ಭಾರತ vs ಪಾಕ್: ಕೈಕುಲುಕದ ನಾಯಕರು, ಟಾಸ್ ಗೆದ್ದ ಪಾಕಿಸ್ತಾನಕ್ಕೆ ಭಾರತದ ಬ್ಯಾಟಿಂಗ್ ಸವಾಲು!
India vs Pakistan Live Score, T20 World Cup 2026: ಕೊಲಂಬೊ: ಟಿ20 ವಿಶ್ವಕಪ್ 2026ರ ಅತ್ಯಂತ ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ರಣರೋಚಕ ತಿರುವುಗಳೊಂದಿಗೆ ಆರಂಭವಾಗಿದೆ. ಕ್ರೀಡಾಂಗಣದಲ್ಲಿ ಅಭಿಮಾನಿಗಳ ಹರ್ಷೋದ್ಗಾರ ಮನೆಮಾಡಿದ್ದರೆ, ಮೈದಾನದಲ್ಲಿ ಉಭಯ ತಂಡಗಳ ಆಟಗಾರರ ನಡುವೆ ತೀವ್ರ ಶೀತಲ ಸಮರ ಕಂಡುಬರುತ್ತಿದೆ.
ಟಾಸ್ ಅಪ್‌ಡೇಟ್: ಭಾರತಕ್ಕೆ ಮೊದಲು ಬ್ಯಾಟಿಂಗ್
ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಟಾಸ್ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟೀಮ್ ಇಂಡಿಯಾ ಪರ ಸೂರ್ಯಕುಮಾರ್ ಯಾದವ್ ಮೊದಲು ಬ್ಯಾಟಿಂಗ್ ಮಾಡಲಿದ್ದಾರೆ.
ಭಾರತ ತಂಡದಲ್ಲಿ ಎರಡು ಬದಲಾವಣೆ: ಅರ್ಶದೀಪ್ ಸಿಂಗ್ ಬದಲಿಗೆ ಕುಲದೀಪ್ ಯಾದವ್ ಮತ್ತು ಅಭಿಷೇಕ್ ಶರ್ಮಾ ತಂಡಕ್ಕೆ ಮರಳಿದ್ದಾರೆ.
ಕೈಕುಲುಕದ ವಿವಾದ: ಏನಿದರ ಹಿನ್ನೆಲೆ?
ಈ ಪಂದ್ಯದ ಅತ್ಯಂತ ಚರ್ಚಿತ ವಿಷಯವೆಂದರೆ ಆಟಗಾರರು ಪರಸ್ಪರ ಕೈಕುಲುಕದಿರುವುದು. ಕಳೆದ ವರ್ಷದ ಏಷ್ಯಾ ಕಪ್‌ನಿಂದಲೂ ಭಾರತ ಮತ್ತು ಪಾಕಿಸ್ತಾನ ಆಟಗಾರರು ಈ ಸಂಪ್ರದಾಯವನ್ನು ನಿಲ್ಲಿಸಿದ್ದಾರೆ. ಕಾಶ್ಮೀರದ ಪಹಲ್ಗಾಮ್ ದಾಳಿ ಮತ್ತು ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ನಂತರ ಉಭಯ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆ ಮಿತಿಮೀರಿದೆ.
ಸೂರ್ಯಕುಮಾರ್ ಪ್ರತಿಕ್ರಿಯೆ: ಪಂದ್ಯಕ್ಕೆ ಮುನ್ನ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಸೂರ್ಯ, “ಕೈಕುಲುಕುವ ಬಗ್ಗೆ 24 ಗಂಟೆ ಕಾಯಿರಿ, ನಾವು ಇಲ್ಲಿ ಕ್ರಿಕೆಟ್ ಆಡಲು ಬಂದಿದ್ದೇವೆ,” ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರಿಸಿದ್ದರು. ಇಂದು ಮೈದಾನದಲ್ಲಿ ಆಟಗಾರರು ಅಂತರ ಕಾಯ್ದುಕೊಳ್ಳುವ ಮೂಲಕ ಹಳೆಯ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿದ್ದಾರೆ.
‘ಇದು ಕ್ರಿಕೆಟ್ ಅಲ್ಲ, ವ್ಯವಹಾರ’ – ಆನಂದ್ ದುಬೆ ಕಿಡಿ
ಶಿವಸೇನೆ (ಯುಬಿಟಿ) ನಾಯಕ ಆನಂದ್ ದುಬೆ ಈ ಪಂದ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪ್ರಧಾನಿಯವರು ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎನ್ನುತ್ತಾರೆ, ಆದರೆ ಕ್ರಿಕೆಟ್ ಮಾತ್ರ ನಡೆಯುತ್ತಿದೆ. ಇದು ಕೇವಲ ಬ್ಯುಸಿನೆಸ್ ಅಷ್ಟೇ. ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಹಣದ ಅವಶ್ಯಕತೆ ಇರುವುದರಿಂದ ಅವರು ನಮ್ಮೊಂದಿಗೆ ಆಡುತ್ತಿದ್ದಾರೆ,” ಎಂದು ಅವರು ಟೀಕಿಸಿದ್ದಾರೆ.
ಕರ್ನಾಟಕದ ರೈತರಿಗೆ ಶುಭ ಸುದ್ದಿ: 22,000 ಕನ್ನಡಿಗ ಕೃಷಿಕರ ಖಾತೆಗೆ ಶೀಘ್ರವೇ ಹಣ ಬಿಡುಗಡೆ
ಪಂದ್ಯದ ಪ್ರಮುಖ ಅಂಶಗಳು:
ಹವಾಮಾನ: ಕೊಲಂಬೊದಲ್ಲಿ 70% ಮಳೆಯ ಮುನ್ಸೂಚನೆ ಇತ್ತಾದರೂ, ಸದ್ಯಕ್ಕೆ ಪಂದ್ಯಕ್ಕೆ ಅಡ್ಡಿಯಾಗಿಲ್ಲ.
ಅಭಿಷೇಕ್ ಶರ್ಮಾ ವರ್ಸಸ್ ಅಮಿರ್: ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮಿರ್ ಭಾರತದ ಯುವ ಬ್ಯಾಟರ್ ಅಭಿಷೇಕ್ ಶರ್ಮಾರನ್ನು ‘ಸ್ಲಾಗರ್’ (ಕೇವಲ ಬಲವಾಗಿ ಬೀಸುವವನು) ಎಂದು ಲೇವಡಿ ಮಾಡಿದ್ದರು. ಇದಕ್ಕೆ ಹರ್ಭಜನ್ ಸಿಂಗ್ ತಕ್ಕ ಉತ್ತರ ನೀಡಿದ್ದು, ಅಭಿಷೇಕ್ ಒಬ್ಬ ಗುಣಮಟ್ಟದ ಆಟಗಾರ ಎಂದು ಬೆಂಬಲಿಸಿದ್ದಾರೆ.
ದಾಖಲೆ: ಟಿ20 ವಿಶ್ವಕಪ್‌ಗಳಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ 7-1 ರ ಭರ್ಜರಿ ಮುನ್ನಡೆ ಹೊಂದಿದೆ. ಸದ್ಯ ಇಡೀ ವಿಶ್ವದ ಕಣ್ಣು ಕೊಲಂಬೊದ ಮೇಲಿದ್ದು, ಭಾರತವು ಪಾಕಿಸ್ತಾನದ ಮುಂದೆ ಎಷ್ಟು ಮೊತ್ತದ ಗುರಿ ಇಡಲಿದೆ ಎಂಬ ಕುತೂಹಲ ಮನೆಮಾಡಿದೆ.



