ಆಧಾರ್ ಸಮಸ್ಯೆಗೆ ಹೈಕೋರ್ಟ್ ಗರಂ, ಕಠಿಣ ಸೂಚನೆ! ಸಂಚಲನಾತ್ಮಕ ತೀರ್ಪು
ಆಧಾರ್ ತಾಂತ್ರಿಕ ದೋಷಗಳಿಂದ ಸಾರ್ವಜನಿಕರು ಕಚೇರಿಗಳ ಸುತ್ತ ಅಲೆದಾಡಬಾರದು ಎಂದು ಹೈಕೋರ್ಟ್ ಕಠಿಣ ಸೂಚನೆ ನೀಡಿದ್ದು, ನಾಗರಿಕರ ಹಕ್ಕುಗಳೇ ಪ್ರಮುಖ ಎಂದು ಸ್ಪಷ್ಟಪಡಿಸಿದೆ.

ಆಧಾರ್ ಕಾರ್ಡ್ ಸಮಸ್ಯೆಗಳಿಂದ ಬಳಲುತ್ತಿರುವ ಸಾರ್ವಜನಿಕರಿಗೆ ಮಹತ್ವದ ನೆಮ್ಮದಿ ಸಿಕ್ಕಿದೆ. ತಾಂತ್ರಿಕ ದೋಷಗಳ ಹೆಸರಿನಲ್ಲಿ ಸಾಮಾನ್ಯ ಜನರನ್ನು ಕಚೇರಿಗಳ ಸುತ್ತ ಅಲೆದಾಡಿಸುವುದು ಸರಿಯಲ್ಲ ಎಂದು Bombay High Court ಕಠಿಣ ಅಭಿಪ್ರಾಯ ವ್ಯಕ್ತಪಡಿಸಿದೆ.
“ವ್ಯವಸ್ಥೆಯಲ್ಲಿ ತಾಂತ್ರಿಕ ಅಥವಾ ಬಯೋಮೆಟ್ರಿಕ್ ದೋಷ ಉಂಟಾಗಿದೆ ಎಂಬ ಕಾರಣಕ್ಕೆ ನಿಜವಾದ ನಾಗರಿಕರನ್ನು ಸರ್ಕಾರದ ಸೇವೆಗಳಿಂದ ದೂರವಿಡಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ತಂತ್ರಜ್ಞಾನ ಜನರಿಗೆ ಸಹಾಯ ಮಾಡುವುದಕ್ಕಾಗಿಯೇ ಇರಬೇಕು, ಸಮಸ್ಯೆ ಸೃಷ್ಟಿಸಲು ಅಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕರಣ ಮಹಾರಾಷ್ಟ್ರದ ಜವಳಿ ಸಹೋದರರಾದ ರೋಹಿತ್ ನಿಕಲ್ಜೆ ಮತ್ತು ರಾಹುಲ್ ನಿಕಲ್ಜೆ ಸಲ್ಲಿಸಿದ ಅರ್ಜಿಯಿಂದ ಬೆಳಕಿಗೆ ಬಂದಿದೆ. ಬಾಲ್ಯದಲ್ಲೇ ಅವರಿಗೆ ಆಧಾರ್ ಕಾರ್ಡ್ ನೀಡಲಾಗಿತ್ತು. ಆದರೆ 2022ರಲ್ಲಿ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಲು ಹೋಗಿದ್ದಾಗ ಅಧಿಕಾರಿಗಳಿಂದ ಗೊಂದಲಕಾರಿ ಸೂಚನೆಗಳು ಬಂದಿದ್ದವು.
ಒಮ್ಮೆ ಅಪ್ಡೇಟ್ ಮಾಡಲು ಹೇಳಿದ್ದರೆ, ಮತ್ತೊಮ್ಮೆ ಅರ್ಜಿ ರದ್ದು ಮಾಡಲು ಸೂಚಿಸಿದ್ದರು. ನಂತರ ಪ್ರಕ್ರಿಯೆಯನ್ನೇ ನಿಲ್ಲಿಸಲಾಗಿದೆ ಎಂದು ತಿಳಿಸಲಾಗಿತ್ತು. ಕೊನೆಯಲ್ಲಿ ಅವರ ಆಧಾರ್ ಸಂಖ್ಯೆಗಳನ್ನೇ ಸ್ಥಗಿತಗೊಳಿಸಿರುವ ಮಾಹಿತಿ ನೀಡಲಾಗಿತ್ತು.
ಈ ಗೊಂದಲದಿಂದ ಇಬ್ಬರು ಸಹೋದರರು ವಿದ್ಯಾಭ್ಯಾಸ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಸಂಬಂಧಿಸಿದ ಹಲವು ಸೌಲಭ್ಯಗಳಿಂದ ವಂಚಿತರಾದರು. ಬಾಲ್ಯದ ಬಯೋಮೆಟ್ರಿಕ್ ದೋಷಗಳಿಗೆ ಅರ್ಜಿದಾರರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ರವೀಂದ್ರ ಘುಗೆ ಮತ್ತು ಹಿತೇನ್ ವೇಣುಗಾವ್ಕರ್ ಮಹತ್ವದ ಸೂಚನೆಗಳನ್ನು ನೀಡಿದ್ದು, ಅರ್ಜಿದಾರರು 15 ದಿನಗಳೊಳಗೆ ಹೊಸದಾಗಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಜೊತೆಗೆ ನಾಲ್ಕು ವಾರಗಳೊಳಗೆ ಅರ್ಜಿಗಳ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ Unique Identification Authority of India ಗೆ ಆದೇಶಿಸಲಾಗಿದೆ.
ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ನ್ಯಾಯಾಲಯ ಹಲವು ಮಾರ್ಗಸೂಚಿಗಳನ್ನೂ ಪ್ರಕಟಿಸಿದೆ. ಆಧಾರ್ ಸ್ಥಿತಿಯ ಬಗ್ಗೆ ಸ್ಪಷ್ಟವಾದ ಲಿಖಿತ ಮಾಹಿತಿ ನೀಡಬೇಕು, ಪ್ರಾದೇಶಿಕ ಕಚೇರಿಗಳಲ್ಲಿ ಸಹಾಯ ಕೇಂದ್ರ ತೆರೆಯಬೇಕು ಹಾಗೂ ಜನರನ್ನು ಅನಗತ್ಯವಾಗಿ ಕಚೇರಿಗಳ ಸುತ್ತ ತಿರುಗಿಸಬಾರದು ಎಂದು ಸೂಚಿಸಲಾಗಿದೆ.
ದೇಶದ ಭದ್ರತೆಗೆ ಆಧಾರ್ ಡೇಟಾಬೇಸ್ ರಕ್ಷಣೆ ಮುಖ್ಯವಾದರೂ, ನಾಗರಿಕರ ಹಕ್ಕುಗಳ ರಕ್ಷಣೆಯೂ ಅಷ್ಟೇ ಮುಖ್ಯ ಎಂದು ನ್ಯಾಯಾಲಯ ಒತ್ತಿ ಹೇಳಿದೆ. “ತಾಂತ್ರಿಕ ದೋಷಕ್ಕಿಂತ ಜನರ ಹಕ್ಕು ದೊಡ್ಡದು” ಎಂಬ ಹೈಕೋರ್ಟ್ ಹೇಳಿಕೆ ಇದೀಗ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ.



