ಸಮೋಸಾ ವ್ಯಾಪಾರಿಯ ಸಿನಿಮಾ ಸ್ಟೈಲ್ ದರೋಡೆ ಸ್ಕೆಚ್ : ಶ್ರೀಮಂತನಾಗುವ ಆಸೆಗೆ ಈಗ ಜೈಲೇ ಗತಿ !
ಬೆಂಗಳೂರು: Movie style robbery sketch: ದಿಢೀರ್ ಶ್ರೀಮಂತನಾಗಬೇಕೆಂಬ ದುರಾಸೆ ಮನುಷ್ಯನನ್ನು ಎಂತಹ ಅಪಾಯಕಾರಿ ಹಾದಿಗೆ ತಳ್ಳುತ್ತದೆ ಎಂಬುದಕ್ಕೆ ಬೆಂಗಳೂರು(Bengaluru) ಹೊರವಲಯದ ದಾಸನಪುರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಸಮೋಸಾ ಮಾರಿ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬ ಜ್ಯುವೆಲ್ಲರಿ ಶಾಪ್ ದರೋಡೆಗೆ ಮಾಸ್ಟರ್ ಪ್ಲಾನ್ ಮಾಡಿ, ಈಗ ತನ್ನ ನಾಲ್ವರು ಸಹಚರರೊಂದಿಗೆ ಪೊಲೀಸರ ಅತಿಥಿಯಾಗಿದ್ದಾನೆ.
ಏನಿದು ಪ್ರಕರಣ ?
ಕಳೆದ ಜನವರಿ 27ರಂದು (ವರದಿಯ ಪ್ರಕಾರ) ದಾಸನಪುರ ಮುಖ್ಯರಸ್ತೆಯಲ್ಲಿರುವ ‘ರಾಮ್‌ದೇವ್ ಜ್ಯುವೆಲ್ಲರ್ಸ್’ ಮಳಿಗೆಗೆ ಮುಸುಕುಧಾರಿಗಳಾಗಿ ನುಗ್ಗಿದ ದರೋಡೆಕೋರರು, ಅಲ್ಲಿದ್ದ ಇಬ್ಬರು ಅಪ್ರಾಪ್ತ ಬಾಲಕರಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ್ದರು. ಮಳಿಗೆಯಲ್ಲಿದ್ದ ಚಿನ್ನಾಭರಣ ಹಾಗೂ 50 ಸಾವಿರ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಾದನಾಯಕನಹಳ್ಳಿ ಪೊಲೀಸರು, ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಸ್ಟರ್ ಮೈಂಡ್ ಸಮೋಸಾ ವ್ಯಾಪಾರಿ !
ಬಂಧಿತರಲ್ಲಿ ರಾಜಸ್ಥಾನ ಮೂಲದ ಅಂಕಿತ್ ನಾಥ್ (30) ಈ ದರೋಡೆಯ ಕಿಂಗ್‌ಪಿನ್. ಈತ ಮಾಕಳಿಯಲ್ಲಿ ಸಮೋಸಾ ವ್ಯಾಪಾರ ಮಾಡುತ್ತಿದ್ದ. ದಿನವಿಡೀ ಕಷ್ಟಪಟ್ಟು ದುಡಿಯುವ ಬದಲು, ಒಂದೇ ರಾತ್ರಿಯಲ್ಲಿ ಕೋಟ್ಯಧಿಪತಿಯಾಗಲು ಈತ ದರೋಡೆಯ ಹಾದಿ ತುಳಿದಿದ್ದ. ಇದಕ್ಕಾಗಿ ರಾಜಸ್ಥಾನದಿಂದ ತನ್ನ ಹಳೆಯ ಸ್ನೇಹಿತರನ್ನು ಕರೆಸಿಕೊಂಡಿದ್ದಲ್ಲದೆ, ಸುಮಾರು ಒಂದು ಲಕ್ಷ ರೂಪಾಯಿ ವ್ಯಯಿಸಿ ಪಿಸ್ತೂಲ್ ಕೂಡ ಖರೀದಿಸಿದ್ದ ಎನ್ನಲಾಗಿದೆ.
ಬಂಧಿತ ಆರೋಪಿಗಳು:
ಅಂಕಿತ್ ನಾಥ್ (ಮಾಸ್ಟರ್ ಮೈಂಡ್),,ಅನೂಪ್ ಸಿಂಗ್,ರವಿರಾವ್, ಅನೂಪ್ ರಾಮ್, ಅರುಣ್
Also Read: ಜ್ಯೋತಿಷಿ ಕಮಲಾಕರ್ ಭಟ್‌ಗೆ ಹನಿಟ್ರ್ಯಾಪ್ ಜಾಲ ಹೆಣೆದಿದ್ದ ಸುಚಿತ್ರಾ ನಾಯ್ಕ್! ಕಥೆ ಬಿಚ್ಚಿಟ್ಟ ಸುಚಿತ್ರಾ ಪತಿ!
ಗುಂಡು ಹಾರಿದ್ದರೆ ಅನಾಹುತವಾಗುತ್ತಿತ್ತು !
ದರೋಡೆ ಸಮಯದಲ್ಲಿ ಆರೋಪಿ ರವಿರಾವ್ ಎಂಬಾತ ಪಿಸ್ತೂಲ್‌ನ ಟ್ರಿಗರ್ ಒತ್ತಿದ್ದ. ಆದರೆ ತಾಂತ್ರಿಕ ದೋಷದಿಂದ ಗುಂಡು ಹಾರಲಿಲ್ಲ. ಇದರಿಂದಾಗಿ ಮಳಿಗೆಯಲ್ಲಿದ್ದ ಬಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಆರೋಪಿಗಳಿಂದ ಒಂದು ಪಿಸ್ತೂಲ್, ಎರಡು ಜೀವಂತ ಗುಂಡುಗಳು, ಮೂರು ಮ್ಯಾಗಜಿನ್ ಹಾಗೂ ದೋಚಿದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.



