ಉಡುಪಿ: ಅಂದರ್-ಬಾಹರ್ ಜೂಜಾಟದ ಅಡ್ಡೆ ಮೇಲೆ ಪೊಲೀಸರ ಮಿಂಚಿನ ದಾಳಿ; ನಾಲ್ವರ ಬಂಧನ
ಉಡುಪಿಯ ಮಣಿಪಾಲದ ಶಿವಳ್ಳಿ ಗ್ರಾಮದಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ಜೂಜಾಟದ ಅಡ್ಡೆಯ ಮೇಲೆ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ.

ಮಣಿಪಾಲ ಪೊಲೀಸರು ಜೂಜುಕೋರರ ವಿರುದ್ಧ ಮತ್ತೊಂದು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ. ಉಡುಪಿಯ ಮಣಿಪಾಲದ ಶಿವಳ್ಳಿ ಗ್ರಾಮದಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ‘ಅಂದರ್-ಬಾಹರ್’ ಎಂಬ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ.
ಮೇ 3ರ ಸಂಜೆ. ಶಿವಳ್ಳಿ ಗ್ರಾಮದ ಸಗ್ರಿ ನೋಳೆಯ ಪೆರಂಪಳ್ಳಿಗೆ ಹೋಗುವ ರಸ್ತೆಯ ಪಕ್ಕದ ಹಾಡಿಯಲ್ಲಿ ಗುಂಪೊಂದು ಸೇರಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಡುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಮಾಹಿತಿ ಸಿಗುತ್ತಿದ್ದಂತೆಯೇ ಮಣಿಪಾಲ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ತಿಮ್ಮೇಶ್ ಬಿ.ಎನ್. ನೇತೃತ್ವದ ತಂಡ ಸದ್ದಿಲ್ಲದೆ ಕಾರ್ಯಾಚರಣೆ ನಡೆಸಿದೆ.
ಇದನ್ನೂ ಓದಿ : ಕುಂದಾಪುರ : ಜಾಗದ ತಕರಾರು ನೆರೆಮನೆಯವನ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ
ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಹಾಡಿಯಲ್ಲಿ ನೀಲಿ ಬಣ್ಣದ ತಾಡಪಾಲು ಹಾಕಿ ಅದರ ಸುತ್ತ ಕುಳಿತು ಹಣದ ಆಸೆಗಾಗಿ ‘ಅಂದರ್-ಬಾಹರ್’ ಆಡುತ್ತಿದ್ದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ಉಡುಪಿಯ ಅಂಬಾಗಿಲಿನ ರುದ್ರಯ್ಯ, ಉದ್ಯಾವರದ ಕೃಷ್ಣ ಗಾಣಿಗ, ಪುತ್ತೂರು ಗ್ರಾಮದ ಸಿಂದೂರಪ್ಪ ಹಿರೇಮನಿ ಮತ್ತು 80 ಬಡಗುಬೆಟ್ಟಿನ ಶರತ್ ಕುಮಾರ್ ಎಂದು ಗುರುತಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸರು ಸುಮಾರು 10,800 ರೂಪಾಯಿ ನಗದು ಹಣ, ಜೂಜಾಟಕ್ಕೆ ಬಳಸುತ್ತಿದ್ದ ಇಸ್ಪೀಟ್ ಎಲೆಗಳು, ಒಂದು ನೀಲಿ ಬಣ್ಣದ ತಾಡಪಾಲು ಹಾಗೂ ಆರೋಪಿಗಳ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ. ಸದ್ಯ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



