ಅಪ್ರಾಪ್ತರಿಗಿಲ್ಲ ‘ಎಣ್ಣೆ’ ಭಾಗ್ಯ: 21 ವರ್ಷದೊಳಗಿನವರಿಗೆ ಮದ್ಯ ನೀಡಿದ್ರೆ ಬಾರ್ ಲೈಸೆನ್ಸ್ ರದ್ದು!
ರಾಜ್ಯದ ಯುವ ಪೀಳಿಗೆಯನ್ನು ಮಾದಕ ವ್ಯಸನ ಹಾಗೂ ಮದ್ಯಪಾನದ ಪಿಡುಗಿನಿಂದ ರಕ್ಷಿಸಲು ಕರ್ನಾಟಕ ಸರ್ಕಾರವು ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ.

ರಾಜ್ಯದ ಯುವ ಪೀಳಿಗೆಯನ್ನು ಮಾದಕ ವ್ಯಸನ ಹಾಗೂ ಮದ್ಯಪಾನದ ಪಿಡುಗಿನಿಂದ ರಕ್ಷಿಸಲು ಕರ್ನಾಟಕ ಸರ್ಕಾರವು ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ರಾಜ್ಯಾದ್ಯಂತ ಇರುವ ಎಲ್ಲಾ ಪಬ್, ಬಾರ್, ಕ್ಲಬ್ ಹಾಗೂ ರೆಸ್ಟೋರೆಂಟ್ಗಳಲ್ಲಿ 21 ವರ್ಷದೊಳಗಿನ ಅಪ್ರಾಪ್ತರಿಗೆ ಮದ್ಯದ ಸರಬರಾಜು ಹಾಗೂ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಇಲಾಖೆಗೆ ಮಹತ್ವದ ಆದೇಶ ಹೊರಡಿಸಿದ್ದಾರೆ. ನಿಯಮ ಉಲ್ಲಂಘಿಸುವ ವಾಣಿಜ್ಯ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಪ್ರಮುಖ ಶಿಕ್ಷಣ ಸಂಸ್ಥೆಗಳ ಸುಮಾರು 4,093 ವಿದ್ಯಾರ್ಥಿಗಳನ್ನು ಒಳಪಡಿಸಿ ನಡೆಸಲಾದ ವೈಜ್ಞಾನಿಕ ಸಮೀಕ್ಷೆಯೊಂದರಲ್ಲಿ ಕಳವಳಕಾರಿ ಅಂಶಗಳು ಬೆಳಕಿಗೆ ಬಂದಿದ್ದವು. ನಗರದ ಪ್ರತಿ ಮೂವರು ಹದಿಹರೆಯದವರಲ್ಲಿ ಒಬ್ಬರು ಮದ್ಯ ಅಥವಾ ತಂಬಾಕು ಬಳಕೆಯ ಹವ್ಯಾಸಕ್ಕೆ ಬಿದ್ದಿರುವುದು ಈ ವರದಿಯಲ್ಲಿ ಸಾಬೀತಾಗಿತ್ತು. ಅಷ್ಟೇ ಅಲ್ಲದೆ, ಯುವಕರು ಕೇವಲ 17ನೇ ವಯಸ್ಸಿಗೆಲ್ಲಾ ಮೊದಲ ಬಾರಿಗೆ ಮದ್ಯದ ರುಚಿ ನೋಡುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರವು ಯುವ ಸಮಾಜದ ಆರೋಗ್ಯ ಕಾಪಾಡಲು ಈ ಕಠಿಣ ನಿಯಮವನ್ನು ಜಾರಿಗೆ ತಂದಿದೆ.
ಇದನ್ನೂ ಓದಿ : ಅರ್ಧರಾತ್ರಿ ಕಳೆದರೂ ನಿಲ್ಲದ ಮೀಟಿಂಗ್: ಆರೋಗ್ಯ ಇಲಾಖೆಗೆ ಚುರುಕು ಮುಟ್ಟಿಸಿದ ಸಚಿವ ಯು.ಟಿ. ಖಾದರ್!
ಹೊಸ ಆದೇಶದ ಅನ್ವಯ, ಪಬ್ ಹಾಗೂ ಬಾರ್ಗಳ ಪ್ರವೇಶ ದ್ವಾರದಲ್ಲಿ ಗ್ರಾಹಕರ ವಯಸ್ಸನ್ನು ಖಚಿತಪಡಿಸಿಕೊಳ್ಳಲು ‘ನೋ ಐಡಿ, ನೋ ಎಂಟ್ರಿ’ ನೀತಿಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಉದ್ಯಮ ವಲಯದಲ್ಲಿದ್ದ ಗೊಂದಲಗಳಿಗೆ ತೆರೆ ಎಳೆದಿರುವ ಸಚಿವರು, ಬರುವ ಪ್ರತಿಯೊಬ್ಬ ಗ್ರಾಹಕನ ಗುರುತಿನ ಚೀಟಿಯ ನಕಲನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ, ಕೇವಲ 21 ವರ್ಷಕ್ಕಿಂತ ಕಡಿಮೆ ಪ್ರಾಯದಂತೆ ಕಾಣುವ ಶಂಕಿತರ ವಯಸ್ಸನ್ನು ಮಾತ್ರ ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ನಿಯಮ ಉಲ್ಲಂಘಿಸಿ ಅಪ್ರಾಪ್ತರಿಗೆ ಮದ್ಯ ನೀಡುವ ಮಾಲೀಕರು ಮತ್ತು ಮ್ಯಾನೇಜರ್ಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು. ಇದಕ್ಕಾಗಿ ಪ್ರತಿ ಮದ್ಯದ ಅಂಗಡಿಯ ಮುಂಭಾಗದಲ್ಲಿ ಕಾರ್ಯನಿರ್ವಹಿಸುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ.



