ಮೃತಪಟ್ಟವರ ಖಾತೆಗೂ ಗೃಹಲಕ್ಷ್ಮಿ ಹಣ! ಹಣ ವಾಪಸ್ ಪಡೆಯಲು ಅಧಿಕಾರಿಗಳಿಗೆ ಸೂಚನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತಪಟ್ಟ ಫಲಾನುಭವಿಗಳ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯಡಿ ಕೋಟಿ ಕೋಟಿ ಹಣ ಜಮೆಯಾಗಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯ, ದಾಖಲೆ ದೋಷ ಮತ್ತು ಖಾತೆ ಪರಿಶೀಲನೆ ಕೊರತೆ ಬಗ್ಗೆ ಈಗ ಗಂಭೀರ ಚರ್ಚೆ ಆರಂಭವಾಗಿದೆ.

ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲೊಂದು ಆಗಿರುವ ಗೃಹಲಕ್ಷ್ಮಿ ಯೋಜನೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಈಗಾಗಲೇ ಮೃತಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸುಮಾರು 22 ಕೋಟಿ ರೂಪಾಯಿ ಹಣ ಜಮೆಯಾಗಿರುವ ವಿಚಾರ ಬಹಿರಂಗವಾಗಿದ್ದು, ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.

ತಿಂಗಳು ತಿಂಗಳಿಗೆ ಹಣ ಸರಿಯಾಗಿ ಜಮೆಯಾಗುತ್ತಿಲ್ಲ ಎಂಬ ಸಾರ್ವಜನಿಕರ ಅಸಮಾಧಾನದ ನಡುವೆಯೇ ಈ ದೊಡ್ಡ ಲೋಪ ಪತ್ತೆಯಾಗಿದೆ. ಯೋಜನೆ ಅನುಷ್ಠಾನದಲ್ಲಿ ದಾಖಲೆ ಪರಿಶೀಲನೆ ಮತ್ತು ಖಾತೆ ಮೇಲ್ವಿಚಾರಣೆಯಲ್ಲಿ ದೊಡ್ಡ ಮಟ್ಟದ ಗೊಂದಲ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪರಿಶೀಲನಾ ಸಮಿತಿ ಸಭೆಯಲ್ಲಿ ಈ ವಿಚಾರ ಗಂಭೀರವಾಗಿ ಚರ್ಚೆಗೆ ಬಂದಿತು. ಸಭೆಯಲ್ಲಿ ಅಧ್ಯಕ್ಷ ಭರತ್ ಮುಂಡೋಡಿ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಮೃತಪಟ್ಟ ಫಲಾನುಭವಿಗಳ ಖಾತೆಗಳಿಗೆ ಹೋಗಿರುವ ಹಣವನ್ನು ಸರ್ಕಾರಕ್ಕೆ ಮರಳಿ ಪಡೆಯುವ ಪ್ರಕ್ರಿಯೆ ಆರಂಭಿಸಬೇಕು ಎಂದು ಅವರು ತಿಳಿಸಿದರು.

ರಾಜ್ಯ ಕಚೇರಿಯಿಂದ ಬಂದ ಮಾಹಿತಿಯ ಪ್ರಕಾರ, ಬಳಕೆಯಲ್ಲಿಲ್ಲದ ಬ್ಯಾಂಕ್ ಖಾತೆಗಳಿಗೂ ಹಣ ವರ್ಗಾವಣೆ ಮುಂದುವರಿದಿರುವುದು ಆತಂಕ ಮೂಡಿಸಿದೆ. ಮೃತರ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ ಬ್ಯಾಂಕ್‌ಗಳ ಮೂಲಕ ಖಾತೆಗಳನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.

ಇದರ ಜೊತೆಗೆ ಮತ್ತೊಂದು ಗಂಭೀರ ಅಂಶವೂ ಬೆಳಕಿಗೆ ಬಂದಿದೆ. ಕೆಲವು ಜೀವಂತ ಫಲಾನುಭವಿಗಳನ್ನು ದಾಖಲೆಗಳಲ್ಲಿ ಮೃತಪಟ್ಟವರು ಎಂದು ಗುರುತಿಸಿರುವ ದೋಷಗಳು ಕಂಡುಬಂದಿವೆ. ಈ ಹಿನ್ನೆಲೆ ಸಂಪೂರ್ಣ ತನಿಖೆ ನಡೆಸಿ ಮುಂದಿನ ಸಭೆಗೆ ವಿವರವಾದ ವರದಿ ಸಲ್ಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿದ ಮಾಹಿತಿಯಂತೆ, ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ 4,25,759 ರೇಷನ್ ಕಾರ್ಡ್ ಹೊಂದಿದವರು ಇದ್ದು, ಇದುವರೆಗೆ 3,82,178 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗಳಲ್ಲಿರುವ ಮರಣ ದಾಖಲೆಗಳ ಸಹಾಯದಿಂದ ಸ್ಥಳೀಯ ಅಧಿಕಾರಿಗಳು ಸಮನ್ವಯ ಸಾಧಿಸಿ ಇಂತಹ ಲೋಪ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಸೂಚಿಸಲಾಗಿದೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories