ಕಬ್ಬು ಬಿಲ್ ಪಾವತಿ ಮಾಡದ ಸರ್ಕಾರಿ ಕಾರ್ಖಾನೆಗಳಿಗೆ ರಿಕವರಿ ಸರ್ಟಿಫಿಕೇಟ್
ಬೆಂಗಳೂರು : ಕಬ್ಬು ಪೂರೈಕೆ ಮಾಡಿರುವ ರೈತರಿಗೆ (Sugarcane Farmers) ಕೊಡಬೇಕಾದ ಬಾಕಿ ಬಿಲ್ ಪಾವತಿ ಮಾಡದೇ ಸತಾಯಿಸುತ್ತಿರುವ ರಾಜ್ಯದ 16 ಸಕ್ಕರೆ ಕಾರ್ಖಾನೆಗಳಿಗೆ ರಾಜ್ಯ ಸರ್ಕಾರ ಛಾಟಿ ಬೀಸಿದೆ. ಈ ಎಲ್ಲಾ ಸಕ್ಕರೆ ಕಾರ್ಖಾನೆಗಳ ಕಬ್ಬಿನ ಬಿಲ್ ಬಾಕಿಯನ್ನು ಕಂದಾಯ ಬಾಕಿ ಎಂದು ಪರಿಗಣಿಸಿ ರಿಕವರಿ ಸರ್ಟಿಫಿಕೇಟ್ ಯಾನೆ ವಸೂಲಾತಿ ದೃಢೀಕರಣ ಪತ್ರ ಜಾರಿ ಮಾಡಲಾಗಿದೆ.
ರಾಜ್ಯದಲ್ಲಿ ಪ್ರಸ್ತುತ ವರ್ಷ ಒಟ್ಟೂ 81 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ಕೈಗೊಂಡಿದ್ದವು. ಈ ಪೈಕಿ 16 ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಇದನ್ನು ಕಂದಾಯ ಬಾಕಿ ಎಂದು ಪರಿಗಣಿಸಿ 15 ಪ್ರತಿಶತ ಬಡ್ಡಿಯೊಂದಿಗೆ ರೈತರಿಗೆ ಹಣ ಪಾವತಿ ಮಾಡುವಂತೆ ಸಕ್ಕರೆ ಕಾರ್ಖನೆಗಳಿಗೆ ನೋಟಿಸ್ ನೀಡುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಕಬ್ಬು ಅಭಿವೃದ್ಧಿ ಆಯುಕ್ತ ಹಾಗೂ ಸಕ್ಕರೆ ನಿರ್ದೇಶಕ ಗೋವಿಂದ ರೆಡ್ಡಿ ಸೂಚನೆ ನೀಡಿದ್ದಾರೆ.
ಈಗಾಗಲೇ ಕಬ್ಬಿನ ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ದ ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿತ್ತು. ಆದರೆ ಸರ್ಕಾರದ ನೋಟಿಸ್ ಬಳಿಕವೂ ಈ ಕಾರ್ಖಾನೆಗಳು ರೈತರಿಗೆ ಬಾಕಿ ಹಣಪಾವತಿ ಮಾಡುವ ನಿರ್ಧಾರಕ್ಕೆ ಬಂದಿರಲಿಲ್ಲ. ಇದರಿಂದ ರೈತರಿಗೆ ತೀವ್ರ ಸಂಕಷ್ಟ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿರುವ ರಾಜ್ಯ ಸರ್ಕಾರ ಇಂತಹ ಕಾರ್ಖಾನೆಗಳಿಗೆ ರಿಕವರಿ ಸರ್ಟಿಫಿಕೇಟ್ ಜಾರಿ ಮಾಡುವ ಮೂಲಕ ತಕ್ಕ ಶಾಸ್ತಿ ನೀಡಿದೆ.
ಇದನ್ನೂ ಓದಿ: ಶ್ರೀಗಂಧಕಾವಲ್ ವಾಯುಪಡೆ ವಶದಲ್ಲಿರುವ ಜಾಗ ಶೀಘ್ರದಲ್ಲೇ ಮರುವಶ: ಸಚಿವ ಈಶ್ವರ ಖಂಡ್ರೆ
ಕಬ್ಬಿನ ಬಿಲ್ ಪಾವತಿ ವಿಚಾರದಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿರುವ ದುಃಖಕರ ವಿಚಾರವಾಗಿದೆ. 2022-23ರ ಹಂಗಾಮಿನಲ್ಲಿ ಪ್ರತಿಶತ 102ರಷ್ಟು, 2023-24ರ ಹಂಗಾಮಿನಲ್ಲಿ ಪ್ರತಿಶತ 104ರಷ್ಟು ಹಾಗೂ 2024-25ನೇ ಹಂಗಾಮಿನಲ್ಲಿ ಪ್ರತಿಶತ 107.39ರಷ್ಟು ಹಣವನ್ನು ಪಾವತಿ ಮಾಡಲಾಗಿದ್ದು, ಇದು ಎಫ್.ಆರ್.ಪಿ ದರಕ್ಕಿಂತ ಹೆಚ್ಚಿದೆ. ಕಳೆದ ಹಂಗಾಮಿಗೆ ಹೋಲಿಕೆ ಮಾಡಿದರೆ ಕಾರ್ಖಾನೆಗಳು ಘೋಷಿಸಿದ ದರದಂತೆ ಪ್ರತಿ ಟನ್ ಕಬ್ಬಿಗೆ 250ರಿಂದ 300 ರೂ. ಹೆಚ್ಚಳವಾಗಿದೆ. ಕಬ್ಬಿನ ಬಿಲ್ ಪಾವತಿಯನ್ನು ಹೋಲಿಕೆ ಮಾಡಿದರೆ ಕಳೆದ ಹಂಗಾಮಿಗಿಂತ 4,709.89 ಕೋಟಿ ರೂ. ಹೆಚ್ಚಳವಾಗಲಿದೆ. ಕಳೆದ ಹಂಗಾಮಿಗೆ ಹೋಲಿಕೆ ಮಾಡಿದರೆ ಈ ಹಂಗಾಮಿನಲ್ಲಿ, ಕಬ್ಬು ನುರಿಸುವಿಕೆ ಮತ್ತು ಸಕ್ಕರೆ ಉತ್ಪಾದನೆ ಪ್ರಮಾಣದಲ್ಲಿ ಪ್ರತಿಶತ 9 ರಷ್ಟು ಏರಿಕೆಯಾಗಿದೆ.



