ಕರ್ನಾಟಕ-ತೆಲಂಗಾಣಕ್ಕೆ ಇಂದು ಪ್ರಧಾನಿ ಮೋದಿ ಭೇಟಿ! ಹಲವು ಯೋಜನೆಗಳಿಗೆ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಬಿಜೆಪಿ ಕಾರ್ಯಕರ್ತರನ್ನೂ ಉದ್ದೇಶಿಸಿ ಭಾಷಣ ಮಾಡುವ ಕಾರ್ಯಕ್ರಮ ನಿಗದಿಯಾಗಿದೆ.

ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆ ಭಾರಿ ಸಿದ್ಧತೆ ನಡೆಯುತ್ತಿದೆ. ಬೆಳಗ್ಗೆಯೇ ಎಚ್‌ಎಎಲ್ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೂರು ರಾಜ್ಯಗಳ ಚುನಾವಣಾ ಗೆಲುವಿನ ಬಳಿಕ ನಡೆಯುತ್ತಿರುವ ಈ ಭೇಟಿ ರಾಜಕೀಯವಾಗಿಯೂ ಗಮನ ಸೆಳೆದಿದೆ.
ರಾಜ್ಯ ಬಿಜೆಪಿ ನಾಯಕರು ಪ್ರಧಾನಿಯನ್ನು ವಿಶೇಷವಾಗಿ ಅಭಿನಂದಿಸಲು ಸಜ್ಜಾಗಿದ್ದು, ಸಾವಿರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ. ನಗರದ ಹಲವು ಭಾಗಗಳಲ್ಲಿ ಭದ್ರತೆ ಕಠಿಣಗೊಳಿಸಲಾಗಿದ್ದು, ಟ್ರಾಫಿಕ್ ವ್ಯವಸ್ಥೆಯಲ್ಲೂ ಬದಲಾವಣೆ ಮಾಡಲಾಗಿದೆ.
ಇದಾದ ಬಳಿಕ ಪ್ರಧಾನಿ ಮೋದಿ ಬೆಂಗಳೂರಿನಲ್ಲಿರುವ Art of Living Foundation ಸಂಸ್ಥೆಯ 45ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಹೊಸ ಧ್ಯಾನ ಮಂದಿರವನ್ನು ಉದ್ಘಾಟಿಸಿ, ಮಾನಸಿಕ ಆರೋಗ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಬೆಂಗಳೂರಿನ ಕಾರ್ಯಕ್ರಮಗಳ ನಂತರ ಪ್ರಧಾನಿ ಹೈದರಾಬಾದ್‌ಗೆ ತೆರಳಲಿದ್ದು, ಸುಮಾರು 9,400 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ. ರಸ್ತೆ, ರೈಲು ಮತ್ತು ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ಯೋಜನೆಗಳು ಇದರಲ್ಲಿ ಸೇರಿವೆ.
ಹೈದರಾಬಾದ್-ಪಣಜಿ ಆರ್ಥಿಕ ಕಾರಿಡಾರ್‌ನ ಭಾಗವಾಗಿರುವ ರಾಷ್ಟ್ರೀಯ ಹೆದ್ದಾರಿ-167 ಚತುಷ್ಪಥ ಕಾಮಗಾರಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಈ ಯೋಜನೆಯಿಂದ ಕರ್ನಾಟಕ ಮತ್ತು ತೆಲಂಗಾಣ ನಡುವಿನ ಸಂಪರ್ಕ ಇನ್ನಷ್ಟು ಸುಧಾರಿಸುವ ನಿರೀಕ್ಷೆ ಇದೆ. ಕೈಗಾರಿಕಾ ಚಟುವಟಿಕೆಗಳಿಗೂ ಇದರಿಂದ ಉತ್ತೇಜನ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಶಂಕುಸ್ಥಾಪನೆ ನಡೆಯಲಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಯೋಜನೆ ಭವಿಷ್ಯದಲ್ಲಿ ಉದ್ಯೋಗ ಸೃಷ್ಟಿಗೆ ಸಹಕಾರಿ ಆಗಲಿದೆ ಎನ್ನಲಾಗುತ್ತಿದೆ.
ವಾರಂಗಲ್‌ನಲ್ಲಿರುವ ಪಿಎಂ ಮಿತ್ರ ಪಾರ್ಕ್‌ಗೂ ಪ್ರಧಾನಿ ಚಾಲನೆ ನೀಡಲಿದ್ದು, ದೇಶದ ಟೆಕ್ಸ್ಟೈಲ್ ಕ್ಷೇತ್ರಕ್ಕೆ ಇದು ಹೊಸ ಉತ್ತೇಜನ ನೀಡಲಿದೆ. ಜೊತೆಗೆ ಪ್ರಮುಖ ರೈಲ್ವೆ ಮೂಲಸೌಕರ್ಯ ಯೋಜನೆಗಳನ್ನೂ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.



