ರಾಜ್ಯಾದ್ಯಂತ ವರುಣನ ಆರ್ಭಟ: ಮುಂದಿನ 5 ದಿನ ಬಾರೀ ಮಳೆ, ಹಲವು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ!
ಕಳೆದ ಕೆಲವು ದಿನಗಳಿಂದ ಕೆಂಡದಂತಹ ಬಿಸಿಲಿನಿಂದ ಹೈರಾಣಾಗಿದ್ದ ಜನತೆಗೆ ಹವಾಮಾನ ಇಲಾಖೆ ತಂಪಾದ ಸುದ್ದಿ ನೀಡಿದೆ.

ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಕೆಂಡದಂತಹ ಬಿಸಿಲಿನಿಂದ ಹೈರಾಣಾಗಿದ್ದ ಜನತೆಗೆ ಹವಾಮಾನ ಇಲಾಖೆ ತಂಪಾದ ಸುದ್ದಿ ನೀಡಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ವರುಣನ ಆರ್ಭಟ ಶುರುವಾಗಲಿದೆ. ಈ ಮೂಲಕ ಸುಡುತ್ತಿರುವ ಬಿಸಿಲಿನಿಂದ ಮುಕ್ತಿ ಸಿಗುವ ಕಾಲ ಹತ್ತಿರ ಬಂದಿದೆ.
ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಇತ್ತೀಚಿನ ವರದಿಯ ಪ್ರಕಾರ, ರಾಜ್ಯದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಮುಂದಿನ 48 ಗಂಟೆಗಳ ಕಾಲ ‘ಎಲ್ಲೋ ಅಲರ್ಟ್’ ಘೋಷಿಸಿದೆ. ಇಲ್ಲಿ ಸಮುದ್ರ ತೀರದಲ್ಲಿ ಗಾಳಿಯ ವೇಗ ಹೆಚ್ಚಿರಲಿದ್ದು, ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡು ಭಾಗದ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲೂ ಮಳೆಯ ಆರ್ಭಟ ಜೋರಿರಲಿದ್ದು, ತಂಪು ವಾತಾವರಣ ನಿರ್ಮಾಣವಾಗಲಿದೆ.
ಇದನ್ನೂ ಓದಿ : ಮತ್ತೆ ಏರಿದ ಹಾಲಿನ ಬೆಲೆ: ಅಮುಲ್ ಗ್ರಾಹಕರಿಗೆ ಶಾಕ್
ರಾಜಧಾನಿ ಸಿಲಿಕಾನ್ ಬೆಂಗಳೂರಲ್ಲಿಂದು ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕಳೆದ ಕೆಲವು ವಾರಗಳಿಂದ ನಗರದಲ್ಲಿ ತಾಪಮಾನ ಏರಿಕೆಯಾಗಿತ್ತಾದರೂ, ಮಳೆಯ ಮುನ್ಸೂಚನೆಯಿಂದಾಗಿ ಗರಿಷ್ಠ ತಾಪಮಾನವು 33°C ಆಸುಪಾಸಿಗೆ ಕುಸಿಯಲಿದೆ. ನಗರದ ಹಲವೆಡೆ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಮಳೆ ಸುರಿಯುವ ನಿರೀಕ್ಷೆಯಿದೆ. ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಈ ಭಾಗದಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಅಲ್ಲದೇ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ. ಆದರೆ, ಕಲಬುರಗಿ, ರಾಯಚೂರು ಮತ್ತು ಬಳ್ಳಾರಿ ಭಾಗದಲ್ಲಿ ಉಷ್ಣಾಂಶವು ಇನ್ನು ಸಹ 38°C ನಿಂದ 40°C ವರೆಗೆ ಇರಲಿದ್ದು, ಇಲ್ಲಿ ಮಳೆಯ ಪ್ರಭಾವ ತುಸು ಕಡಿಮೆ ಇರಲಿದೆ. ಆದರೂ ಮೋಡ ಕವಿದ ವಾತಾವರಣ ಬಿಸಿಲಿನ ತಾಪವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲಿದೆ. ಬಿಸಿಲಿನಿಂದ ಬೆಂದಿದ್ದ ಕರ್ನಾಟಕಕ್ಕೆ ಈ ‘ಪ್ರೀ-ಮಾನ್ಸೂನ್’ ಮಳೆ ಸಂಜೀವಿನಿಯಂತಾಗಲಿದೆ. ಜೂನ್ ಮೊದಲ ವಾರದಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದ್ದು, ಅದಕ್ಕೂ ಮುನ್ನವೇ ರಾಜ್ಯದ ಹಲವೆಡೆ ಸುರಿಯುತ್ತಿರುವ ಈ ಮಳೆ ಕೃಷಿ ಚಟುವಟಿಕೆಗಳಿಗೆ ವೇಗ ನೀಡಲಿದೆ.



