ಉಡುಪಿ ಧಗಧಗ.. ಉಸಿರುಗಟ್ಟಿಸುವ ಸೆಖೆಗೆ ಕರಾವಳಿ ಕಂಗಾಲು

ಅಷ್ಟಕ್ಕೂ ಈ ವರ್ಷ ನಮ್ಮ ಉಡುಪಿ ಯಾಕಿಷ್ಟು ಸುಡ್ತಿದೆ ? ಇದಕ್ಕೆ ಕಾರಣವೇನು ?

ಉಡುಪಿ :  ಕರಾವಳಿಯಲ್ಲೀಗ ನೆತ್ತಿ ಸುಡುವ ಬಿಸಿಲು, ಬಿಸಲ ಝಳಕ್ಕೆ ಜನರು ಹೈರಾಣಾಗಿದ್ದಾರೆ. ಮನೆಯೊಳಗಿದ್ರೆ ಸೆಕೆ ಹೊರಗಡೆ ಬಂದ್ರೆ ಸೂರ್ಯನ ಕೆಂಗಣ್ಣು! ಸಮುದ್ರದ ತಂಗಾಳಿ ಸಿಗಬೇಕಾದ ಕರಾವಳಿಯಲ್ಲಿ ಈಗ ಬಿಸಿ ಆವಿಯ ಸ್ನಾನ ಆಗ್ತಿದೆ. ಜನರಷ್ಟೇ ಅಲ್ಲ, ದೇವಸ್ಥಾನದ ಗರ್ಭಗುಡಿಯೊಳಗಿರೋ ದೇವರಿಗೂ ಸೆಖೆಯಾಗುವಷ್ಟು ತಾಪಮಾನ ಏರಿಕೆಯಾಗಿದೆ. ಅಷ್ಟಕ್ಕೂ ಈ ವರ್ಷ ನಮ್ಮ ಉಡುಪಿ ಯಾಕಿಷ್ಟು ಸುಡ್ತಿದೆ ? ಇದಕ್ಕೆ ಕಾರಣವೇನು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೌದು, ಉಡುಪಿಯ ಹವಾಮಾನ ಈಗ ಅಕ್ಷರಶಃ ರೊಚ್ಚಿಗೆದ್ದಿದೆ. ತಾಪಮಾನ 35 ಡಿಗ್ರಿ ತೋರಿಸ್ತಿದ್ರೂ, ನಮಗೆ ಫೀಲ್ ಆಗ್ತಿರೋದು ಮಾತ್ರ 42 ಡಿಗ್ರಿ ! ಇದಕ್ಕೆ ಮೊದಲ ಕಾರಣ ಗಾಳಿಯಲ್ಲಿರೋ ಆರ್ದ್ರತೆ (Humidity). ಉಡುಪಿಯಲ್ಲಿ ಹ್ಯುಮಿಡಿಟಿ 80% ದಾಟಿದೆ. ಹೀಗಾಗಿ ಬೆವರು ಆವಿಯಾಗದೆ ಇಡೀ ದೇಹ ಉಸಿರುಗಟ್ಟಿದಂತಾಗ್ತಿದೆ.

ಇದನ್ನೂ ಓದಿ : ಕೇರಳದಲ್ಲಿ ಮತ್ತೆ ಚಿಕುನ್​ ಗುನ್ಯಾ ಅಬ್ಬರ ! ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್

ಇದಕ್ಕೆಲ್ಲಾ ನಾವು ಮಾಡಿರೋ ಕಾಡು ನಾಶವೇ ಕಾರಣವಾ? ಹೌದು ಎನ್ನುತ್ತಾರೆ ತಜ್ಞರು. ಅರಬ್ಬಿ ಸಮುದ್ರದ ಮೇಲ್ಮೈ ಉಷ್ಣಾಂಶ ಹೆಚ್ಚಾಗಿರೋದ್ರಿಂದ ಈ ಬಾರಿ ಕರಾವಳಿ ಭಾಗದಲ್ಲಿ ‘ಹೀಟ್ ಡೋಮ್’ (Heat Dome) ಎಫೆಕ್ಟ್ ಶುರುವಾಗಿದೆ. ಮಳೆ ಬರೋ ಮುನ್ನವೇ ಜನ ಅಕ್ಷರಶಃ ಹೈರಾಣಾಗಿದ್ದಾರೆ.

ಬಿಸಿಲ ಸೆಖೆ ಹೆಚ್ಚಳಕ್ಕೆ ಪ್ರಮುಖ ಕಾರಣಗಳು

ಈ ಬಿಸಿಲಿಗೆ ಕಾರಣವೇನು? ತಜ್ಞರ ಪ್ರಕಾರ ಮುಖ್ಯವಾಗಿ ‘ಎಲ್ ನಿನೊ’ ಪ್ರಭಾವ ಕರಾವಳಿಯ ಮೇಲೆ ಜೋರಾಗಿದೆ. ಇದರಿಂದ ಸಮುದ್ರದ ಗಾಳಿಯಲ್ಲಿ ತಂಪು ಮಾಯವಾಗಿ ಶಾಖ ಹೆಚ್ಚಾಗಿದೆ. ಎರಡನೆಯದಾಗಿ, ಉಡುಪಿ ನಗರ ವೇಗವಾಗಿ ಬೆಳೆಯುತ್ತಿದೆ. ಹಸಿರು ಮಾಯವಾಗಿ ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತಿವೆ. ಮರಗಳಿಲ್ಲದ ಕಾರಣ ಭೂಮಿ ತಣ್ಣಗಾಗಲು ಸಮಯ ತೆಗೆದುಕೊಳ್ಳುತ್ತಿದೆ. ಕಳೆದ ವರ್ಷದ ಮುಂಗಾರು ಮಳೆಯ ಕೊರತೆಯೂ ಇಂದು ಈ ಪರಿಸ್ಥಿತಿಗೆ ನೇರ ಕಾರಣವಾಗಿದೆ.

ಇದನ್ನೂ ಓದಿ : ಮೊಡವೆ ಸಮಸ್ಯೆಯಿಂದ ಬೇಸತ್ತಿದ್ದೀರಾ? ಮುಖದ ಕಾಂತಿ ಹೆಚ್ಚಿಸಲು ಇಲ್ಲಿವೆ 5 ಸರಳ ಮನೆಮದ್ದು

ಆರೋಗ್ಯ ಮುನ್ನೆಚ್ಚರಿಕೆ ಮತ್ತು ವೈದ್ಯರ ಸಲಹೆ

ಈ ಹೊತ್ತಿನಲ್ಲಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಉಡುಪಿ ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬಿಸಿಲಿಗೆ ಸಂಬಂಧಿಸಿದ ‘ಹೀಟ್ ಸ್ಟ್ರೋಕ್’ ಮತ್ತು ‘ಡಿಹೈಡ್ರೇಶನ್’ ಪ್ರಕರಣಗಳು ಹೆಚ್ಚುತ್ತಿವೆ. ಜಿಲ್ಲಾಡಳಿತ ಈಗಾಗಲೇ ಮಾರ್ಗಸೂಚಿ ಹೊರಡಿಸಿದೆ. ಮಧ್ಯಾಹ್ನ 12 ರಿಂದ 4 ರವರೆಗೆ ನೇರ ಬಿಸಿಲಿಗೆ ಹೋಗಬೇಡಿ. ಅತಿಯಾದ ಟೀ-ಕಾಫಿ ಬಿಟ್ಟು, ಎಳನೀರು ಮತ್ತು ಮಜ್ಜಿಗೆಯ ಮೊರೆ ಹೋಗಿ. ಕೆಲಸದ ಅನಿವಾರ್ಯತೆ ಇದ್ದವರು ಛತ್ರಿ ಇಲ್ಲದೆ ಮನೆಯಿಂದ ಹೊರಬರಬೇಡಿ.

 

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories