ಬಾಲಕನನ್ನು ಬಲಿ ಪಡೆದ ಚಿರತೆಗಾಗಿ ಭಾರೀ ಹಂಟ್! 70ಕ್ಕೂ ಹೆಚ್ಚು ಸಿಬ್ಬಂದಿ ಕಾಡಿನಲ್ಲಿ ಬೀಡು
ಮಲೆ ಮಹದೇಶ್ವರ ಬೆಟ್ಟದಲ್ಲಿ ಬಾಲಕನ ಜೀವ ಕಸಿದ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಭಾರೀ ಕಾರ್ಯಾಚರಣೆ ಆರಂಭಿಸಿದ್ದು, ಥರ್ಮಲ್ ಡ್ರೋನ್ ಸೇರಿ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ.

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ಬಳಿ ಬಾಲಕನನ್ನು ಬಲಿ ಪಡೆದ ಚಿರತೆಯನ್ನು ಸೆರೆಹಿಡಿಯುವುದು ಇದೀಗ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಚಿರತೆಯ ಚಲನವಲನ ಪತ್ತೆ ಮಾಡಲು ಅರಣ್ಯಾಧಿಕಾರಿಗಳು ಕಾಡಿನಲ್ಲೇ ಬೀಡು ಬಿಟ್ಟಿದ್ದು, ಹಲವು ತಂತ್ರಗಳನ್ನು ಬಳಸುತ್ತಿದ್ದಾರೆ.
ಬೆಂಗಳೂರು ಮೂಲದ ಹರ್ಷಿತ್ ಎಂಬ ಬಾಲಕ ನಾಗಮಲೆಗೆ ಪಾದಯಾತ್ರೆ ತೆರಳುತ್ತಿದ್ದ ವೇಳೆ ಚಿರತೆ ದಾಳಿಗೆ ಬಲಿಯಾಗಿದ್ದ ಘಟನೆ ರಾಜ್ಯಾದ್ಯಂತ ಆತಂಕ ಮೂಡಿಸಿತ್ತು. ಘಟನೆ ಬಳಿಕ “ನರಹಂತಕ ಚಿರತೆಯನ್ನು ಕೂಡಲೇ ಸೆರೆಹಿಡಿಯಬೇಕು” ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ವನ್ಯಧಾಮ ಮತ್ತು ಕಾವೇರಿ ವನ್ಯಧಾಮದ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿದೆ. ಒಟ್ಟು 70ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಕಾಡಿನ ವಿವಿಧ ಭಾಗಗಳಲ್ಲಿ ನಿರಂತರ ನಿಗಾ ವಹಿಸಿದ್ದಾರೆ.
ಚಿರತೆಯನ್ನು ಪತ್ತೆ ಹಚ್ಚಲು ಥರ್ಮಲ್ ಡ್ರೋನ್ ತಂತ್ರಜ್ಞಾನ ಬಳಸಲಾಗುತ್ತಿದೆ. ರಾತ್ರಿ ವೇಳೆಯಲ್ಲೂ ಚಿರತೆಯ ಚಲನವಲನಗಳನ್ನು ಗಮನಿಸಲು ಈ ಡ್ರೋನ್ ಸಹಕಾರಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕನ ಮೇಲೆ ದಾಳಿ ನಡೆದ ಪ್ರದೇಶದ ಸುತ್ತಮುತ್ತ ನಾಲ್ಕು ಬೋನುಗಳನ್ನು ಅಳವಡಿಸಲಾಗಿದೆ. ಒಂದು ವೇಳೆ ಚಿರತೆ ಬೋನಿಗೆ ಬೀಳದಿದ್ದರೆ ಮುಂದಿನ ಹಂತದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಯುತ್ತಿದೆ.
ಅರಣ್ಯ ಪ್ರದೇಶವಾಗಿರುವುದರಿಂದ ಚಿರತೆಯನ್ನು ಸೆರೆಹಿಡಿಯುವುದು ಸುಲಭದ ಕೆಲಸವಲ್ಲ. ಆದರೂ ಅರಣ್ಯ ಇಲಾಖೆ ಪ್ಲಾನ್ ಎ, ಪ್ಲಾನ್ ಬಿ ರೀತಿಯಲ್ಲಿ ವಿಭಿನ್ನ ತಂತ್ರ ರೂಪಿಸಿಕೊಂಡಿದ್ದು, ಶೀಘ್ರದಲ್ಲೇ ಚಿರತೆ ಸೆರೆಗೆ ಬೀಳಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.



