ಕರಾವಳಿ, ಮಲೆನಾಡಿನ ಹವಾಮಾನದಲ್ಲಿ ದಿಢೀರ್ ಬದಲಾವಣೆ : ಕರಾವಳಿ ಭಾಗದಲ್ಲಿ ಇಂದು ಮತ್ತೆ ಮಳೆ..!
Karnataka Weather Report: ಕಳೆದು ಕೆಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಕಂಗಾಲಾಗಿ ಹೋಗಿರುವ ರಾಜ್ಯದ ಜನತೆಗೆ ಇಂದು ಹವಾಮಾನ ಇಲಾಖೆಯಿಂದ ಗುಡ್ನ್ಯೂಸ್ ದೊರಕಿದೆ. ರಾಜ್ಯದ ಹವಾಮಾನದಲ್ಲಿ ದಿಢೀರ್ ಬದಲಾವಣೆಯಾಗಿದ್ದು ಇಂದು ವಿವಿಧ ಜಿಲ್ಲೆಗಳಲ್ಲಿ ವರುಣನ ಸಿಂಚನವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನಿನ್ನೆ ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ನಷ್ಟಿತ್ತು. ಆದರೆ ಅನುಭವ ಮಾತ್ರ 40 ಡಿಗ್ರಿ ಸೆಲ್ಸಿಯಸ್ನಂತೆ ಆಗುತ್ತಿತ್ತು. ಆದರೆ ಈಗ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಮಳೆಯ ಸಿಂಚನವಾಗುವ ಮುನ್ಸೂಚನೆ ಸಿಕ್ಕಿದೆ.
ಇಂದು ಸಂಜೆ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಗುಡುಗು ಸಹಿತ ತುಂತುರು ಮಳೆಯಾಗುವ ಲಕ್ಷಣಗಳಿವೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ. ಮುಖ್ಯವಾಗಿ ಉಡುಪಿ ಜಿಲ್ಲೆಯ ಕಾರ್ಕಳ , ಹೆಬ್ರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಸುಬ್ರಮಣ್ಯ, ಬೆಳ್ತಂಗಡಿ ,ಧರ್ಮಸ್ಥಳ ಪರಿಸರ ಮತ್ತು ಮಲೆನಾಡು ಭಾಗದ ಕೊಡಗು, ಮೂಡಿಗೆರೆ ಹಾಗೂ ಬಾಳೆಹೊನ್ನೂರು ಭಾಗಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಕರಾವಳಿ ಭಾಗದಲ್ಲಿ ಇಂದು ಸೂರ್ಯನ ಅಟ್ಟಹಾಸ : ತೇವಾಂಶ ಭರಿತ ವಾತಾವರಣದಿಂದ ಜನತೆ ಹೈರಾಣಾಗೋದು ಪಕ್ಕಾ
ಕರಾವಳಿಯಲ್ಲಿ ನಿನ್ನೆ ಉಂಟಾಗಿದ್ದ “ಭಯಂಕರ” ಸೆಖೆಗೆ ಇಂದಿನ ಮಳೆ ಕೊಂಚ ತಂಪು ನೀಡುವ ನಿರೀಕ್ಷೆಯಿದೆ. ಆದರೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ವಿಶೇಷವಾಗಿ ಗುಡುಗು ಸಂಭವಿಸುವಾಗ ಮರದ ಕೆಳಗೆ ಅಥವಾ ಬಯಲು ಪ್ರದೇಶಗಳಲ್ಲಿ ಇರಬಾರದೆಂದು ಸೂಚಿಸಲಾಗಿದೆ.ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಸಂಜೆಯ ವೇಳೆಗೆ ವರುಣನ ಸಿಂಚನವಾಗಲಿದೆ.



