೂಡ ಅಚ್ಚರಿಯ ಮಾತು

ಗುಡ್ಡದ ತುದಿಯಲ್ಲಿ ನಕ್ಷತ್ರದ ಆಕಾರದಲ್ಲಿ ಅಯ್ಯಪ್ಪ ಸ್ವಾಮಿ ನಮಗೆ ದರ್ಶನ ನೀಡಿದ್ದಾನೆ. ನಾವು ಸಂಕ್ರಾಂತಿಯ ದಿನ ಈ ಗುಡ್ಡದ ಮೇಲೆ ತೆರಳಿ ಅಯ್ಯಪ್ಪ ಸ್ವಾಮಿಯ ಮೂರ್ತಿಗೆ ತುಪ್ಪಾಭಿಷೇಕ ಮಾಡಿ, ಮಹಾಕಾಳಿಯನ್ನು ಆರಾಧಿಸಿ, ಅಲ್ಲಿಯೇ ಊಟ ಮಾಡಿ ಬರುತ್ತೇವೆ. ಸಂಜೆ ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಜ್ಯೋತಿ ಕಾಣುವ ಸಂದರ್ಭದಲ್ಲಿಯೇ ಇಲ್ಲಿಯೂ ಜ್ಯೋತಿ ಗೋಚರವಾಗಿದೆ ಎಂದು ಉಳವರೆಯ ಗ್ರಾಮಸ್ಥರು ಹೇಳಿದ್ದಾರೆ.

https://youtube.com/watch?v=3eDy1zHS2sw%3Fsi%3D4j3b-6ZWrpW0qH2I

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories