ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಬಿಗ್​ಶಾಕ್​ : ಸತತ ಎರಡನೇ ವರ್ಷವೂ ಫೀಸ್​​ ಹೈಕ್​..!

ಕಳೆದ ವರ್ಷವಷ್ಟೇ ಇಂಜಿನಿಯರಿಂಗ್​ ವಿದ್ಯಾರ್ಥಿಗಳ ಶುಲ್ಕದಲ್ಲಿ ಏರಿಕೆ ಮಾಡಿದ್ದ ರಾಜ್ಯ ಸರ್ಕಾರವು, ಈ ವರ್ಷವೂ ಈ ಅಭ್ಯಾಸವನ್ನು ಮುಂದುವರಿಸಿದೆ.

ಪ್ರಸಕ್ತ ವರ್ಷದ ತಾಂತ್ರಿಕ ಶಿಕ್ಷಣದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಬಿಗ್​ ಶಾಕ್​ ನೀಡಿದೆ. ಕಳೆದ ವರ್ಷವಷ್ಟೇ ಇಂಜಿನಿಯರಿಂಗ್​ ವಿದ್ಯಾರ್ಥಿಗಳ ಶುಲ್ಕದಲ್ಲಿ (Engineering Fees) ಏರಿಕೆ ಮಾಡಿದ್ದ ರಾಜ್ಯ ಸರ್ಕಾರವು, ಈ ವರ್ಷವೂ ಈ ಅಭ್ಯಾಸವನ್ನು ಮುಂದುವರಿಸಿದೆ. 2026-27ನೇ ಸಾಲಿನ ಇಂಜಿನಿಯರ್​ ಕೋರ್ಸ್ ಶುಲ್ಕದಲ್ಲಿ 7.5 ಪರ್ಸೆಂಟ್​ನಷ್ಟು ಏರಿಕೆ ಮಾಡಲಾಗಿದೆ. ಸರ್ಕಾರದ ಈ ನಿರ್ಧಾರ ಇಂಜಿನಿಯರಿಂಗ್​ ಕನಸು ಕಾಣುತ್ತಿರುವ ವಿದ್ಯಾರ್ಥಿಗಳ ಪೋಷಕರ ಕಣ್ಣು ಕೆಂಪಗಾಗಿಸಿದೆ.

ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಸೀಟು ಪಡೆದುಕೊಳ್ಳುವ ವಿದ್ಯಾರ್ಥಿಗಳು ಇನ್ಮುಂದೆ ಹೆಚ್ಚಿನ ಶುಲ್ಕ ಪಾವತಿ ಮಾಡಬೇಕಾಗಿ ಬರಲಿದೆ. ಟೈಪ್​ 1 ಕಾಲೇಜುಗಳಲ್ಲಿ 81,900 ರೂಪಾಯಿಗಳ ಶುಲ್ಕದ ಬದಲಾಗಿ 87,935 ರೂಪಾಯಿ ಪಾವತಿ ಮಾಡಬೇಕಾಗಿ ಬರಲಿದೆ. ಅಂತೆಯೇ ಟೈಪ್​ 2 ಕಾಲೇಜುಗಳಲ್ಲಿ 91,000 ರೂಪಾಯಿ ಇದ್ದ ಶುಲ್ಕವು 97,825 ರೂಪಾಯಿಗಳಿಗೆ ಏರಿಕೆ ಕಾಣುತ್ತಿದೆ.

ಇನ್ನು ಕಳೆದ ವರ್ಷ ಕೂಡ ತಾಂತ್ರಿಕ ಶಿಕ್ಷಣದ ಕೋರ್ಸ್​ಗಳ ಶುಲ್ಕವನ್ನು 7.5 ಪರ್ಸೆಂಟ್​ ಏರಿಕೆ ಮಾಡಲಾಗಿತ್ತು. ಕಳೆದ ವರ್ಷವಷ್ಟೇ ಶುಲ್ಕ ಏರಿಕೆಯಾಗಿದ್ದರಿಂದ ಈ ವರ್ಷ ಆ ರೀತಿಯ ನಿರ್ಧಾರ ಸರ್ಕಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದೇ ಪೋಷಕರು ಭಾವಿಸಿದ್ದರು. ಆದರೆ ಸತತ 2ನೇ ಬಾರಿಗೆ ಸರ್ಕಾರ ಇಂಜಿನಿಯರಿಂಗ್​ ಶಿಕ್ಷಣದ ಶುಲ್ಕ ಏರಿಕೆ ಮಾಡಿ ಪೋಷಕರ ಜೇಬಿಗೆ ಕತ್ತರಿ ಹಾಕಿದೆ.

ಇದನ್ನೂ ಓದಿ: ಮುದ್ರಿತ ಅಂಕಪಟ್ಟಿಗೆ ಕೊಕ್​​..! 2027ರಿಂದ ವಿದ್ಯಾರ್ಥಿಗಳಿಗಿಲ್ಲ ಮುದ್ರಿತ ಅಂಕಪಟ್ಟಿ – ಸಚಿವ ಮಧು ಬಂಗಾರಪ್ಪ ಮಾಹಿತಿ

ದಿನಬಳಕೆ ವಸ್ತುಗಳ ಬೆಲೆ ಏರಿಕೆ ಕಾಣುತ್ತಿರುವ ನಡುವೆಯೇ ಜೀವನ ನಡೆಸುವುದು ಕಷ್ಟವಾಗಿದೆ.ಇದೀಗ ವಿದ್ಯಾರ್ಥಿಗಳ ಶಿಕ್ಷಣವನ್ನೂ ಈ ರೀತಿ ಮನಬಂದಂತೆ ಏರಿಕೆ ಮಾಡುತ್ತಾ ಹೋದರೆ ಜನಸಾಮಾನ್ಯರ ಕತೆಯೇನು ? ಸರ್ಕಾರಿ ಕೋಟಾದ ಸೀಟುಗಳೇ ದುಬಾರಿಯಾದರೆ ಆ ಪದಕ್ಕೊಂದು ಅರ್ಥವಿದೆಯೇ ? ಎಂದು ಪೋಷಕರು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories