ಕೊಡಗಿನಲ್ಲಿ ಗುಂಡು ಹಾರಿಸಿಕೊಂಡು ಶಿಕ್ಷಕಿ ಆತ್ಮಹತ್ಯೆ; ಶಿಕ್ಷಕಿ ಸಾವಿಗೆ ಜನಗಣತಿ ಒತ್ತಡವೇ ಕಾರಣನಾ?

ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ 51 ವರ್ಷದ ಎ.ರೋಹಿಣಿ ಎಂಬವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ

ಸಾವಿರಾರು ವಿದ್ಯಾರ್ಥಿಗಳಿಗೆ ಜೀವನದ ಪಾಠ ಕಲಿಸುವ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಶಿಕ್ಷಕಿಯೊಬ್ಬರೇ ತನ್ನ ಜೀವನದಲ್ಲಿ ದುಡುಕಿನ ನಿರ್ಧಾರ ಕೈಗೊಂಡ ಘಟನೆಯೊಂದು ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ಸಂಭವಿಸಿದೆ. ಚೇರಂಬಾಣೆಯ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ 51 ವರ್ಷದ ಎ.ರೋಹಿಣಿ ಎಂಬವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

25 ವರ್ಷಗಳ ಸುದೀರ್ಘ ಶಿಕ್ಷಕ ವೃತ್ತಿ ಸಾಗಿಸುತ್ತಿದ್ದ ರೋಹಿಣಿ, ಕೌಟುಂಬಿಕ ಜೀವನ ಹಾಗೂ ಶಿಕ್ಷಕ ವೃತ್ತಿಯಲ್ಲಿ ಸಂತೋಷದಿಂದಲೇ ಇದ್ದರು. ಮಧ್ಯರಾತ್ರಿ 12ರವರೆಗೂ ಜನಗಣತಿ ಕಾರ್ಯ ಮಾಡಿ ಮಲಗಿದ್ದ ರೋಹಿಣಿ ಬೆಳಗ್ಗೆ 5 ಗಂಟೆ ಸುಮಾರಿಗೆ ಒಂಟಿ ನಳಿಗೆ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜನಗಣತಿಯ ಒತ್ತಡದಿಂದಲೇ ಶಿಕ್ಷಕಿ ರೋಹಿಣಿ ಈ ದುಡುಕಿನ ನಿರ್ಧಾರ ಕೈಗೊಂಡ್ರಾ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ : ಕಾರ್ಕಳ: ದೇವಸ್ಥಾನಕ್ಕೆ ನುಗ್ಗಿ ಹುಂಡಿ ಕಳವು – ಸಿಸಿಟಿವಿಯಲ್ಲಿ ಸೆರೆಯಾಯ್ತಾ ಕಳ್ಳನ ಕೈಚಳಕ ?

ಇನ್ನು ಈ ವಿಚಾರವಾಗಿ ಮೃತ ರೋಹಿಣಿ ಪತಿ ಕರುಂಬಯ್ಯ ಮಾತನಾಡಿದ್ದು, ಜನಗಣತಿ ಪ್ರಕ್ರಿಯೆ ಆರಂಭವಾದಾಗಿನಿಂದ ಯಾವಾಗಲೂ ಒತ್ತಡದಲ್ಲೇ ಇರುತ್ತಿದ್ದರು. ಜನಗಣತಿ ಕೆಲಸ ಮುಗಿಸಿ ನಿತ್ಯ ಮಲಗುವಾಗ ರಾತ್ರಿ 12 ಗಂಟೆ ದಾಟಿರುತ್ತಿತ್ತು. ಬೆಳಗ್ಗೆ ಎದ್ದು ಮತ್ತೆ ಜನಗಣತಿ ಕಾರ್ಯಕ್ಕೆ ತೆರಳಬೇಕಿತ್ತು. 250ಕ್ಕೂ ಅಧಿಕ ಮನೆಗಳ ಜನಗಣತಿ ಜವಾಬ್ದಾರಿಯನ್ನು ರೋಹಿಣಿಗೆ ಹೊರಿಸಲಾಗಿತ್ತು. ನನಗೊಂದು ಸಹಾಯಕರನ್ನು ಕೊಡಿ ಎಂದು ರೋಹಿಣಿ ತಹಶೀಲ್ದಾರರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಈ ಒತ್ತಡವೇ ನನ್ನ ಪತ್ನಿ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ :  ಬಂಟ್ವಾಳ: ರೈಲಿನಲ್ಲಿ ಗರ್ಭಿಣಿಗೆ ಪ್ರಸವ ವೇದನೆ; ಮಹಿಳಾ ಪ್ರಯಾಣಿಕರ ನೆರವಿನಿಂದ ಸುಸೂತ್ರ ಹೆರಿಗೆ

ಇನ್ನು ಈ ಘಟನೆ ಸಂಬಂಧ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಮೋಹನ್ ಪೆರಾಜೆ ಕೂಡ ಪ್ರತಿಕ್ರಿಯೆ ನೀಡಿದ್ದು, ರೋಹಿಣಿ ಧೈರ್ಯವಂತ ಶಿಕ್ಷಕಿ. ಯಾವುದೇ ಕೆಲಸಗಳಿಗೂ ಹಿಂದೆ ಸರಿದ ವ್ಯಕ್ತಿತ್ವ ಅವರದ್ದಲ್ಲ. ಅಲ್ಲದೇ ಸಾಯುವಷ್ಟರ ಮಟ್ಟಿಗಿನ ಒತ್ತಡವನ್ನು ಜನಗಣತಿ ಕಾರ್ಯದ ಮೂಲಕ ನೀಡಲಾಗುತ್ತಿಲ್ಲ. ಹೀಗಾಗಿ ಜನಗಣತಿಯಿಂದ ರೋಹಿಣಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂಬುದನ್ನು ನನ್ನಿಂದ ನಂಬಲು ಸಾಧ್ಯವಿಲ್ಲ. ಸೂಕ್ತ ತನಿಖೆಯ ಬಳಿಕವಷ್ಟೇ ರೋಹಿಣಿ ಅವರ ಸಾವಿನ ನಿಜಾಂಶ ಬಯಲಿಗೆ ಬರಬೇಕಿದೆ ಎಂದಿದ್ದಾರೆ .

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories