ಗೃಹಲಕ್ಷ್ಮಿ ಯೋಜನೆ ವಿವಾದ ಹೊಸ ತಿರುವು! ಸಿಎಜಿ ವರದಿಗೆ ಇಲಾಖೆಯ ಪ್ರತಿಕ್ರಿಯೆ

ಸಿಎಜಿ ವರದಿಯಲ್ಲಿ ಗೃಹಲಕ್ಷ್ಮಿ ಯೋಜನೆ ಕುರಿತು ಉಲ್ಲೇಖವಾದ ಬ್ಯಾಂಕ್ ಖಾತೆ ಲೋಪಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ಪಷ್ಟನೆ ನೀಡಿದ್ದು ತಾಂತ್ರಿಕ ಕಾರಣಗಳಿಂದ ಉಂಟಾದ ಮೂರು ಪ್ರಮುಖ ಅಂಶಗಳನ್ನು ವಿವರಿಸಿದೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂಬ ಸಿಎಜಿ ವರದಿ ಹೊರಬಿದ್ದ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕೃತ ಸ್ಪಷ್ಟನೆ ನೀಡಿದೆ. ಯೋಜನೆಯಡಿ ಹಣ ವಿತರಣೆಯಲ್ಲಿ ಕಂಡುಬಂದಿರುವ ವ್ಯತ್ಯಾಸಗಳಿಗೆ ತಾಂತ್ರಿಕ ಕಾರಣಗಳೇ ಮುಖ್ಯವಾಗಿದ್ದು, ಹಣವನ್ನು ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ ಮೂಲಕವೇ ವರ್ಗಾಯಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ಸಿಎಜಿ ವರದಿಯಲ್ಲಿ ಉಲ್ಲೇಖವಾದ ಒಂದೇ ಬ್ಯಾಂಕ್ ಖಾತೆಗೆ ಹಲವು ಫಲಾನುಭವಿಗಳ ಹಣ ಜಮೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಲಾಖೆ ವಿವರಣೆ ನೀಡಿದೆ. ಜಂಟಿ ಬ್ಯಾಂಕ್ ಖಾತೆ ಹೊಂದಿರುವ ಕುಟುಂಬ ಸದಸ್ಯರಾದ ತಾಯಿ ಮಗಳು, ಅತ್ತೆ ಸೊಸೆ ಮೊದಲಾದವರು ಪ್ರತ್ಯೇಕ ಪಡಿತರ ಚೀಟಿ ಹೊಂದಿದ್ದು, ಇಬ್ಬರೂ ಯೋಜನೆಗೆ ಅರ್ಹರಾಗಿದ್ದರೆ ಅವರ ಅನುದಾನ ಒಂದೇ ಬ್ಯಾಂಕ್ ಖಾತೆಗೆ ಜಮೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಕೆಲವು ಪ್ರಕರಣಗಳಲ್ಲಿ ಬ್ಯಾಂಕುಗಳ ತಾಂತ್ರಿಕ ದೋಷದಿಂದಲೂ ತಪ್ಪಾದ ಖಾತೆ ವಿವರಗಳು ದಾಖಲಾಗಿರಬಹುದು ಎಂದು ಹೇಳಿದೆ.

ಒಂದೇ ಫಲಾನುಭವಿಯ ಹೆಸರಲ್ಲಿ ಹಲವು ಬ್ಯಾಂಕ್ ಖಾತೆಗಳಿರುವ ಪ್ರಕರಣಗಳ ಕುರಿತು ಸಹ ಇಲಾಖೆ ಸ್ಪಷ್ಟನೆ ನೀಡಿದೆ. ಫಲಾನುಭವಿಯು ತನ್ನ ಇಚ್ಛೆಯ ಬ್ಯಾಂಕ್ ಖಾತೆಯನ್ನು ಆಧಾರ್‌ಗೆ ಜೋಡಿಸಬಹುದು. ನಂತರ ಅಗತ್ಯವಿದ್ದರೆ ಮತ್ತೊಂದು ಖಾತೆಗೆ ಬದಲಾವಣೆ ಮಾಡುವ ಅವಕಾಶವೂ ಇದೆ. ಈ ಬದಲಾವಣೆಯನ್ನು ಬ್ಯಾಂಕುಗಳು ಎನ್ ಪಿ ಸಿಐ ಮ್ಯಾಪರ್‌ನಲ್ಲಿ ನವೀಕರಿಸಿದ ಬಳಿಕವೇ ಸರ್ಕಾರಿ ಸೌಲಭ್ಯ ಹೊಸ ಖಾತೆಗೆ ಜಮೆಯಾಗುತ್ತದೆ. ಆದರೆ ಒಂದೇ ತಿಂಗಳಲ್ಲಿ ಒಂದೇ ಫಲಾನುಭವಿಗೆ ಎರಡು ಖಾತೆಗಳಿಗೆ ಹಣ ಜಮೆಯಾಗುವ ಸಾಧ್ಯತೆ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಇನ್ನೊಂದು ಪ್ರಮುಖ ಅಂಶವಾಗಿ ಕೆಲ ಫಲಾನುಭವಿಗಳ ಬ್ಯಾಂಕ್ ಖಾತೆ ವಿವರಗಳು ಪಾವತಿ ಪ್ರತಿಕ್ರಿಯಾ ಕಡತದಲ್ಲಿ ಕಾಣಿಸದಿರುವುದನ್ನು ಇಲಾಖೆ ಉಲ್ಲೇಖಿಸಿದೆ. ಇದು ಕೆಲವೊಮ್ಮೆ ಬ್ಯಾಂಕುಗಳ ತಾಂತ್ರಿಕ ಸಮಸ್ಯೆಯಿಂದ ಉಂಟಾಗುತ್ತದೆ. ನಂತರದ ತಿಂಗಳುಗಳಲ್ಲಿ ಬ್ಯಾಂಕುಗಳು ಸರಿಯಾದ ಖಾತೆ ವಿವರಗಳೊಂದಿಗೆ ಮಾಹಿತಿ ಕಳುಹಿಸಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ ಎಂದು ತಿಳಿಸಿದೆ.

ಈ ಎಲ್ಲಾ ಪ್ರಕರಣಗಳನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳ ಮೂಲಕ ಭೌತಿಕವಾಗಿ ಪರಿಶೀಲನೆ ನಡೆಸಲಾಗಿದೆ. ಯೋಜನೆಯ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಮುಂದೆಯೂ ಅಗತ್ಯ ಪರಿಶೀಲನೆಗಳನ್ನು ಮುಂದುವರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »

Related Stories