ಅರ್ಧರಾತ್ರಿ ಕಳೆದರೂ ನಿಲ್ಲದ ಮೀಟಿಂಗ್: ಆರೋಗ್ಯ ಇಲಾಖೆಗೆ ಚುರುಕು ಮುಟ್ಟಿಸಿದ ಸಚಿವ ಯು.ಟಿ. ಖಾದರ್!
ಸ್ಪೀಕರ್ ಆಗಿ ವಿಧಾನಸೌಧದಲ್ಲಿ ಶಿಸ್ತಿನ ಸಿಪಾಯಿಯಂತೆ ತನ್ನ ಹುದ್ದೆ ನಿರ್ವಹಿಸಿದ್ದ ಯು.ಟಿ ಖಾದರ್ ಇದೀಗ ಆರೋಗ್ಯ ಸಚಿವರಾಗಿಯೂ ಆರೋಗ್ಯ ಇಲಾಖೆಗೆ ಚುರುಕು ಮುಟ್ಟಿಸಿದ್ದಾರೆ.

ಸ್ಪೀಕರ್ ಆಗಿ ವಿಧಾನಸೌಧದಲ್ಲಿ ಶಿಸ್ತಿನ ಸಿಪಾಯಿಯಂತೆ ತನ್ನ ಹುದ್ದೆ ನಿರ್ವಹಿಸಿದ್ದ ಯು.ಟಿ ಖಾದರ್ ಇದೀಗ ಆರೋಗ್ಯ ಸಚಿವರಾಗಿಯೂ ಆರೋಗ್ಯ ಇಲಾಖೆಗೆ ಚುರುಕು ಮುಟ್ಟಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ನೂತನ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ತಡರಾತ್ರಿ ದಿಢೀರ್ ಪ್ರಗತಿ ಪರಿಶೀಲನಾ ಸಭೆ ನಡೆಸುವ ಮೂಲಕ ಸಾರ್ವಜನಿಕರು ಹಾಗೂ ಆಡಳಿತ ವಲಯದಲ್ಲಿ ತೀವ್ರ ಅಚ್ಚರಿ ಮೂಡಿಸಿದ್ದಾರೆ. ಗುರುವಾರ ರಾತ್ರಿ 11 ಗಂಟೆಗೆ ಆರಂಭವಾದ ಈ ಉನ್ನತ ಮಟ್ಟದ ಅಧಿಕಾರಿಗಳ ಸಭೆಯು ಶುಕ್ರವಾರ ಮುಂಜಾನೆ 3 ಗಂಟೆಯವರೆಗೆ ಸತತ ನಾಲ್ಕು ಗಂಟೆಗಳ ಕಾಲ ಜರುಗಿತು. ಈ ಅಪರೂಪದ ತಡರಾತ್ರಿ ಸಭೆಯಲ್ಲಿ ಸ್ಥಳೀಯ ಶಾಸಕರಾದ ಸಿಮೆಂಟ್ ಮಂಜು ಹಾಗೂ ಸಂಸದ ಶ್ರೇಯಸ್ ಪಟೇಲ್ ಅವರು ಪಾಲ್ಗೊಂಡು ಆಸ್ಪತ್ರೆಯ ಸ್ಥಿತಿಗತಿಗಳ ಕುರಿತು ಚರ್ಚಿಸಿದರು.
ಸಭೆಯಲ್ಲಿ ಮಾತನಾಡಿದ ಸಚಿವ ಖಾದರ್ ಅವರು, ಸರ್ಕಾರಿ ಆಸ್ಪತ್ರೆಗಳು ಬಡವರ ಪಾಲಿನ ಆಶಾಕಿರಣವಾಗಿದ್ದು, ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ರೋಗಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಕಂಡು ಮಾನವೀಯತೆಯಿಂದ ಚಿಕಿತ್ಸೆ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಇದೇ ವೇಳೆ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಸುಧಾರಣೆಗಳನ್ನು ಪ್ರಕಟಿಸಿದ ಅವರು, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕನಿಷ್ಠ 5 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿರುವ ಹೊರಗುತ್ತಿಗೆ ವೈದ್ಯರನ್ನು ಶೀಘ್ರದಲ್ಲೇ ಕಾಯಂಗೊಳಿಸಲಾಗುವುದು ಎಂಬ ಮಹತ್ವದ ಭರವಸೆ ನೀಡಿದರು.
ಆಸ್ಪತ್ರೆಗಳ ಮೂಲಸೌಕರ್ಯ ಕೊರತೆ ಹಾಗೂ ಸಾರ್ವಜನಿಕರ ದೂರುಗಳನ್ನು ಆಲಿಸಲು ಶೀಘ್ರದಲ್ಲೇ ರಾಜ್ಯಾದ್ಯಂತ ಹೊಸ ಸಹಾಯವಾಣಿಯನ್ನು ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು. ಅಲ್ಲದೆ, ಸೇವೆಯಿಂದ ನಿವೃತ್ತರಾಗಿದ್ದರೂ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರುವ ವೈದ್ಯರನ್ನು ಪುನಃ ಸರ್ಕಾರಿ ಸೇವೆಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ನಿಯಮಾವಳಿ ರೂಪಿಸಲಿದೆ ಎಂದರು.
ವಿಧಾನಸಭಾ ಇತಿಹಾಸದಲ್ಲೇ ಇಂತಹ ತಡರಾತ್ರಿ ಸಭೆ ನಡೆಸಿದ ಮೊದಲ ಮಂತ್ರಿ ಯು.ಟಿ. ಖಾದರ್ ಎಂದು ಶಾಸಕ ಸಿಮೆಂಟ್ ಮಂಜು ಶ್ಲಾಘಿಸಿದರು. ಸಚಿವರ ಈ ದಿಢೀರ್ ಭೇಟಿ ಮತ್ತು ಜನಪರ ನಿರ್ಧಾರಗಳು ಆಸ್ಪತ್ರೆಯ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಸಾರ್ವಜನಿಕರು ಆಶಿಸಿದ್ದಾರೆ.



