ನಿಮ್ಮ ಬಳಿ ಖಾಲಿ ಜಾಗ ಅಥವಾ ಕಟ್ಟಡ ಇದೆಯೇ? ತಿಂಗಳಿಗೆ 1 ಲಕ್ಷ ಗಳಿಸಲು ಅವಕಾಶ
5G ಜಾಲ ವಿಸ್ತರಣೆಯೊಂದಿಗೆ ಮೊಬೈಲ್ ಟವರ್‌ಗಳ ಬೇಡಿಕೆ ಹೆಚ್ಚಿದ್ದು, ಖಾಲಿ ಜಾಗ ಅಥವಾ ಮನೆಯ ಮೇಲ್ಛಾವಣಿ ಹೊಂದಿರುವವರು ದೀರ್ಘಾವಧಿಯ ಬಾಡಿಗೆಯಿಂದ ಹೆಚ್ಚುವರಿ ಆದಾಯ ಗಳಿಸಬಹುದು.

ಉದ್ಯೋಗ ಅಥವಾ ವ್ಯವಹಾರದ ಜೊತೆಗೆ ಹೆಚ್ಚುವರಿ ಆದಾಯ ಗಳಿಸುವ ಕನಸು ಹಲವರದ್ದಾಗಿರುತ್ತದೆ. ನಿಮ್ಮ ಬಳಿ ಉತ್ತಮ ಸ್ಥಳದಲ್ಲಿರುವ ಖಾಲಿ ಜಾಗ, ಪ್ಲಾಟ್ ಅಥವಾ ಮನೆಯ ಮೇಲ್ಛಾವಣಿ ಇದ್ದರೆ, ಅದನ್ನು ಮೊಬೈಲ್ ಟವರ್ ಅಳವಡಿಕೆಗೆ ಬಾಡಿಗೆಗೆ ನೀಡಿ ತಿಂಗಳಿಗೆ ಸಾವಿರಗಳಿಂದ ಲಕ್ಷ ರೂ.ವರೆಗೆ ಆದಾಯ ಗಳಿಸುವ ಅವಕಾಶವಿದೆ.
ದೇಶದಾದ್ಯಂತ 5G ಸೇವೆಗಳ ವಿಸ್ತರಣೆ ವೇಗ ಪಡೆದಿರುವುದರಿಂದ ಹೊಸ ಮೊಬೈಲ್ ಟವರ್‌ಗಳ ಅವಶ್ಯಕತೆ ಹೆಚ್ಚುತ್ತಿದೆ. ಇದರಿಂದ ಟೆಲಿಕಾಂ ಮೂಲಸೌಕರ್ಯ ಕಂಪನಿಗಳು ಸೂಕ್ತ ಜಾಗಗಳ ಹುಡುಕಾಟದಲ್ಲಿದ್ದು, ಆಸ್ತಿ ಮಾಲೀಕರೊಂದಿಗೆ ದೀರ್ಘಾವಧಿ ಲೀಸ್ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿವೆ.
ಸಾಮಾನ್ಯವಾಗಿ ಜಿಯೋ ಅಥವಾ ಏರ್‌ಟೆಲ್ ನೇರವಾಗಿ ಟವರ್ ಅಳವಡಿಸುತ್ತವೆ ಎಂಬ ಭಾವನೆ ಹಲವರಲ್ಲಿದೆ. ಆದರೆ ವಾಸ್ತವದಲ್ಲಿ ಈ ಕೆಲಸವನ್ನು ವಿಶೇಷ ಟೆಲಿಕಾಂ ಇನ್‌ಫ್ರಾಸ್ಟ್ರಕ್ಚರ್ ಕಂಪನಿಗಳು ನಿರ್ವಹಿಸುತ್ತವೆ. ಟವರ್ ನಿರ್ವಹಣೆ ಮತ್ತು ಜಾಗ ಲೀಸ್ ಪ್ರಕ್ರಿಯೆಯನ್ನು ಇವುಗಳೇ ನೋಡಿಕೊಳ್ಳುತ್ತವೆ.
ಟವರ್ ಅಳವಡಿಸಲು ಸ್ಥಳದ ಅಗತ್ಯತೆಗಳೂ ಇವೆ. ಮನೆಯ ಮೇಲ್ಛಾವಣಿಯಲ್ಲಿ ಟವರ್ ಹಾಕಬೇಕಾದರೆ ಕನಿಷ್ಠ 500 ಚದರ ಅಡಿ ಜಾಗ ಇರಬೇಕು. ಜೊತೆಗೆ ಕಟ್ಟಡವು ಟವರ್‌ನ ಭಾರವನ್ನು ತಡೆದುಕೊಳ್ಳುವಷ್ಟು ಬಲಿಷ್ಠವಾಗಿರಬೇಕು. ಖಾಲಿ ಜಾಗ ಅಥವಾ ಭೂಮಿಯಾಗಿದ್ದರೆ ಸುಮಾರು 2,000 ಚದರ ಅಡಿ ಪ್ರದೇಶ ಲಭ್ಯವಿರುವುದು ಸೂಕ್ತ ಎಂದು ತಜ್ಞರು ಹೇಳುತ್ತಾರೆ.
ಬಾಡಿಗೆಯ ಮೊತ್ತವು ಪ್ರದೇಶದ ಬೇಡಿಕೆಗೆ ಅನುಗುಣವಾಗಿ ಬದಲಾಗುತ್ತದೆ. ಮೆಟ್ರೋ ನಗರಗಳಲ್ಲಿ ತಿಂಗಳಿಗೆ ₹50,000 ರಿಂದ ₹1 ಲಕ್ಷದವರೆಗೆ ಆದಾಯ ಬರಬಹುದು. ಸಣ್ಣ ನಗರಗಳಲ್ಲಿ ₹20,000 ರಿಂದ ₹40,000 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ₹10,000 ರಿಂದ ₹20,000 ವರೆಗೆ ಬಾಡಿಗೆ ಸಿಗುವ ಸಾಧ್ಯತೆ ಇರುತ್ತದೆ.
ಲೀಸ್ ಒಪ್ಪಂದಗಳು ಸಾಮಾನ್ಯವಾಗಿ 10 ರಿಂದ 15 ವರ್ಷಗಳ ಅವಧಿಗೆ ಇರುತ್ತವೆ. ವಿದ್ಯುತ್ ವೆಚ್ಚ, ನಿರ್ವಹಣಾ ಖರ್ಚು ಸೇರಿದಂತೆ ಟವರ್ ಕಾರ್ಯಾಚರಣೆಯ ಬಹುತೇಕ ವೆಚ್ಚಗಳನ್ನು ಸಂಬಂಧಿತ ಕಂಪನಿಯೇ ಭರಿಸುತ್ತದೆ.
ಆದರೆ ಈ ಕ್ಷೇತ್ರದಲ್ಲಿ ವಂಚನೆ ಪ್ರಕರಣಗಳೂ ಹೆಚ್ಚುತ್ತಿವೆ. ಕೆಲ ನಕಲಿ ಏಜೆಂಟ್‌ಗಳು ಟೆಲಿಕಾಂ ಕಂಪನಿಗಳ ಪ್ರತಿನಿಧಿಗಳೆಂದು ಹೇಳಿಕೊಂಡು ಮುಂಗಡ ಶುಲ್ಕ, ನೋಂದಣಿ ಶುಲ್ಕ ಅಥವಾ ಭದ್ರತಾ ಠೇವಣಿ ಹೆಸರಿನಲ್ಲಿ ಹಣ ಕೇಳಬಹುದು. ಯಾವುದೇ ಅಧಿಕೃತ ಕಂಪನಿ ಟವರ್ ಅಳವಡಿಕೆಗೆ ಆಸ್ತಿ ಮಾಲೀಕರಿಂದ ಮುಂಗಡ ಹಣ ಕೇಳುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.
ಆದ್ದರಿಂದ ಮೊಬೈಲ್ ಟವರ್ ಮೂಲಕ ಆದಾಯ ಗಳಿಸಲು ಆಸಕ್ತಿ ಇರುವವರು ಕಂಪನಿಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ, ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿದ ಬಳಿಕವೇ ಒಪ್ಪಂದಕ್ಕೆ ಮುಂದಾಗುವುದು ಸುರಕ್ಷಿತ.



