ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಿದ್ರೆ ಸಿಬಿಲ್ ಸ್ಕೋರ್‌ಗೆ ಎಫೆಕ್ಟ್ ಆಗುತ್ತಾ? ಇಲ್ಲಿದೆ ಮಹತ್ವದ ಮಾಹಿತಿ
ಇತ್ತೀಚೆಗೆ ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚಾಗುತ್ತಿರುವ ನಡುವೆ, ಕಾರ್ಡ್ ಕ್ಲೋಸ್ ಮಾಡಿದರೆ ಸಿಬಿಲ್ ಸ್ಕೋರ್ ಏರುತ್ತದೆ ಎಂಬ ಭ್ರಮೆಯಲ್ಲಿ ಹಲವರು ಇದ್ದಾರೆ. ಆದರೆ ನಿಜವಾದ ಪರಿಣಾಮ ತಿಳಿದರೆ ಅಚ್ಚರಿ ಪಡಲೇಬೇಕು.

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದಾರೆ. ಕೆಲವರು ತುರ್ತು ಖರ್ಚುಗಳಿಗೆ ಬಳಸಿದರೆ, ಇನ್ನೂ ಕೆಲವರು ಆಫರ್, ಕ್ಯಾಶ್‌ಬ್ಯಾಕ್ ಮತ್ತು ಡಿಸ್ಕೌಂಟ್‌ಗಾಗಿ ಬಳಸುತ್ತಿದ್ದಾರೆ. ಆದರೆ ಇದರ ಬಳಕೆಯ ಬಗ್ಗೆ ಹಲವಾರು ತಪ್ಪು ಕಲ್ಪನೆಗಳು ಇನ್ನೂ ಜನರಲ್ಲಿ ಇವೆ.
ಬಹಳ ಮಂದಿ ಕ್ರೆಡಿಟ್ ಕಾರ್ಡ್ ತೆಗೆದುಕೊಂಡರೆ ಸಿಬಿಲ್ ಸ್ಕೋರ್ ಕುಸಿಯುತ್ತದೆ ಎಂದು ಭಯಪಡುತ್ತಾರೆ. ಆದರೆ ಬ್ಯಾಂಕಿಂಗ್ ತಜ್ಞರ ಪ್ರಕಾರ ಇದು ಸಂಪೂರ್ಣ ಸತ್ಯವಲ್ಲ. ಕಾರ್ಡ್ ಬಳಸಿ ಖರ್ಚು ಮಾಡಿದ ಹಣವನ್ನು ನಿಗದಿತ ದಿನಾಂಕದೊಳಗೆ ಮರುಪಾವತಿಸಿದರೆ ಸಿಬಿಲ್ ಸ್ಕೋರ್ ಹೆಚ್ಚಾಗುವ ಸಾಧ್ಯತೆಯೇ ಹೆಚ್ಚು.
ಆದರೆ ಬಿಲ್ ಪಾವತಿಯಲ್ಲಿ ವಿಳಂಬ ಮಾಡಿದರೆ ಅಥವಾ ಡ್ಯೂ ಡೇಟ್ ಮಿಸ್ ಆದರೆ ಸಿಬಿಲ್ ಸ್ಕೋರ್ ಮೇಲೆ ನೇರ ಪರಿಣಾಮ ಬೀಳುತ್ತದೆ. ಮುಂದಿನ ದಿನಗಳಲ್ಲಿ ಲೋನ್ ಪಡೆಯುವಾಗ ಕೂಡ ಸಮಸ್ಯೆ ಎದುರಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಇನ್ನು ಕೆಲವರು ಕ್ರೆಡಿಟ್ ಕಾರ್ಡ್ ಶಾಶ್ವತವಾಗಿ ಕ್ಲೋಸ್ ಮಾಡಿದರೆ ಸಿಬಿಲ್ ಸ್ಕೋರ್ ಏರುತ್ತದೆ ಎಂದು ನಂಬಿದ್ದಾರೆ. ಆದರೆ ಇದು ತಪ್ಪು ಕಲ್ಪನೆ ಎಂದು ಬ್ಯಾಂಕಿಂಗ್ ವಲಯ ಸ್ಪಷ್ಟಪಡಿಸಿದೆ. ಕಾರ್ಡ್ ಕ್ಲೋಸ್ ಮಾಡಿದರೆ ಒಟ್ಟು ಕ್ರೆಡಿಟ್ ಲಿಮಿಟ್ ಕಡಿಮೆಯಾಗುತ್ತದೆ. ಇದರಿಂದ ಕ್ರೆಡಿಟ್ ಯೂಟಿಲೈಸೇಶನ್ ರೇಷಿಯೋ ಹೆಚ್ಚಾಗಿ ಸಿಬಿಲ್ ಸ್ಕೋರ್ ಕುಸಿಯುವ ಸಾಧ್ಯತೆ ಇರುತ್ತದೆ.
ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಇದ್ದರೂ ಅದು ಸಮಸ್ಯೆಯಲ್ಲ ಎಂದು ತಜ್ಞರು ಹೇಳುತ್ತಾರೆ. ಆದರೆ ಎಲ್ಲ ಕಾರ್ಡ್‌ಗಳನ್ನೂ ಜವಾಬ್ದಾರಿಯಿಂದ ನಿರ್ವಹಿಸುವುದು ಮುಖ್ಯ. ವಿಶೇಷವಾಗಿ ಲಭ್ಯವಿರುವ ಲಿಮಿಟ್‌ನ 30 ಶೇಕಡಕ್ಕಿಂತ ಹೆಚ್ಚು ಬಳಸಬಾರದು ಎಂದು ಸಲಹೆ ನೀಡಲಾಗಿದೆ.
ಇನ್ನು ಹಲವರು ಕನಿಷ್ಠ ಮೊತ್ತ ಪಾವತಿಸಿದರೆ ಸಾಕು ಎಂದು ಭಾವಿಸುತ್ತಾರೆ. ಆದರೆ ಅದರಿಂದ ಕೇವಲ ಲೇಟ್ ಫೀಸ್ ತಪ್ಪಿಸಿಕೊಳ್ಳಬಹುದು ಅಷ್ಟೇ. ಉಳಿದ ಮೊತ್ತದ ಮೇಲೆ ಬಡ್ಡಿ ಮುಂದುವರಿಯುತ್ತಲೇ ಇರುತ್ತದೆ. ಇದರಿಂದ ಸಾಲದ ಭಾರ ಹೆಚ್ಚಾಗುವ ಸಾಧ್ಯತೆ ಇದೆ.
ಸರಿಯಾದ ರೀತಿಯಲ್ಲಿ ಕ್ರೆಡಿಟ್ ಕಾರ್ಡ್ ಬಳಸಿದರೆ ಅದು ಆರ್ಥಿಕ ಸಹಾಯವಾಗಬಹುದು. ಆದರೆ ನಿರ್ಲಕ್ಷ್ಯ ಮಾಡಿದರೆ ಭವಿಷ್ಯದಲ್ಲಿ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.



