ಪಿಂಚಣಿದಾರರ ಪರಿಶೀಲನೆಗೆ ರಾಜ್ಯ ಸರ್ಕಾರದ ಬಿಗಿ ಕ್ರಮ! ಅನರ್ಹ ಫಲಾನುಭವಿಗಳಿಗೆ ಕಡಿವಾಣ
ಅನರ್ಹ ಫಲಾನುಭವಿಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಪಿಂಚಣಿ ಖಾತೆಗಳ ಪರಿಶೀಲನೆ ಆರಂಭಿಸಿದ್ದು ಸೂಕ್ತ ದಾಖಲೆ ಸಲ್ಲಿಸದ 16 ಲಕ್ಷಕ್ಕೂ ಅಧಿಕ ಮಂದಿಯ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ನೋಟಿಸ್ ನೀಡಲು ಸೂಚಿಸಿದೆ.

ಗ್ಯಾರಂಟಿ ಯೋಜನೆಗಳ ಪರಿಶೀಲನೆ ಬಳಿಕ ಇದೀಗ ರಾಜ್ಯ ಸರ್ಕಾರ ಪಿಂಚಣಿ ಯೋಜನೆಗಳಲ್ಲೂ ಪಾರದರ್ಶಕತೆ ತರಲು ಮಹತ್ವದ ಕ್ರಮ ಕೈಗೊಂಡಿದೆ. ಅನರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರಿ ಸೌಲಭ್ಯಗಳು ನಿಜವಾದ ಅರ್ಹರಿಗೆ ಮಾತ್ರ ತಲುಪುವಂತೆ ಮಾಡಲು ಪಿಂಚಣಿ ಖಾತೆಗಳ ಸಮಗ್ರ ಪರಿಶೀಲನೆ ಆರಂಭಿಸಲಾಗಿದೆ.
ರಾಜ್ಯದಲ್ಲಿ ವಿವಿಧ ಪಿಂಚಣಿ ಯೋಜನೆಗಳಡಿ ಒಟ್ಟು 83 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿದ್ದು, ಪ್ರಾಥಮಿಕ ಪರಿಶೀಲನೆಯಲ್ಲಿ ಸುಮಾರು 23.13 ಲಕ್ಷ ಖಾತೆಗಳ ಮಾಹಿತಿಯಲ್ಲಿ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆ ಸಂಯೋಜನೆ ಆ್ಯಪ್ ಮೂಲಕ ಪ್ರತಿ ಖಾತೆಯ ಪರಿಶೀಲನೆ ನಡೆಸಲು ಸರ್ಕಾರ ಸೂಚನೆ ನೀಡಿದೆ.
ಗ್ರಾಮ ಆಡಳಿತಾಧಿಕಾರಿಗಳ ವರದಿ ಆಧರಿಸಿ ಪರಿಶೀಲನೆ ನಡೆಸಿದ ವೇಳೆ 3.35 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಅರ್ಹರೆಂದು ದೃಢಪಟ್ಟಿದ್ದಾರೆ. ಉಳಿದ ಪ್ರಕರಣಗಳಲ್ಲಿ ದಾಖಲೆಗಳ ಕೊರತೆ, ತಪ್ಪು ಮಾಹಿತಿ, ನಕಲಿ ದಾಖಲೆಗಳ ಬಳಕೆ ಹಾಗೂ ವಿಳಾಸದಲ್ಲಿ ವಾಸವಿಲ್ಲದಂತಹ ಅಂಶಗಳು ಬೆಳಕಿಗೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ 16,42,303 ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪಿಂಚಣಿ ಮಂಜೂರಾತಿ ವೇಳೆ ಸಲ್ಲಿಸಲಾದ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದಿರುವ ಹಾಗೂ ಅಗತ್ಯ ದಾಖಲೆಗಳನ್ನು ಒದಗಿಸದ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಸ್ಥಗಿತಗೊಂಡಿರುವ ಫಲಾನುಭವಿಗಳಿಗೆ ಸಂಬಂಧಿಸಿದ ತಹಶೀಲ್ದಾರ್ ಕಚೇರಿಯಿಂದ ನೋಟಿಸ್ ನೀಡಲಾಗುತ್ತದೆ. ನೋಟಿಸ್ ಸ್ವೀಕರಿಸಿದವರು 30 ದಿನಗಳೊಳಗೆ ತಮ್ಮ ಅರ್ಹತೆಯನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸಬೇಕು. ದಾಖಲೆಗಳ ಪರಿಶೀಲನೆ ಬಳಿಕ ಅರ್ಹತೆ ದೃಢಪಟ್ಟವರಿಗೆ ಪಿಂಚಣಿ ಮರುಜಾರಿಯಾಗಲಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

