ಸಾರಿಗೆ ನೌಕರರ ಮುಷ್ಕರ ನಾಳೆಯಿಂದ ಆರಂಭ, ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ!
ನಾಳೆಯಿಂದ ಸಾರಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ರಸ್ತೆಗಿಳಿಯುವುದು ಪಕ್ಕಾ ಆಗಿದೆ.

ರಾಜ್ಯ ಸರ್ಕಾರ ಹಾಗೂ ಸಾರಿಗೆ ನೌಕರರ ಸಂಘಟನೆಗಳೊಂದಿಗೆ ನಡೆದಿದ್ದ ಸಂಧಾನ ಮಾತುಕತೆ ವಿಫಲಗೊಂಡಿದ್ದು, ನಾಳೆಯಿಂದ ಸಾರಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ರಸ್ತೆಗಿಳಿಯುವುದು ಪಕ್ಕಾ ಆಗಿದೆ. ಒಂದೆಡೆ ನೌಕರರು ತಮ್ಮ ಬೇಡಿಕೆಗಳಿಗಾಗಿ ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಸರ್ಕಾರವು ಕಠಿಣ ಕ್ರಮಗಳಿಗೆ ಮುಂದಾಗಿದ್ದು, ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ತಬ್ಧಗೊಳ್ಳುವ ಆತಂಕ ಎದುರಾಗಿದೆ.
ಇತ್ತ ಸರ್ಕಾರವು ನಾಳೆ ಎಲ್ಲಾ ಸಾರಿಗೆ ನೌಕರರು ಕಡ್ಡಾಯವಾಗಿ ಸೇವೆಗೆ ಹಾಜರಾಗಬೇಕು ಎಂದು ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದು, ಒಂದು ವೇಳೆ ಸೇವೆಗೆ ಹಾಜರಾಗದೇ ಹೋದಲ್ಲಿ ವೇತನ ಕಡಿತ ಸೇರಿದಂತೆ ವಿವಿಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಆದರೆ ಇದಕ್ಕೆ ಸಾರಿಗೆ ಇಲಾಖೆ ಸಂಘಟನೆ ಕ್ಯಾರೆ ಎಂದಿಲ್ಲ ಎನ್ನಲಾಗಿದ್ದು, ನಾಳೆ ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲು ಸರ್ವ ಸಿದ್ಧತೆ ನಡೆಸಿವೆ ಎನ್ನಲಾಗಿದೆ.
ಇದನ್ನೂ ಓದಿ : ಭೀಕರ ದುರಂತ: ಟೆಂಪೋ-ಟ್ರಕ್ ಅಪಘಾತ- ನಿಶ್ಚಿತಾರ್ಥಕ್ಕೆ ತೆರಳುತ್ತಿದ್ದ 14 ಮಂದಿ ದುರ್ಮರಣ
ಇನ್ನು ಸಾರಿಗೆ ನೌಕರರ ಬೇಡಿಕೆ ಯಾವುದು ಅನ್ನೋದನ್ನ ನೊಡೋದಾದ್ರೆ, ಸಾರಿಗೆ ನೌಕರರ ಒಕ್ಕೂಟಗಳು ಜನವರಿ 2024ರಿಂದ ಅನ್ವಯವಾಗುವಂತೆ ಶೇಕಡಾ 25ರಷ್ಟು ವೇತನ ಪರಿಷ್ಕರಣೆಗೆ ಆಗ್ರಹಿಸುತ್ತಿವೆ. ಆದರೆ ಸರ್ಕಾರವು ಕೇವಲ 7% ರಿಂದ 12.5% ವರೆಗೆ ಮಾತ್ರ ಹೆಚ್ಚಳ ಮಾಡಲು ಸಿದ್ಧವಿರುವುದಾಗಿ ಹೇಳಿರುವುದು ಸಂಧಾನ ಮುರಿಯಲು ಮುಖ್ಯ ಕಾರಣವಾಗಿದೆ.ಕೋವಿಡ್ ಅವಧಿಯ 38 ತಿಂಗಳ ಬಾಕಿ ಉಳಿದಿರುವ ವೇತನದ ಅರಿಯರ್ಸ್ ಮೊತ್ತ 1272 ಕೋಟಿ ರೂಪಾಯಿ ಆಗಿದ್ದು ಇದನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಬೇಕೆಂದು ನೌಕರರು ಒತ್ತಾಯಿಸುತ್ತಿದ್ದಾರೆ. ಆದರೆ ಈ ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ , ವಾಯವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ಬಸ್‌ಗಳು ನಾಳೆ ರಸ್ತೆಗಿಳಿಯುವುದು ಬಹುತೇಕ ಡೌಟ್ ಆಗಿದೆ. ಸಾರ್ವಜನಿಕ ಸಾರಿಗೆ ಸೇವೆಗೆ ಅಡ್ಡಿಪಡಿಸುವುದನ್ನು ತಡೆಯಲು ರಾಜ್ಯ ಸರ್ಕಾರವು ತಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಕಾಯ್ದೆ ಎಸ್ಮಾ ಅಸ್ತ್ರ ಪ್ರಯೋಗಿಸಿದೆ. ಮುಷ್ಕರದಲ್ಲಿ ಭಾಗವಹಿಸಿ ಕರ್ತವ್ಯಕ್ಕೆ ಗೈರುಹಾಜರಾಗುವ ಸಿಬ್ಬಂದಿಗೆ ‘No Work, No Pay’ ನಿಯಮದಡಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಇಂದು ಸಂಜೆಯೊಳಗಾಗಿ ರಾಜ್ಯ ಸರ್ಕಾರ ಸಾರಿಗೆ ನೌಕರರ ಮನವೊಲಿಸುವಲ್ಲಿ ಯಶಸ್ವಿಯಾದಲ್ಲಿ ನಾಳೆ ಸಾರ್ವಜನಿಕರು ಸಾರಿಗೆ ಸೌಲಭ್ಯವನ್ನು ಮುಕ್ತವಾಗಿ ಬಳಕೆ ಮಾಡಲು ಸಾಧ್ಯವಾಗಲಿದೆ.



