ಸಿಎಂ, ಡಿಸಿಎಂ ಬಳಿಕ ಕಾಂಗ್ರೆಸ್ ಶಾಸಕರಿಂದ ಶಕ್ತಿ ಪ್ರದರ್ಶನ : 30ಕ್ಕೂ ಅಧಿಕ ಜನಪ್ರತಿನಿಧಿಗಳಿಂದ ಡಿನ್ನರ್ ಪಾಲಿಟಿಕ್ಸ್
ಇದೇ ಮೊದಲ ಬಾರಿಗೆ ಕೇವಲ ಕಾಂಗ್ರೆಸ್ ಶಾಸಕರು ದಿಢೀರ್ ಸಭೆ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ರಾಜ್ಯದಲ್ಲಿ ಸದ್ಯ ಅಧಿಕಾರ ಬದಲಾವಣೆ ಎನ್ನುವುದು ಆರಕ್ಕೇರದು, ಮೂರಕ್ಕೆ ಇಳಿಯದು ಎಂಬಂತಾಗಿದೆ. ಕೇವಲ ಸರಣಿ ಸಭೆಗಳು , ಔತಣಕೂಟಗಳು ನಡೆಯುತ್ತಿವೆ . ಆದರೆ ಅಧಿಕಾರ ಬದಲಾವಣೆಯ ಸಣ್ಣ ಲಕ್ಷಣಗಳೂ ಗೋಚರವಾಗುತ್ತಿಲ್ಲ. ಒಮ್ಮೆ ಸಿಎಂ ಬಣ ಮತ್ತೊಮ್ಮೆ ಡಿಸಿಎಂ ಬಣ ಹೀಗೆ ಶಕ್ತಿ ಪ್ರದರ್ಶನಗಳು ನಡೆಯುತ್ತಲೇ ಇದೆ. ಆದರೆ ಈ ಎಲ್ಲದರ ನಡುವೆ ಇದೇ ಮೊದಲ ಬಾರಿಗೆ ಕೇವಲ ಕಾಂಗ್ರೆಸ್ ಶಾಸಕರು ದಿಢೀರ್ ಸಭೆ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
30ಕ್ಕೂ ಅಧಿಕ ಕಾಂಗ್ರೆಸ್ ಶಾಸಕರು ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಡಿನ್ನರ್ ಸಭೆ ನಡೆಸಿದ್ದಾರೆ. ಈ ಡಿನ್ನರ್ ಸಭೆಯಲ್ಲಿ ಕೆಲ ಹಿರಿಯ ಶಾಸಕರು ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ. ಮೊದಲ ಬಾರಿಗೆ ಆಯ್ಕೆಯಾದ ಶಾಸಕರನ್ನೂ ಸಂಪುಟಕ್ಕೆ ಪರಿಗಣಿಸಬೇಕೆಂಬ ಕೂಗಿನ ಬೆನ್ನಲ್ಲೇ ಈ ಸಭೆ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: By Polls in Karnataka: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಉಪಚುನಾವಣೆ; ಏಪ್ರಿಲ್ 9ಕ್ಕೆ ವೋಟಿಂಗ್!
ಕೆಲವು ದಿನಗಳ ಹಿಂದೆಯಷ್ಟೇ ಡಿಸಿಎಂ ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷದ ಅಧಿಕಾರಾವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದರು. ಇದಾದ ಬಳಿಕ ಸಿಎಂ ಸಿದ್ದರಾಮಯ್ಯ ಸೋಮವಾರದಂದು 14 ಮಂದಿ ಶಾಸಕರೊಂದಿಗೆ ಕಾವೇರಿ ನಿವಾಸದಲ್ಲಿ ಡಿನ್ನರ್ ಸಭೆ ನಡೆಸಿದ್ದರು. ಈ ಎಲ್ಲದರ ಬೆನ್ನಲ್ಲೇ ಇದೀಗ ಎಲ್ಲಾ ಶಾಸಕರು ಒಂದಾಗಿ ಸಭೆ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.



