ಮೆಟ್ರೋ ದರ ಏರಿಕೆ ಬಗ್ಗೆ ನಮ್ಮ ನ್ನು ಕೇಳಿಲ್ಲ; ಸಿಎಂ ಹುದ್ದೆ ಬಗ್ಗೆ ಪಕ್ಷ ಹೇಳಿದಂತೆ ಕೇಳುವೆ: ಡಿಕೆ ಶಿವಕುಮಾರ್
DCM DK Shivakumar | Bengaluru Namma Metro fare hike: ಮಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ದರ ಏರಿಕೆ ವಿಚಾರವಾಗಿ ರಾಜ್ಯ ಸರ್ಕಾರದ ಮೇಲೆ ಕೇಳಿಬರುತ್ತಿರುವ ಟೀಕೆಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. “ಮೆಟ್ರೋ ದರ ನಿಗದಿಪಡಿಸಲು ಪ್ರತ್ಯೇಕ ಸಮಿತಿ ಇದೆ. ಈ ಸಮಿತಿಯ ನೇತೃತ್ವವನ್ನು ಕೇಂದ್ರ ಸರ್ಕಾರದ ಕಾರ್ಯದರ್ಶಿಗಳೇ ವಹಿಸಿರುತ್ತಾರೆ. ದರ ಏರಿಕೆ ಮಾಡುವ ಮೊದಲು ನಮ್ಮ ಅಭಿಪ್ರಾಯವನ್ನು ಯಾರೂ ಕೇಳಿಲ್ಲ” ಎಂದು ಅವರು ತಿಳಿಸಿದರು.
ಬೆಂಗಳೂರಿಗೆ ಮರಳಿದ ನಂತರ ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ ಅವರು, “ಜನರಿಗೆ ಅನಗತ್ಯವಾಗಿ ತೊಂದರೆ ನೀಡುವ ಉದ್ದೇಶ ನಮಗಿಲ್ಲ. ಸದ್ಯದ ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದರು.
ಫೆಬ್ರವರಿ 9, ಸೋಮವಾರದಿಂದ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಇಲ್ಲ; ಕೇಂದ್ರ ಸರ್ಕಾರದಿಂದ ತಾತ್ಕಾಲಿಕ ಬ್ರೇಕ್
ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪರೋಕ್ಷ ಹೇಳಿಕೆ
ರಾಜ್ಯ ರಾಜಕಾರಣದ ನಾಯಕತ್ವ ಬದಲಾವಣೆ ಮತ್ತು ತಾವು ಸಿಎಂ ಆಗುವ ಜನರ ಆಸೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಕನಸು ಕಾಣುವುದು ತಪ್ಪಲ್ಲ. ಜನರಿಗೆ, ಶಾಸಕರಿಗೆ ಹಾಗೂ ಮಾಧ್ಯಮದವರಿಗೂ ಅಂತಹ ಆಸೆ ಇರಬಹುದು. ಆದರೆ ಅಂತಿಮವಾಗಿ ಪಕ್ಷ (ಹೈಕಮಾಂಡ್) ಏನು ಹೇಳುತ್ತದೋ ಅದನ್ನು ನಾವೆಲ್ಲರೂ ಪಾಲಿಸಬೇಕಾಗುತ್ತದೆ” ಎಂದು ಮಾರ್ಮಿಕವಾಗಿ ನುಡಿದರು.
“ಡಿಕೆಶಿ ಕೇಳಿದರೆ ಪ್ರಾಣ ಕೊಡಲು ಸಿದ್ಧ” ಎಂದ ಕಾಂಗ್ರೆಸ್ ಶಾಸಕ! ಸಿಎಂ ಬದಲಾವಣೆ ಬಗ್ಗೆ ಸ್ಫೋಟಕ ಹೇಳಿಕೆ
ಇದೇ ವೇಳೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗಬೇಕು ಎಂಬ ದಲಿತ ಸಂಘಟನೆಗಳ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸಿ, “ಅಭಿಮಾನಿಗಳು ತಮ್ಮ ನಾಯಕರ ಬಗ್ಗೆ ಆಸೆ ಪಡುವುದು ಸಹಜ. ಅದನ್ನು ಬೇಡ ಎನ್ನಲು ನಾನು ಯಾರು?” ಎಂದು ಪ್ರಶ್ನಿಸಿದರು.
ಅಧಿಕಾರ ಹಂಚಿಕೆ: “ಸಮಯವೇ ಉತ್ತರ ನೀಡಲಿದೆ”
ಬಜೆಟ್ ಮಂಡನೆಯ ನಂತರ ರಾಜ್ಯದಲ್ಲಿ ಅಧಿಕಾರ ಹಂಚಿಕೆ ಅಥವಾ ನಾಯಕತ್ವ ಬದಲಾವಣೆ ಆಗಲಿದೆಯೇ ಎಂಬ ಕುತೂಹಲದ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಅವರು ನೇರ ಉತ್ತರ ನೀಡದೆ, “ಸಮಯವೇ ಎಲ್ಲದಕ್ಕೂ ಉತ್ತರ ನೀಡುತ್ತದೆ” ಎಂದು ಹೇಳುವ ಮೂಲಕ ಕುತೂಹಲವನ್ನು ಹಾಗೆಯೇ ಉಳಿಸಿದರು.



