ಇವಿ ಪ್ರಿಯರಿಗಾಗಿ ಸ್ಮಾರ್ಟ್ ವೈಶಿಷ್ಟ್ಯದೊಂದಿಗೆ ಬಿಡುಗಡೆಯಾದ ಒಬೆನ್ ರೋರ್ ಇವೋ ಇಲೆಕ್ಟ್ರಿಕ್ ಬೈಕ್
ಒಬೆನ್ ತನ್ನ ಹೊಸ ರೋರ್ ಇವೊ ಬಿಡುಗಡೆ ಮಾಡಿದೆ. ನಗರ ಪ್ರದೇಶದ ಸವಾರರನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆಯಾದ ಈ ಇವಿ ಬೈಕ್ ಹಲವಾರು ವೈಶಿಷ್ಟ್ಯಗಳನ್ನು ಮತ್ತು ಆಕರ್ಷಕ ಬೆಲೆಯನ್ನು ಹೊಂದಿದೆ.
ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ಸಮಯದಲ್ಲಿ ಒಬೆನ್ ತನ್ನ ಹೊಸ ರೋರ್ ಇವೊ ಬಿಡುಗಡೆ ಮಾಡುವುದರ ಮೂಲಕ ವಾಹನ ಸವಾರರಿಗೆ ಹೊಸ ಆಯ್ಕೆಯನ್ನು ನೀಡಿದೆ. ಒಬೆನ್ ನ ಈ ಬೈಕ್ ಕಾರ್ಯಕ್ಷಮತೆಯನ್ನ ನೋಡಿದರೆ ಇದು ನಗರ ಪ್ರಯಾಣಕ್ಕೆ ಹೇಳಿಮಾಡಿಸಿದಂತಿದೆ. ಇದು ಆಧುನಿಕ ಶೈಲಿಯ ವಿನ್ಯಾಸ, ಸ್ಮಾರ್ಟ್ ತಂತ್ರಜ್ಞಾನದಿಂದಾಗಿ ಬೈಕ್ ಪ್ರಿಯರ ಮೆಚ್ಚುಗೆ ಗಳಿಸುವ ಸಾಧ್ಯತೆಯಿದೆ.
ರೋರ್ ಇವೊ ಸಿಂಗಲ್ ಚಾರ್ಜ್ನಲ್ಲಿ 180 ಕಿಮೀ ಕ್ರಮಿಸಬಲ್ಲದು. ಆಗಾಗ್ಗೆ ಚಾರ್ಜಿಂಗ್ ಮಾಡುವುದನ್ನು ತಪ್ಪಿಸಲು ಬಯಸುವ ದೈನಂದಿನ ಸವಾರರಿಗೆ ಇದು ಉತ್ತಮ ಆಯ್ಕೆಯಾಗಬಲ್ಲದು. ಹೊಸ ಮಾದರಿಯ ಈ ದೇಸಿ ಬೈಕ್ PMSM ಮೋಟಾರ್ನಿಂದ ನಿಯಂತ್ರಿಸಲ್ಪಡುತ್ತದೆ. 9 ಕಿಲೋವ್ಯಾಟ್ ಗರಿಷ್ಠ ಶಕ್ತಿ ಉತ್ಪಾದಿಸುವ ಈ ಬೈಕ್ 250 Nm ಟಾರ್ಕ್ ಉತ್ಪಾದಿಸುತ್ತದೆ. ಇದು ಕೇವಲ 5 ಸೆಕೆಂಡ್ಗಳಲ್ಲಿ 0 ದಿಂದ 40 ಕಿಮೀ ವೇಗ ಹೆಚ್ಚಿಸಿಕೊಳ್ಳಬಹುದು. ಗಂಟೆಗೆ 110 ಕಿಮೀ ಗರಿಷ್ಠ ವೇಗವನ್ನು ತಲುಪುವ ಸಾಮರ್ಥ್ಯ ಇದರಲ್ಲಿದೆ.
ಇನ್ನು ಇದರ ಬ್ಯಾಟರಿಯ ಬಗ್ಗೆ ಹೇಳುವುದಾದರೆ ಇದು ಸುಧಾರಿತ ಬ್ಯಾಟರಿ ವೈಶಿಷ್ಟ್ಯ ಹೊಂದಿದೆ. ರೋರ್ ಇವೊ 3.4 kWh LEP ಬ್ಯಾಟರಿಯೊಂದಿಗೆ IP67 ರೇಟಿಂಗ್ ಹೊಂದಿದೆ. ಕಂಪನಿಯ ಇದಕ್ಕೆ 8 ವರ್ಷಗಳ ವ್ಯಾರಂಟಿಯನ್ನು ನೀಡಿದೆ. ಈ ಬೈಕ್ನ ಸಸ್ಪೆನ್ಷನ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಅಡ್ಜೆಸ್ಟ್ ಮಾಡಬಹುದಾದ 7 ಸ್ಟೆಪ್ ಮೊನೋಶಾಕ್ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರ ಮುಂಭಾಗ ಮತ್ತು ಹಿಂಭಾಗದ ಚಕ್ರಗಳಿಗೆ 270 ಎಂಎಂ ಡಿಸ್ಕ್ ಬ್ರೆಕ್ ಅಳವಡಿಸಲಾಗಿದೆ. ಇದರಿಂದ ಕಠಿಣ ಪರಿಸ್ಥಿತಿಯಲ್ಲೂ ಉತ್ತಮ ನಿಯಂತ್ರಣ ಸಾಧಿಸಬಹುದಾಗಿದೆ. ಇನ್ನ ಈ ಬೈಕ್ನಲ್ಲಿ ಟಿಎಫ್ಟಿ ಡಿಸ್ಪ್ಲೇ, ಸಂಪರ್ಕಕ್ಕಾಗಿ ಬ್ಲೂಟೂತ್, ಸ್ಮಾರ್ಟ್ ಐಕ್ಯೂ ಮೋಡ್ ಹೊಂದಿದೆ. ಇದರಿಂದ ಸವಾರರು ತಮ್ಮ ಪ್ರಯಾಣವನ್ನು ಸುಲಭವಾಗಿ ಯೋಜಿಸಬಹುದಾಗಿದೆ.
ಇದನ್ನೂ ಓದಿ: ಕಿಯಾ ಸೆಲ್ಟೋಸ್ Vs ಮಾರುತಿ ವಿಕ್ಟೋರಿಸ್ : ಮೈಲೇಜ್ನಲ್ಲಿ ಯಾವುದು ಬೆಸ್ಟ್?
ಬೆಲೆ ಎಷ್ಟಿದೆ?
ಒಬೆನ್ ರೋರ್ ಇವೊ ಬಿಡುಗಡೆಯೊಂದಿಗೆ ಆಕರ್ಷಕ ಉಳಿತಾಯ ಯೋಜನೆಯನ್ನು ನೀಡಿದೆ. ಅದೇನೆಂದರೆ ತನ್ನ ಮೊದಲ ಹತ್ತುಸಾವಿರ ಗ್ರಾಹಕರಿಗೆ ಈ ಬೈಕ್ ಅನ್ನು 1 ಲಕ್ಷ ರೂ.ಗೆ ಕೊಳ್ಳುವ ಅವಕಾಶ ನೀಡಿದೆ. ನಂತರ ಇದರ ಬೆಲೆ 1.25 ಲಕ್ಷ ವಾಗಲಿದೆ. ಈ ಬೈಕ್ ನೀಲಿ, ಕೆಂಪು ಬಿಳಿ ಮತ್ತು ಕಪ್ಪು ಮುಂತಾದ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇದರಿಂದ ಖರೀದುದಾರರು ಇದರಲ್ಲಿ ತಮ್ಮ ಇಷ್ಟದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.



