ರಾಜ್ಯದಲ್ಲಿ ‘ಇವ ನಮ್ಮವ’ ಕಾಯ್ದೆ ಸದ್ದು: ಮರ್ಯಾದಾ ಹತ್ಯೆಗೆ ಬ್ರೇಕ್ ಹಾಕಲು ಸರ್ಕಾರ ಮಾಸ್ಟರ್ ಪ್ಲಾನ್!
ಅಪ್ರಾಪ್ತ ವಯಸ್ಕ ಗಂಡು-ಹೆಣ್ಣು ಪರಸ್ಪರ ಒಪ್ಪಿ ಮದುವೆಯಾಗಲು ಯಾರ ಅನುಮತಿಯೂ ಬೇಕಿಲ್ಲ ಹಾಗೂ ಕುಟುಂಬದವರಿಂದ ಯಾವುದೇ ಅಡೆತಡೆ ಇಲ್ಲದಂತೆ ವಿವಾಹವಾಗುವ ಹಕ್ಕನ್ನು ನೀಡಲಾಗಿದೆ.

ರಾಜ್ಯದಲ್ಲಿ ಮರ್ಯಾದಾ ಹತ್ಯೆಯನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರವು ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ, ನಿಷೇಧ ಕಾಯ್ದೆ-2026 ಇವ ನಮ್ಮವ ಇವ ನಮ್ಮವ ಕಾಯ್ದೆಯನ್ನು ಅಧಿಕೃತವಾಗಿ ಜಾರಿಗೆ ತಂದಿದೆ.
ಈ ಸಂಬಂಧ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಅಂತರ್ಜಾತಿ ವಿವಾಹಗಳಿಗೆ ಗೌರವ ನೀಡುವುದು ಹಾಗೂ ಸಂಪ್ರದಾಯದ ಹೆಸರಿನಲ್ಲಿ ಈ ಮದುವೆಗಳಿಗೆ ಅಡ್ಡಿ ಬಾರದೇ ಇರುವುದು ಮತ್ತು ಅಪ್ರಾಪ್ತ ವಯಸ್ಕ ಗಂಡು-ಹೆಣ್ಣು ಪರಸ್ಪರ ಒಪ್ಪಿ ಮದುವೆಯಾಗಲು ಯಾರ ಅನುಮತಿಯೂ ಬೇಕಿಲ್ಲ ಹಾಗೂ ಕುಟುಂಬದವರಿಂದ ಯಾವುದೇ ಅಡೆತಡೆ ಇಲ್ಲದಂತೆ ವಿವಾಹವಾಗುವ ಹಕ್ಕನ್ನು ನೀಡಲಾಗಿದೆ.
ಇದನ್ನೂ ಓದಿ : ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಿದ್ರೆ ಸಿಬಿಲ್ ಸ್ಕೋರ್‌ಗೆ ಎಫೆಕ್ಟ್ ಆಗುತ್ತಾ? ಇಲ್ಲಿದೆ ಮಹತ್ವದ ಮಾಹಿತಿ
ಈ ಕಾಯ್ದೆಯ ಅಡಿಯಲ್ಲಿ ಅಂತರ್ಜಾತಿ ವಿವಾಹವಾದ ದಂಪತಿಗೆ ಕುಟುಂಬಸ್ಥರ ಕಿರುಕುಳ, ದೈಹಿಕ ಹಲ್ಲೆ, ಕೊಲೆ, ಅಪಹರಣ, ನವ ಜೋಡಿಯನ್ನು ಬೇರ್ಪಡಿಸಲು ಕುಟುಂಬಸ್ಥರು ಹಾಕುವ ಒತ್ತಡ, ದಂಪತಿಗಳ ಅಂತ್ಯಕ್ರಿಯೆ ಶಾಸ್ತ್ರ ಮಾಡುವುದು, ಗ್ರಾಮದಿಂದ ಹೊರಹಾಕುವುದು, ಮದುವೆಯಾದ ದಂಪತಿಯನ್ನು ಅಪಹರಿಸುವುದು ಅಥವಾ ಅವರನ್ನು ಅಣ್ಣ – ತಂಗಿ ಎಂದು ಘೋಷಿಸುವುದು ಸೇರಿದಂತೆ ಈ ಮಾದರಿಯ ವಿವಿಧ ಕೃತ್ಯಗಳನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ.
ಈ ಕಾಯ್ದೆಯ ಅಡಿಯಲ್ಲಿ ಮರ್ಯಾದಾ ಹತ್ಯೆ ಮಾಡುವವರಿಗೆ ಕನಿಷ್ಠ 5 ವರ್ಷ ಜೈಲು ಶಿಕ್ಷೆ , ಗಂಭೀರವಾಗಿ ಹಲ್ಲೆಗೈದವರಿಗೆ ಕನಿಷ್ಠ 3 ವರ್ಷ ಜೈಲು ಶಿಕ್ಷೆ, ಸಣ್ಣ ಪುಟ್ಟ ಹಲ್ಲೆ ಮಾಡಿದ್ದಲ್ಲಿ 2 ವರ್ಷ ಜೈಲು ಶಿಕ್ಷೆ ಹಾಗೂ 3 ಲಕ್ಷ ರೂಪಾಯಿ ದಂಡ ವಿಧಿಸಲು ಕಾನೂನಿಗೆ ಅವಕಾಶ ನೀಡಲಾಗಿದೆ. ಅಲ್ಲದೇ ಮದುವೆಯಾಗುತ್ತೇನೆ ಎಂದು ನಂಬಿಸಿ ಲೈಂಗಿಕ ಸಂಪರ್ಕ ನಡೆಸಿ ಬಳಿಕ ಜಾತಿಯ ಕಾರಣ ನೀಡಿ ಮದುವೆ ನಿರಾಕರಿಸಿದರೆ ಜೀವಾವಧಿ ಶಿಕ್ಷೆ ವಿಧಿಸಲು ಈ ಕಾಯ್ದೆ ಅನುಮತಿ ನೀಡುತ್ತದೆ.



