ಬೆಂಗಳೂರು-ಮಂಗಳೂರು ನಡುವೆ ಶೀಘ್ರದಲ್ಲೇ ವಂದೇ ಭಾರತ್ ರೈಲು; ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ
Ashwini Vaishnaw: ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಕರಾವಳಿ ನಗರಿ ಮಂಗಳೂರು ನಡುವಿನ (Bengaluru Mangaluru Vande Bharat Train) ರೈಲು ಪ್ರಯಾಣದಲ್ಲಿ ಶೀಘ್ರದಲ್ಲೇ ದೊಡ್ಡ ಕ್ರಾಂತಿಯಾಗಲಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನೀಡಿರುವ ಮಾಹಿತಿಯಂತೆ, ದಕ್ಷಿಣ ಕರ್ನಾಟಕ ಭಾಗದಲ್ಲಿ ರೈಲ್ವೇ ಸೇವೆಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಸಕಲ ಸಿದ್ಧತೆ ನಡೆಸಿದೆ.
ವಂದೇ ಭಾರತ್ ನಾಲ್ಕನೇ ಬ್ಯಾಚ್ ಸಿದ್ಧತೆ
ವಂದೇ ಭಾರತ್ ರೈಲುಗಳ ನಾಲ್ಕನೇ ಬ್ಯಾಚ್‌ನ ತಯಾರಿಕೆ ಪ್ರಗತಿಯಲ್ಲಿದ್ದು, ಇವುಗಳು ಪೂರ್ಣಗೊಂಡ ತಕ್ಷಣ ದಕ್ಷಿಣ ಕರ್ನಾಟಕದ ವಿವಿಧ ಮಾರ್ಗಗಳಲ್ಲಿ ಹೊಸ ರೈಲುಗಳನ್ನು ಪರಿಚಯಿಸಲಾಗುವುದು. ಈ ಪಟ್ಟಿಯಲ್ಲಿ ಬೆಂಗಳೂರು-ಮಂಗಳೂರು ಮಾರ್ಗಕ್ಕೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆಯಿದೆ.
ಹಾಸನ-ಮಂಗಳೂರು ರೈಲು ಮಾರ್ಗ ವಿದ್ಯುದ್ದೀಕರಣ ಪೂರ್ಣ
ಹಾಸನ ಮತ್ತು ಮಂಗಳೂರು ನಡುವಿನ ರೈಲು ಮಾರ್ಗದ ವಿದ್ಯುದ್ದೀಕರಣ (Electrification) ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಪ್ರಸ್ತುತ ಇದರ ಪ್ರಮಾಣೀಕರಣ (Certification) ಪ್ರಕ್ರಿಯೆ ನಡೆಯುತ್ತಿದ್ದು, ಅನುಮೋದನೆ ಸಿಕ್ಕ ತಕ್ಷಣ ಈ ಮಾರ್ಗದಲ್ಲಿ ಪೂರ್ಣ ಪ್ರಮಾಣದ ವಿದ್ಯುತ್ ಚಾಲಿತ ರೈಲುಗಳ ಸಂಚಾರ ಆರಂಭವಾಗಲಿದೆ. ಈ ಮಾರ್ಗದಲ್ಲಿ ಆರಂಭಿಕವಾಗಿ ಎರಡು ಹೊಸ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದ್ದು, ಇದು ಇಡೀ ಕರಾವಳಿ ಭಾಗಕ್ಕೆ ಅನುಕೂಲವಾಗಲಿದೆ.
ಬೆಂಗಳೂರು-ಮುಂಬೈ ನಡುವೆ ಬುಲೆಟ್ ಟ್ರೈನ್?
ಕೇವಲ ವಂದೇ ಭಾರತ್ ಮಾತ್ರವಲ್ಲದೆ, ಹೈಸ್ಪೀಡ್ ರೈಲುಗಳ ಯೋಜನೆಗೂ ಚಾಲನೆ ನೀಡಲಾಗುತ್ತಿದೆ. ಗಂಟೆಗೆ 300 ಕಿ.ಮೀ ವೇಗದಲ್ಲಿ ಚಲಿಸುವ ರೈಲುಗಳ ಸಂಚಾರಕ್ಕಾಗಿ ನೀಲನಕ್ಷೆ ತಯಾರಾಗುತ್ತಿದ್ದು, ಮುಂಬೈ ಮತ್ತು ಬೆಂಗಳೂರು ನಡುವೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಉತ್ಸುಕವಾಗಿದೆ. ಇದು ಜಾರಿಯಾದಲ್ಲಿ ಚೆನ್ನೈ-ಬೆಂಗಳೂರು ನಡುವಿನ ಪ್ರಯಾಣವೂ ಅತ್ಯಂತ ಸುಲಭವಾಗಲಿದೆ.
ಉತ್ಪಾದನಾ ವಲಯಕ್ಕೆ ಬಜೆಟ್ ಬಲ: ಕರ್ನಾಟಕಕ್ಕೆ ಲಾಭ
ಬಜೆಟ್‌ನಲ್ಲಿ ‘ಮೇಕಿನ್ ಇಂಡಿಯಾ’ ಮೂಲಕ ಉತ್ಪಾದನಾ ವಲಯಕ್ಕೆ ಹೆಚ್ಚಿನ ಬಲ ತುಂಬಲಾಗುತ್ತಿದೆ. ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್‌ನಲ್ಲಿ ಕರ್ನಾಟಕಕ್ಕೆ ಸುಮಾರು 10 ಸಾವಿರ ಕೋಟಿ ಮೊತ್ತದ ಯೋಜನೆಗಳು ಬರಲಿವೆ. ಬೆಂಗಳೂರು ಮತ್ತು ಮೈಸೂರು ನಗರಗಳು ದೇಶದ ಸೆಮಿಕಂಡಕ್ಟರ್ ಉದ್ಯಮದ ಕೇಂದ್ರಬಿಂದುಗಳಾಗಲಿವೆ ಎಂದು ಅಶ್ವಿನಿ ವೈಷ್ಣವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



