ಸಾಲಗಾರರಿಗೆ ಬಿಗ್ ರಿಲೀಫ್: ರೆಪೊ ದರ ಪ್ರಕಟಿಸಿದ ಆರ್‌ಬಿಐ; ಸಾಲದ ಇಎಂಐ ಇಳಿಕೆಯಾಗುತ್ತಾ?

ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆಯ ನಿರ್ಧಾರ ಪ್ರಕಟವಾಗಿದೆ. ರೆಪೊ ದರವನ್ನು ಶೇ. 5.25 ರಲ್ಲೇ ಸ್ಥಿರವಾಗಿಡಲು ಆರ್‌ಬಿಐ ನಿರ್ಧರಿಸಿದ್ದು, ಸಾಲಗಾರರ ಇಎಂಐ ಮೇಲಾಗುವ ಪರಿಣಾಮ ಹಾಗೂ ತಜ್ಞರ ಅಭಿಪ್ರಾಯ ಇಲ್ಲಿದೆ.

ಬೆಂಗಳೂರು / ಮುಂಬೈ : ಭಾರತದ ಕೋಟ್ಯಂತರ ಬ್ಯಾಂಕ್ ಗ್ರಾಹಕರಿಗೆ ಹಾಗೂ ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ಸುದ್ದಿಯೊಂದನ್ನು ನೀಡಿದೆ. ಇಂದು ನಡೆದ ಆರ್‌ಬಿಐ ಹಣಕಾಸು ನೀತಿ ಸಮಿತಿ (MPC) ಸಭೆಯ ಬಳಿಕ ರೆಪೊ ದರದಲ್ಲಿ (Repo Rate) ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ.

ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಸಭೆಯ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಭಾರತದಲ್ಲಿ ಸದ್ಯ ರೆಪೊ ದರ ಶೇಕಡಾ 5.25 ರಷ್ಟಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಇದರಿಂದಾಗಿ ಸದ್ಯಕ್ಕೆ ಹೋಮ್ ಲೋನ್, ಕಾರ್ ಲೋನ್ ಅಥವಾ ಪರ್ಸನಲ್ ಲೋನ್ ಪಡೆದಿರುವ ಗ್ರಾಹಕರ ಇಎಂಐ (EMI) ಹೆಚ್ಚಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಜಾಗತಿಕ ಏರಿಳಿತದ ನಡುವೆಯೂ ಭಾರತದ ಆರ್ಥಿಕತೆ ಭದ್ರ: ಆರ್‌ಬಿಐ ಗವರ್ನರ್

ಜಾಗತಿಕ ಮಟ್ಟದಲ್ಲಿ ಹಲವು ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಹಣದುಬ್ಬರ ನಿಯಂತ್ರಿಸಲು ಬಡ್ಡಿ ದರಗಳನ್ನು ಸತತವಾಗಿ ಹೆಚ್ಚಿಸುತ್ತಿವೆ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಆರ್ಥಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ರೆಪೊ ದರವನ್ನು ಸ್ಥಿರವಾಗಿಡಲು ನಿರ್ಧರಿಸಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

ಪ್ರಸ್ತುತ ಜಾಗತಿಕ ಆರ್ಥಿಕತೆಯಲ್ಲಿ ಅನಿಶ್ಚಿತತೆ ಎದುರಾಗಿದೆ. ಪೂರೈಕೆ ಸರಪಳಿ (Supply Chain) ಅಸ್ತವ್ಯಸ್ತ ಗೊಂಡಿರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಳಿತಗಳು ಸಹಜವಾಗಿವೆ. ಆದಾಗ್ಯೂ, ಭಾರತದ ಆರ್ಥಿಕತೆ ಅತ್ಯಂತ ಬಲಿಷ್ಠ ಹಾಗೂ ಸ್ಥಿರವಾಗಿದೆ. ಈ ಸವಾಲಿನ ಸಮಯದಲ್ಲೂ ನಾವು ಉತ್ತಮ ಆರ್ಥಿಕ ಪ್ರಗತಿ (Growth) ದಾಖಲಿಸುತ್ತಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Also Read : 300 ಯೂನಿಟ್‌ಗಳವರೆಗೆ ಉಚಿತ ಕರೆಂಟ್, ಕೇಂದ್ರದ ಹೊಸ ಯೋಜನೆ

ಭಾರತೀಯ ರಿಸರ್ವ್‌ ಬ್ಯಾಂಕ್‌ ಫೆಬ್ರವರಿ 2025 ರಿಂದ ಇದುವರೆಗೆ ಒಟ್ಟು 125 ಬೇಸಿಸ್ ಪಾಯಿಂಟ್‌ಗಳಷ್ಟು ದರ ಕಡಿತವನ್ನು ಮಾಡುವ ಮೂಲಕ ಗ್ರಾಹಕರಿಗೆ ಸಾಲು ಸಾಲು ಕೊಡುಗೆಗಳನ್ನು ನೀಡಿತ್ತು. ಆದರೆ, ಪ್ರಸ್ತುತ ಮಾರುಕಟ್ಟೆ ಸ್ಥಿರತೆಗಾಗಿ ಕಳೆದ ಸಭೆಯ ದರಗಳನ್ನೇ ಮುಂದುವರಿಸಲಾಗಿದೆ. ಇನ್ನು ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರವು ಏಪ್ರಿಲ್ 2026 ರಲ್ಲಿ ಶೇಕಡಾ 3.48 ಕ್ಕೆ ಏರಿಕೆಯಾಗಿದ್ದರೂ, ಇದು ಆರ್‌ಬಿಐ ನಿಗದಿಪಡಿಸಿರುವ ಶೇಕಡಾ 4 ರ ಸುರಕ್ಷಿತ ಮಿತಿಗಿಂತ ಕೆಳಗಿರುವುದು ಸಮಾಧಾನಕರ ಸಂಗತಿ.

ಆರ್‌ಬಿಐ ನಿರ್ಧಾರಕ್ಕೆ ಆರ್ಥಿಕ ತಜ್ಞರ ಜೈಕಾರ

ಕೇಂದ್ರೀಯ ಬ್ಯಾಂಕ್‌ನ ಈ ಸಮತೋಲಿತ ನಿರ್ಧಾರವನ್ನು ದೇಶದ ಪ್ರಮುಖ ಆರ್ಥಿಕ ಮತ್ತು ಹಣಕಾಸು ವಲಯದ ತಜ್ಞರು ಸ್ವಾಗತಿಸಿದ್ದಾರೆ.

ಆರ್ಥಿಕ ಬೆಳವಣಿಗೆಗೆ ಬೂಸ್ಟರ್ (ಅತುಲ್ ಮೋಂಗಾ, ಸಿಇಒ – ಬೇಸಿಕ್ ಹೋಮ್ ಲೋನ್):

ಆರ್‌ಬಿಐ ರೆಪೊ ದರವನ್ನು 5.25% ರಲ್ಲೇ ಮುಂದುವರಿಸಿರುವುದು ದೇಶದ ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರ ನಿರ್ವಹಣೆಯ ದೃಷ್ಟಿಯಿಂದ ಅತ್ಯಂತ ಸೂಕ್ತ ನಿರ್ಧಾರ. ಜಾಗತಿಕ ಅನಿಶ್ಚಿತತೆ ಮತ್ತು ಕಚ್ಚಾ ತೈಲ ಬೆಲೆಗಳ ಏರಿಳಿತದ ನಡುವೆಯೂ ಈ ಸ್ಥಿರತೆಯು ದೇಶೀಯ ಬಳಕೆ, ರಿಯಲ್ ಎಸ್ಟೇಟ್ ಹೂಡಿಕೆ ಮತ್ತು ಉದ್ಯಮ ವಲಯದ ಯೋಜನೆಗಳಿಗೆ ಹೆಚ್ಚಿನ ಬಲ ತುಂಬಲಿದೆ ಎಂದಿದ್ದಾರೆ.

Also Read : ಯುಪಿಐ ಬಳಕೆಯಿಂದ ಎಟಿಎಂ ವಹಿವಾಟು ಕುಸಿತ! ನಗದು ತುಂಬುವ ವೆಚ್ಚ ಏರಿಕೆ ಆತಂಕ

ಡಿಜಿಟಲ್ ಸಾಲ ವಲಯಕ್ಕೆ ಆನೆಬಲ (ವಿಜಯ್ ಕುಮಾರ್ ಸಿಂಗ್, ಸಿಎಫ್‌ಒ – ಲೆಂಡಿಂಗ್ ಪ್ಲೇಟ್)

ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಆರ್‌ಬಿಐ ಅತ್ಯಂತ ವಿವೇಚನಾಯುತ ಹೆಜ್ಜೆ ಇಟ್ಟಿದೆ. ಸ್ಥಿರವಾದ ಬಡ್ಡಿ ದರಗಳು ಸಾಲ ನೀಡುವ ಬ್ಯಾಂಕುಗಳಿಗೆ ಹಾಗೂ ಸಾಲ ಪಡೆಯುವ ಗ್ರಾಹಕರಿಗೆ ದೀರ್ಘಾವಧಿಯ ಹಣಕಾಸು ಯೋಜನೆ ರೂಪಿಸಲು ನೆರವಾಗಲಿವೆ. ಇದು ಡಿಜಿಟಲ್ ಲೆಂಡಿಂಗ್ ಇಕೋಸಿಸ್ಟಮ್‌ನಲ್ಲಿ ಸಾಲದ ಬೆಳವಣಿಗೆಗೆ ಉತ್ತೇಜನ ನೀಡಲಿದ್ದು, ಗ್ರಾಮೀಣ ಭಾಗದ ಜನರಿಗೆ ಸುಲಭವಾಗಿ ಸಾಲ ಸಿಗಲು ನೆರವಾಗುತ್ತದೆ ಎಂದಿದ್ದಾರೆ.

ಗ್ರಾಹಕರಿಗೆ ನಿಶ್ಚಿತತೆಯ ನೆಮ್ಮದಿ (ಶಕ್ತಿ ಶೇಖಾವತ್, ಬಿಸಿನೆಸ್ ಹೆಡ್ – ಭಾರತಲೋನ್)

ಆರ್‌ಬಿಐನ ಈ ನಿರ್ಧಾರವು ಮಧ್ಯಮ ವರ್ಗದ ಸಾಲಗಾರರು ಹಾಗೂ ಸಾಲ ನೀಡುವ ಹಣಕಾಸು ಸಂಸ್ಥೆಗಳು ಇಬ್ಬರಿಗೂ ಒಂದು ರೀತಿಯ ಆರ್ಥಿಕ ಸ್ಥಿರತೆ ಮತ್ತು ನಿಶ್ಚಿತತೆಯ ನೆಮ್ಮದಿಯನ್ನು ಒದಗಿಸಿದೆ.

ಭಾರತದಲ್ಲಿ ಸದ್ಯಕ್ಕೆ ಬ್ಯಾಂಕ್ ಲೋನ್ ಗಳ ಬಡ್ಡಿದರದಲ್ಲಿ ಯಾವುದೇ ಏರಿಕೆ ಆಗದೆ ಇರುವುದು ಮಧ್ಯಮ ವರ್ಗದ ಜನರಿಗೆ ನೆಮ್ಮದಿ ತಂದಿದೆ. ಆರ್‌ಬಿಐನ ಈ ನಡೆ ದೇಶದ ಜಿಡಿಪಿ (GDP) ಪ್ರಗತಿಯ ವೇಗವನ್ನು ಕಾಯ್ದುಕೊಳ್ಳಲು ನೆರವಾಗಲಿದೆ ಎಂಬುದು ತಜ್ಞರ ಸ್ಪಷ್ಟ ಅಭಿಪ್ರಾಯವಾಗಿದೆ.

rbi mpc meeting 2026 repo rate unchanged emi impact

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories