ಉಡುಪಿ : ಉಪ ಲೋಕಾಯುಕ್ತ ಬಿ. ವೀರಪ್ಪರಿಂದ ಹಠಾತ್ ದಾಳಿ: ಅವ್ಯವಸ್ಥೆ ವಿರುದ್ಧ ಕಿಡಿ

ಉಡುಪಿ: ಉಡುಪಿ ಜಿಲ್ಲೆಗೆ ಭೇಟಿ ನೀಡಿರುವ ಕರ್ನಾಟಕ ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ (upa Lokayutka Justice Beerappa) ಅವರು ಇಂದು ಮುಂಜಾನೆಯಿಂದಲೇ ವಿವಿಧ ಸರ್ಕಾರಿ ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಅವ್ಯವಸ್ಥೆಯ ವಿರುದ್ದ ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ.
ಉಡುಪಿ ನಗರದ ನಿಟ್ಟೂರಿನಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಅವ್ಯವಸ್ಥೆ ಗಮನಿಸಿ ನಗರಸಭೆಯ ಪೌರಾಯುಕ್ತರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಘಟಕದ ನಿರ್ವಹಣೆಗೆ ಪ್ರತಿ ತಿಂಗಳು 3 ಲಕ್ಷ ರೂ. ಪಡೆಯುತ್ತಿರುವ ನೀವು, ತ್ಯಾಜ್ಯ ನೀರನ್ನು ಸಂಸ್ಕರಿಸದೇ ನೇರವಾಗಿ ಸಮುದ್ರಕ್ಕೆ ಬಿಡುತ್ತಿರುವುದು ಗಂಭೀರ ನಿರ್ಲಕ್ಷ್ಯ ಎಂದು ಕಿಡಿಕಾರಿದರು. ಪರಿಸರ ಇಲಾಖೆಯ ಅಧಿಕಾರಿಗಳ ಮೇಲೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲಿಂದ ನೇರವಾಗಿ ಮಲ್ಪೆ ಬಂದರುಗೆ ಭೇಟಿ ನೀಡಿದ ಅವರು, ಬಂದರು ಪ್ರದೇಶದ ಅಸ್ವಚ್ಛತೆ, ಸುತ್ತಮುತ್ತ ಹರಿಯುತ್ತಿರುವ ತ್ಯಾಜ್ಯ ನೀರು ಹಾಗೂ ದುರ್ವಾಸನೆ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕ ಆರೋಗ್ಯಕ್ಕೆ ಹಾನಿ ಉಂಟಾಗುವಂತಹ ಪರಿಸ್ಥಿತಿ ಮುಂದುವರಿಯಬಾರದು ಎಂದು ಎಚ್ಚರಿಸಿದರು.
Also Read : ಆಶಾಕಿರಣ ಯೋಜನೆ (Asha Kirana) : ರಾಜ್ಯದ 1.4 ಕೋಟಿ ಜನರಿಗೆ ಉಚಿತ ಕಣ್ಣಿನ ತಪಾಸಣೆ ನಿಮಗೂ ಬೇಕೆ ಈ ಸೌಲಭ್ಯ ? ಇಲ್ಲಿದೆ ಮಾಹಿತಿ
ನಂತರ ಬನ್ನಂಜೆಯಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿನ ಕ್ಯಾಂಟೀನ್ ಅಡುಗೆ ಕೋಣೆಯ ಸ್ವಚ್ಛತೆ ಪರಿಶೀಲಿಸಿದರು. ಈ ವೇಳೆ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಯೊಬ್ಬರು ತಮಗೆ ಇಎಸ್ಐ ಸೇರಿದಂತೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ದೂರಿದರು.
ತಕ್ಷಣವೇ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು, ಕಾರ್ಮಿಕರಿಗೆ ಕೂಡಲೇ ಇಎಸ್ಐ ಕಾರ್ಡ್ ಒದಗಿಸುವಂತೆ ಸೂಚಿಸಿದರು. ಈ ಸಂಬಂಧ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳುವುದಾಗಿ ತಿಳಿಸಿದರು.
Also Read : ಬ್ಯಾಂಕ್ ಗ್ರಾಹಕರ ಗಮನಕ್ಕೆ: ಮಾರ್ಚ್ನಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ಗಳಿಗೆ ಇಷ್ಟೆಲ್ಲ ರಜೆ; ಇಲ್ಲಿದೆ ಸಂಪೂರ್ಣ ಪಟ್ಟಿ
ಉಪ ಲೋಕಾಯುಕ್ತರ ಈ ಹಠಾತ್ ಪರಿಶೀಲನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸಂಬಂಧಪಟ್ಟ ಇಲಾಖೆಗಳ ಕಾರ್ಯವೈಖರಿ ಕುರಿತು ಗಂಭೀರ ಸಂದೇಶ ರವಾನಿಸಿದಂತಾಗಿದೆ.
Karnataka upa Lokayutka Justice Beerappa visit Udupi



