ಏನಿದು ಹಿಜ್ಬುಲ್ಲಾ? ಲೆಬನಾನ್ ದೇಶದ ಸೈನ್ಯಕ್ಕಿಂತ ಬಲಶಾಲಿ ಈ ಉಗ್ರ ಸಂಘಟನೆ!
Israel vs Hezbollah: ಹಿಜ್ಬುಲ್ಲಾದ ಶಕ್ತಿ ಕೇವಲ ಬಂದೂಕಿನಲ್ಲಷ್ಟೇ ಇಲ್ಲ, ಅದು ಜನರ ದೈನಂದಿನ ಬದುಕಿನಲ್ಲೂ ಹಾಸುಹೊಕ್ಕಾಗಿದೆ. ಲೆಬನಾನ್‌ನ ದಕ್ಷಿಣ ಭಾಗ ಮತ್ತು ಬೈರುತ್‌ನ ಅನೇಕ ಪ್ರದೇಶಗಳಲ್ಲಿ ಹಿಜ್ಬುಲ್ಲಾ ತನ್ನದೇ ಆದ ಆಸ್ಪತ್ರೆಗಳು, ಶಾಲೆಗಳು, ಬ್ಯಾಂಕುಗಳು ಮತ್ತು ಟಿವಿ ಚಾನೆಲ್‌ಗಳನ್ನು ನಡೆಸುತ್ತಿದೆ.
ಮಧ್ಯಪ್ರಾಚ್ಯದ ಭೂಪಟದಲ್ಲಿ ಇಸ್ರೇಲ್ (Israel) ಎಂಬ ಪುಟ್ಟ ದೇಶದ ನಿದ್ದೆಗೆಡಿಸಿರುವ ಹೆಸರು ‘ಹಿಜ್ಬುಲ್ಲಾ’. ಇಂದು ಜಗತ್ತಿನಾದ್ಯಂತ ಸುದ್ದಿಯಾಗುತ್ತಿರುವ ಈ ಉಗ್ರಗಾಮಿ ಸಂಘಟನೆ (Hezbollah) ಕೇವಲ ಒಂದು ಸಶಸ್ತ್ರ ಪಡೆಯಲ್ಲ; ಇದು ಇರಾನ್‌ನ ನೆರಳಿನಂತೆ ಕೆಲಸ ಮಾಡುವ, ಲೆಬನಾನ್ ದೇಶದ ರಕ್ತನಾಳಗಳಲ್ಲಿ ಹರಿದಿರುವ ಒಂದು ಬೃಹತ್ ವ್ಯವಸ್ಥೆ. ದಶಕಗಳಿಂದ ಇಸ್ರೇಲ್ ವಿರುದ್ಧದ ಹೋರಾಟವನ್ನೇ (Israel vs Hezbollah) ತನ್ನ ಉಸಿರಾಗಿಸಿಕೊಂಡಿರುವ ಈ ಉಗ್ರಗಾಮಿ ಸಂಘಟನೆ, ಇಂದು ತನ್ನ ಇತಿಹಾಸದಲ್ಲೇ ಅತ್ಯಂತ ಕಠಿಣ ಸವಾಲನ್ನು ಎದುರಿಸುತ್ತಿದೆ. ಬಲಿಷ್ಠ ನಾಯಕರ ಸಾವು, ಕದನ ವಿರಾಮದ ಉಲ್ಲಂಘನೆ ಮತ್ತು ಆಧುನಿಕ ಯುದ್ಧ ತಂತ್ರಗಳ ನಡುವೆ ಸಿಲುಕಿರುವ ಹಿಜ್ಬುಲ್ಲಾ ಅಸಲಿಗೆ ಹುಟ್ಟಿದ್ದೇಕೆ? ಅದರ ಶಕ್ತಿ ಎಷ್ಟು? ಈ ಮಹಾಯುದ್ಧದಲ್ಲಿ ಅದರ ಪಾತ್ರವೇನು? ಎಂಬ ಸಮಗ್ರ ವಿವರಣೆ ಇಲ್ಲಿದೆ.
ಹಿಜ್ಬುಲ್ಲಾ ಅಂದರೆ ಅರೇಬಿಕ್‌ನಲ್ಲಿ ‘ದೇವರ ಸೈನ್ಯ’ ಎಂದರ್ಥ. ಇದು ಕೇವಲ ಒಂದು ಉಗ್ರಗಾಮಿ ಗುಂಪಲ್ಲ, ಬದಲಿಗೆ ಲೆಬನಾನ್ ದೇಶದೊಳಗೆ ಬೇರೂರಿರುವ ಒಂದು ಬೃಹತ್ ವ್ಯವಸ್ಥೆ. 1980ರ ದಶಕದಲ್ಲಿ ಲೆಬನಾನ್ ಅಂತರ್ಯುದ್ಧದ ಕಿಚ್ಚಿನಲ್ಲಿ ಬೆಂದಾಗ, ಇಸ್ರೇಲ್ ಆಕ್ರಮಣವನ್ನು ಎದುರಿಸಲು ಇರಾನ್ ನೀಡಿದ ಬೆಂಬಲದಿಂದ ಈ ಶಿಯಾ ಮುಸ್ಲಿಂ ಸಂಘಟನೆ ಜನ್ಮತಾಳಿತು. ಅಂದಿನಿಂದ ಇಂದಿನವರೆಗೆ ಇರಾನ್ ಈ ಸಂಘಟನೆಗೆ ಕೋಟ್ಯಂತರ ರೂಪಾಯಿ ಹಣ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಾ ಬಂದಿದೆ. ಇಂದು ಹಿಜ್ಬುಲ್ಲಾ ಎಷ್ಟು ಪ್ರಬಲವಾಗಿದೆಯೆಂದರೆ, ಲೆಬನಾನ್‌ನ ಅಧಿಕೃತ ಸರ್ಕಾರಿ ಸೈನ್ಯಕ್ಕಿಂತಲೂ ಈ ಗುಂಪಿನ ಬಳಿ ಹೆಚ್ಚಿನ ಯುದ್ಧ ಸಾಮಗ್ರಿ ಹಾಗೂ ಸುಸಜ್ಜಿತ ಯೋಧರಿದ್ದಾರೆ ಎನ್ನಲಾಗುತ್ತದೆ.
ರಾಜಕೀಯ ಶಕ್ತಿ ಮತ್ತು ‘ರಾಜ್ಯದೊಳಗೊಂದು ರಾಜ್ಯ
ಹಿಜ್ಬುಲ್ಲಾದ ಶಕ್ತಿ ಕೇವಲ ಬಂದೂಕಿನಲ್ಲಷ್ಟೇ ಇಲ್ಲ, ಅದು ಜನರ ದೈನಂದಿನ ಬದುಕಿನಲ್ಲೂ ಹಾಸುಹೊಕ್ಕಾಗಿದೆ. ಲೆಬನಾನ್‌ನ ದಕ್ಷಿಣ ಭಾಗ ಮತ್ತು ಬೈರುತ್‌ನ ಅನೇಕ ಪ್ರದೇಶಗಳಲ್ಲಿ ಹಿಜ್ಬುಲ್ಲಾ ತನ್ನದೇ ಆದ ಆಸ್ಪತ್ರೆಗಳು, ಶಾಲೆಗಳು, ಬ್ಯಾಂಕುಗಳು ಮತ್ತು ಟಿವಿ ಚಾನೆಲ್‌ಗಳನ್ನು ನಡೆಸುತ್ತಿದೆ. ಜನರು ಇಸ್ರೇಲ್ ವಿರುದ್ಧದ ಹೋರಾಟಕ್ಕಿಂತ ಹೆಚ್ಚಾಗಿ ಈ ಸಾಮಾಜಿಕ ಸೇವೆಗಳಿಗಾಗಿಯೇ ಹಿಜ್ಬುಲ್ಲಾವನ್ನು ಬೆಂಬಲಿಸುತ್ತಾರೆ. ಲೆಬನಾನ್ ಸಂಸತ್ತಿನಲ್ಲಿ ಪ್ರಭಾವಿ ಸ್ಥಾನ ಹೊಂದಿರುವ ಈ ಸಂಘಟನೆಯ ಅನುಮತಿಯಿಲ್ಲದೆ ದೇಶದಲ್ಲಿ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದು ಅಸಾಧ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣಕ್ಕಾಗಿಯೇ ಇದನ್ನು ಜಗತ್ತು ‘ರಾಜ್ಯದೊಳಗೊಂದು ರಾಜ್ಯ’ ಎಂದು ಕರೆಯುತ್ತದೆ.
ಬಾಂಬ್ ಮತ್ತು ರಾಕೆಟ್‌ಗಳ ಭಂಡಾರ
ಮಿಲಿಟರಿ ತಜ್ಞರ ಪ್ರಕಾರ, ಹಿಜ್ಬುಲ್ಲಾ ವಿಶ್ವದ ಅತ್ಯಂತ ಶಕ್ತಿಶಾಲಿ ಸರ್ಕಾರೇತರ ಸಶಸ್ತ್ರ ಪಡೆ. ಇವರ ಬಳಿ ಸುಮಾರು 1.5 ಲಕ್ಷಕ್ಕೂ ಹೆಚ್ಚು ರಾಕೆಟ್‌ಗಳು ಮತ್ತು ಕ್ಷಿಪಣಿಗಳಿವೆ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಕೆಲವು ಕ್ಷಿಪಣಿಗಳು ಇಸ್ರೇಲ್‌ನ ಯಾವುದೇ ನಗರವನ್ನು ತಲುಪುವ ಸಾಮರ್ಥ್ಯ ಹೊಂದಿವೆ. ಈ ಶಸ್ತ್ರಾಸ್ತ್ರಗಳ ಬಲದಿಂದಲೇ ಹಿಜ್ಬುಲ್ಲಾ ದಶಕಗಳಿಂದ ಇಸ್ರೇಲ್‌ಗೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ಬಳಸುತ್ತಿರುವ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಪೇಜರ್ ಸ್ಫೋಟದಂತಹ ಕಾರ್ಯಾಚರಣೆಗಳು ಹಿಜ್ಬುಲ್ಲಾದ ಆಂತರಿಕ ಸಂವಹನ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿವೆ.
ಪ್ರಧಾನಿ ನೆತನ್ಯಾಹು ಸಾವಿನ ವದಂತಿ ತಳ್ಳಿಹಾಕಿದ ಇಸ್ರೇಲ್; 6 ಬೆರಳುಗಳ ವಿಡಿಯೋ ಸೃಷ್ಟಿಸಿದ ವಿವಾದ!
ನಸ್ರಲ್ಲಾ ನಂತರದ ಅನಿಶ್ಚಿತತೆ ಮತ್ತು 2026ರ ಕದನ
ಸುಮಾರು ಮೂರು ದಶಕಗಳ ಕಾಲ ಹಿಜ್ಬುಲ್ಲಾವನ್ನು ಪರ್ವತದಂತೆ ಮುನ್ನಡೆಸಿದ್ದ ಹಸನ್ ನಸ್ರಲ್ಲಾ 2024ರಲ್ಲಿ ಇಸ್ರೇಲಿ ದಾಳಿಗೆ ಬಲಿಯಾದದ್ದು ಈ ಸಂಘಟನೆಗೆ ಇತಿಹಾಸದಲ್ಲೇ ಬಿದ್ದ ದೊಡ್ಡ ಹೊಡೆತ. ಪ್ರಸ್ತುತ ನಯೀಮ್ ಖಾಸಿಮ್ ನೇತೃತ್ವದಲ್ಲಿ ಸಂಘಟನೆ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ, 2026ರ ಫೆಬ್ರವರಿಯಲ್ಲಿ ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕದನ ವಿರಾಮ ಮುರಿದು ಬಿದ್ದಿದ್ದು, ಹಿಜ್ಬುಲ್ಲಾ ಈಗ ಇರಾನ್ ಪರವಾಗಿ ಇಸ್ರೇಲ್ ಮೇಲೆ ಮತ್ತೆ ಯುದ್ಧ ಘೋಷಿಸಿದೆ. ಇಸ್ರೇಲ್‌ನ ವಿನಾಶಕಾರಿ ವೈಮಾನಿಕ ದಾಳಿಗಳಿಂದಾಗಿ ಹಿಜ್ಬುಲ್ಲಾದ ನೂರಾರು ನೆಲೆಗಳು ಧ್ವಂಸಗೊಂಡಿದ್ದು, ಈ ಸಂಘಟನೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಈಗ ಸಾವು-ಬದುಕಿನ ಹೋರಾಟ ನಡೆಸುತ್ತಿದೆ.
[youtube https://www.youtube.com/watch?v=FGpRUF5yn_Q]



