ಕರ್ನಾಟಕದ ಶಾಲಾ ಮಕ್ಕಳಿಗೆ ಎಐ ಪರೀಕ್ಷೆ! 15 ಲಕ್ಷ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಹೊಸ ತಂತ್ರಜ್ಞಾನ

ಬೆಂಗಳೂರು: ಕರ್ನಾಟಕದ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಕ್ರಾಂತಿಯೊಂದು ಆರಂಭವಾಗುತ್ತಿದೆ. ಇನ್ನು ಮುಂದೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶಕ್ಕಾಗಿ ತಿಂಗಳುಗಟ್ಟಲೆ ಕಾಯಬೇಕಿಲ್ಲ.

ಬೆಂಗಳೂರು: ಕರ್ನಾಟಕದ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಕ್ರಾಂತಿಯೊಂದು ಆರಂಭವಾಗುತ್ತಿದೆ. ಇನ್ನು ಮುಂದೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶಕ್ಕಾಗಿ ತಿಂಗಳುಗಟ್ಟಲೆ ಕಾಯಬೇಕಿಲ್ಲ. ಶಿಕ್ಷಕರ ಮೌಲ್ಯಮಾಪನದ ಹೊರೆಯನ್ನು ತಗ್ಗಿಸಲು ಮತ್ತು ಪರೀಕ್ಷಾ ಪ್ರಕ್ರಿಯೆಯನ್ನು ಹೈಟೆಕ್ ಮಾಡಲು ಕರ್ನಾಟಕ ಶಿಕ್ಷಣ ಇಲಾಖೆಯು ಇದೀಗ ಕೃತಕ ಬುದ್ಧಿಮತ್ತೆ (Artificial Intelligence – AI) ತಂತ್ರಜ್ಞಾನದ ಮೊರೆ ಹೋಗಿದೆ.

ಶಿಕ್ಷಣ ಇಲಾಖೆಯು ಐಐಟಿ (IIT) ಧಾರವಾಡದ ಸಹಯೋಗದೊಂದಿಗೆ ಈ ವಿಶೇಷ ಎಐ ತಂತ್ರಜ್ಞಾನವನ್ನು ಸಿದ್ಧಪಡಿಸುತ್ತಿದೆ. ಇದು ಕೇವಲ ಸಾಮಾನ್ಯ ತಂತ್ರಜ್ಞಾನವಲ್ಲ, ಬದಲಿಗೆ ಏಕಕಾಲದಲ್ಲಿ ಬರೋಬ್ಬರಿ 1.5 ಮಿಲಿಯನ್ (15 ಲಕ್ಷ) ಉತ್ತರ ಪತ್ರಿಕೆಗಳನ್ನು ಅತ್ಯಂತ ವೇಗವಾಗಿ ಮತ್ತು ನಿಖರವಾಗಿ ಮೌಲ್ಯಮಾಪನ ಮಾಡುವ ಸಾಮರ್ಥ್ಯವನ್ನು ಹೊಂದಿದೆ. 8ನೇ ತರಗತಿಯಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಪರೀಕ್ಷಿಸಲು ಈ ವ್ಯವಸ್ಥೆಯನ್ನು ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.

AI ಮೌಲ್ಯಮಾಪನ ಪ್ರಕ್ರಿಯೆ ಹೇಗೆ ನಡೆಯಲಿದೆ ?

ಹೊಸ ವ್ಯವಸ್ಥೆಯ ಅಡಿಯಲ್ಲಿ ಶಿಕ್ಷಕರು ಉತ್ತರ ಪತ್ರಿಕೆಗಳನ್ನು ಸಾಂಪ್ರದಾಯಿಕವಾಗಿ ತಿದ್ದುವ ಬದಲು, ಅವುಗಳನ್ನು ಸ್ಕ್ಯಾನ್ ಮಾಡಿ ಅಥವಾ ಫೋಟೋ ತೆಗೆದು ನಿಗದಿತ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಎಐ ತಂತ್ರಜ್ಞಾನವು ಆ ಉತ್ತರಗಳನ್ನು ವಿಶ್ಲೇಷಿಸಿ, ಅಂಕಗಳನ್ನು ನೀಡುವ ಜೊತೆಗೆ ದತ್ತಾಂಶಗಳನ್ನು (Data) ಕ್ರೋಢೀಕರಿಸುತ್ತದೆ. ಇದು ಮಾನವ ಸಹಜ ತಪ್ಪುಗಳನ್ನು ಕಡಿಮೆ ಮಾಡುವುದಲ್ಲದೆ, ನಿಖರವಾದ ಫಲಿತಾಂಶವನ್ನು ನೀಡಲು ಸಹಕಾರಿಯಾಗಲಿದೆ.

ಶಿಕ್ಷಕರಿಗೆ ಸಿಗಲಿದೆಯಾ ಬಿಡುವು ?

ಪ್ರತಿ ವರ್ಷ ಪರೀಕ್ಷಾ ಸಮಯದಲ್ಲಿ ಶಿಕ್ಷಕರು ಮೌಲ್ಯಮಾಪನ ಮತ್ತು ದತ್ತಾಂಶ ಸಂಗ್ರಹದ ಕೆಲಸದಲ್ಲಿಯೇ ಮಗ್ನರಾಗಿರುತ್ತಿದ್ದರು. ಇದರಿಂದ ಶಾಲಾ ಪಾಠ-ಪ್ರವಚನಗಳಿಗೆ ಅಡ್ಡಿಯಾಗುತ್ತಿತ್ತು. ಆದರೆ ಈ ತಂತ್ರಜ್ಞಾನದ ಬಳಕೆಯಿಂದ ಶಿಕ್ಷಕರ ಶ್ರಮ ಮತ್ತು ಸಮಯ ಉಳಿತಾಯವಾಗಲಿದೆ. ಉಳಿದ ಸಮಯದಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಮತ್ತು ಬೋಧನೆಯತ್ತ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Also Read: ವಿದ್ಯಾರ್ಥಿಗಳಿಗೆ ಸರಕಾರದಿಂದ ₹25,000 ಪ್ರೋತ್ಸಾಹಧನ, ಅರ್ಜಿ ಸಲ್ಲಿಕೆಗೆ ಮೇ 31 ಕೊನೆಯ ದಿನ

ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲೂ ಎಐ ನೆರವು:

ಕೇವಲ ಉತ್ತರ ಪತ್ರಿಕೆ ತಿದ್ದುವುದಷ್ಟೇ ಅಲ್ಲದೆ, ವೈಜ್ಞಾನಿಕವಾಗಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲು ಕೂಡ ಈ ಎಐ ತಂತ್ರಜ್ಞಾನ ಸಹಾಯ ಮಾಡಲಿದೆ. ಪ್ರಶ್ನಾಕೋಠಿಗಳನ್ನು (Question Bank) ಬಳಸಿ ಸಮತೋಲಿತ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಲು ಇದು ಶಿಕ್ಷಕರಿಗೆ ದಿಕ್ಸೂಚಿಯಾಗಲಿದೆ.

ಮುಂದಿನ ವರ್ಷದಿಂದ ಎಐ ಮೌಲ್ಯಮಾಪನ ಜಾರಿ

ಪ್ರಸ್ತುತ ಇದರ ಪೂರ್ವಸಿದ್ಧತೆಗಳು ನಡೆಯುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯಾದ್ಯಂತ ಇದನ್ನು ಜಾರಿಗೆ ತರಲು ಇಲಾಖೆ ಉದ್ದೇಶಿಸಿದೆ. ಡಿಜಿಟಲ್ ಇಂಡಿಯಾ ಪರಿಕಲ್ಪನೆಯಡಿ ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್ ಮಾಡುವ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆಯಾಗಲಿದೆ.

AI test for Karnataka school children New technology to evaluate 15 lakh answer sheets

 

 

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories