ಎಸ್.ಎಸ್.ಎಲ್ಸಿ ಪರೀಕ್ಷೆಯಲ್ಲಿ ಖಾಸಗಿ ಕಂಡಕ್ಟರ್ ಪುತ್ರನ ಸಾಧನೆ : 625ಕ್ಕೆ 625 ಅಂಕ
ಹಗಲಿರುಳು ಬಸ್ನಲ್ಲಿ ಟಿಕೆಟ್ ಹರಿದು ಮಗನ ಓದಿಗೆ ಆಸರೆಯಾಗಿದ್ದ ಖಾಸಗಿ ಬಸ್ ಕಂಡಕ್ಟರ್ ಪುತ್ರ ಇಂದು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯವೇ ತಿರುಗಿ ನೋಡುವಂತಾ ಸಾಧನೆ ಮಾಡಿದ್ದಾನೆ.
ಸಾಧನೆಗೆ ಬಡತನದ ಹಂಗಿಲ್ಲ ಎಂಬ ಮಾತಿದೆ. ಈ ಮಾತನ್ನು ಉಡುಪಿ ಜಿಲ್ಲೆಯ ಶಂಕರನಾರಾಯಣದ ಮದರ್ ತೆರೇಸಾ ಮೆಮೋರಿಯಲ್ ಶಾಲೆಯ ವಿದ್ಯಾರ್ಥಿ ಸಾಬೀತುಪಡಿಸಿದ್ದಾನೆ. ಹಗಲಿರುಳು ಬಸ್ನಲ್ಲಿ ಟಿಕೆಟ್ ಹರಿದು ಮಗನ ಓದಿಗೆ ಆಸರೆಯಾಗಿದ್ದ ಖಾಸಗಿ ಬಸ್ ಕಂಡಕ್ಟರ್ ಪುತ್ರ ಇಂದು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯವೇ ತಿರುಗಿ ನೋಡುವಂತಾ ಸಾಧನೆ ಮಾಡಿದ್ದಾನೆ.
ಪ್ರೀತಂ ಪೂಜಾರಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಬರುತ್ತಿದ್ದಂತೆಯೇ ಶಾಲೆಯ ಆಡಳಿತ ಮಂಡಳಿ ಆತನನ್ನು ಬ್ಯಾಂಡ್ ಸಹಿತ ಮೆರವಣಿಗೆಯ ಮೂಲಕ ಶಾಲೆಗೆ ಬರಮಾಡಿಕೊಂಡಿದೆ. ಶಾಲಾ ಮಕ್ಕಳು ಕೂಡ ಸಿಹಿ ಹಂಚುವ ಮೂಲಕ ಸಹಪಾಠಿಯ ಸಾಧನೆಯನ್ನು ಸಂಭ್ರಮಿಸಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ವಿದ್ಯಾರ್ಥಿ ಪ್ರೀತಂ ಪೂಜಾರಿ, 625ಕ್ಕೆ 620 ಅಂಕ ಬರಬಹುದು ಎಂಬ ನಿರೀಕ್ಷೆಯಿತ್ತು. ಶಾಲೆಗೆ ಟಾಪರ್ ಆಗುತ್ತೇನೆ ಎಂಬ ಭರವಸೆಯಿತ್ತು. ಆದರೆ 625ಕ್ಕೆ 625 ಅಂಕ ಗಳಿಸುತ್ತೇನೆ ಎಂದು ನಿರೀಕ್ಷಿಸಿ ಇರಲಿಲ್ಲ. ಶಾಲೆಯ ಉತ್ತಮ ವಾತಾವರಣದಿಂದ ಇಂತಹ ಸಾಧನೆಗೈಯ್ಯಲು ಸಾಧ್ಯವಾಗಿದೆ ಎಂದು ಹೇಳಿದ್ದಾನೆ.
‘‘ಉತ್ತಮ ಅಂಕ ಪಡೆಯಲು ಶಾಲೆಯಲ್ಲಿ ಸರಿಯಾಗಿ ಪಾಠ ಕೇಳಿಸಿಕೊಂಡರೆ ಸಾಕು’’
ಹೌದು..! ತನ್ನ ಈ ಸಾಧನೆಯ ಹಿಂದಿನ ಗುಟ್ಟನ್ನು ಬಿಚ್ಚಿಟ್ಟ ಪ್ರೀತಂ ಪೂಜಾರಿ, ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಗಮನವಿಟ್ಟು ಕೇಳಿದರೆ ಸಾಕು, ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸಾಧ್ಯವಿದೆ. ನಾನು ಯಾವುದೆ ಒತ್ತಡಕ್ಕೆ ಒಳಗಾಗಿರಲಿಲ್ಲ. ನನ್ನ ಬರವಣಿಗೆ ಕೂಡ ಅಷ್ಟೊಂದು ಚೆನ್ನಾಗಿ ಇರಲಿಲ್ಲ. ಹೀಗಾಗಿ ಉತ್ತಮ ಅಂಕ ನನಗೆ ಬಾರದು ಎಂಬ ಆತಂಕ ನನ್ನಲ್ಲಿ ಮನೆ ಮಾಡಿತ್ತು. ನನ್ನ ಬರವಣಿಗೆ ಉತ್ತಮ ಪಡಿಸುವಲ್ಲಿ ಶಿಕ್ಷಕರು ಬಹಳ ಶ್ರಮವಹಿಸಿದ್ದಾರೆ. ನನ್ನ ಹ್ಯಾಂಡ್ ವ್ರೈಟಿಂಗ್ ತಿದ್ದು ಕೆಲಸವನ್ನೂ ಶಿಕ್ಷಕರು ಮಾಡಿದ್ದಾರೆ ಎಂದು ಪ್ರೀತಂ ಹೇಳಿದ್ದಾನೆ.
ಇದನ್ನೂ ಓದಿ: SSLC Result 2026 : ಮುದ್ದೂರು ವಿಎಸ್ಎಸ್ನ ಕಲ್ಯಾಣಿಗೆ ರಾಜ್ಯದಲ್ಲಿ 5ನೇ ರಾಂಕ್, ಸತತ 100 % ರಿಸಲ್ಟ್
ಇಂದು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಉತ್ತಮ ಅಂಕ ಬರಬಹುದು ಎಂಬ ನಿರೀಕ್ಷೆ ಇದ್ದಿದ್ದರಿಂದ ಕೂಲ್ ಆಗಿಯೇ ಸಮಾರಂಭದಲ್ಲಿ ಭಾಗವಹಿಸಿದ್ದೆ. ತಂದೆ ಕರೆ ಮಾಡಿ 625 ಅಂಕ ಬಂದಿದೆ ಎಂದಾಗ ಒಂದು ಕ್ಷಣ ನಂಬಲು ಆಗಲಿಲ್ಲ. ಭವಿಷ್ಯದಲ್ಲಿ ಇಂಜಿನಿಯರ್ ಆಗಬೇಕೆಂಬ ಕನಸು ನನ್ನದು. ನನ್ನ ತಾಯಿಗೆ ನಾನು ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆಯಿದೆ. ನನಗೆ ಎಂದಿಗೂ ನಂಬರ್ 1 ಆಗಿರಬೇಕೆಂಬ ಕನಸಿದೆ. ಈ ಫಲಿತಾಂಶದ ಮೂಲಕ ನನ್ನ ಕನಸು ನನಸಾಗಿದೆ. ಮನೆಯವರ ಪ್ರೋತ್ಸಾಹ ಹಾಗೂ ಶಾಲೆಯಲ್ಲಿದ್ದ ಉತ್ತಮ ಕಲಿಕಾ ವಾತಾವರಣದಿಂದಲೇ ಇದೆಲ್ಲ ಸಾಧ್ಯವಾಗಿದೆ ಎಂದು ಪ್ರೀತಂ ಹೇಳಿದ್ದಾರೆ.



