ಶಿವಮೊಗ್ಗ ಜಿಲ್ಲೆಯಲ್ಲಿ ಘನಘೋರ ದುರಂತ.. ಹೃದಯಾಘಾತಕ್ಕೆ ಆರು ವರ್ಷದ ಕಂದಮ್ಮ ಬಲಿ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಆರು ವರ್ಷದ ಪುಟ್ಟ ಬಾಲಕ ತ್ರಿಲೋಕ್ ಜೈನ್ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕರೂರು ಹೋಬಳಿಯ ಹಾಳಸಸಿ ಗ್ರಾಮದಲ್ಲಿ ಅತ್ಯಂತ ಕರುಣಾಜನಕ ಹಾಗೂ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಆರು ವರ್ಷದ ಪುಟ್ಟ ಬಾಲಕ ತ್ರಿಲೋಕ್ ಜೈನ್ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಈ ದುರಂತವು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.

ಮೃತ ಬಾಲಕನನ್ನು ಕೊಡನವಳ್ಳಿ ಗ್ರಾಮದ ನಿವಾಸಿಗಳಾದ ಗೌತಮ್ ಜೈನ್ ಹಾಗೂ ಶಿಲ್ಪಾ ದಂಪತಿಯ ಪುತ್ರ ತ್ರಿಲೋಕ್ ಜೈನ್ ಎಂದು ಗುರುತಿಸಲಾಗಿದೆ. ಕಳೆದ ಶನಿವಾರ ಮಧ್ಯಾಹ್ನ ಎಂದಿನಂತೆ ಶಾಲೆ ಮುಗಿಯುವ ಸಮಯದಲ್ಲಿ ಬಾಲಕ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ಇದನ್ನು ಗಮನಿಸಿದ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಬಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ದುರಾದೃಷ್ಟವಶಾತ್ ಆಸ್ಪತ್ರೆಗೆ ತಲುಪುವ ಮಾರ್ಗ ಮಧ್ಯದಲ್ಲೇ ಬಾಲಕ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ : ವಾಹನ ಸವಾರರಿಗೆ ಸಿಹಿ ಸುದ್ದಿ! ಪೆಟ್ರೋಲ್, ಡೀಸೆಲ್ ದರ ಭಾರೀ ಇಳಿಕೆಯಾಗುವ ಸಾಧ್ಯತೆ

ಸಾಮಾನ್ಯವಾಗಿ ವಯಸ್ಸಾದವರಲ್ಲಿ ಅಥವಾ ರಕ್ತದೊತ್ತಡದಂತಹ ದೀರ್ಘಕಾಲದ ಕಾಯಿಲೆ ಇರುವವರಲ್ಲಿ ಕಂಡುಬರುತ್ತಿದ್ದ ಹೃದಯಾಘಾತವು, ಈಗ ಇಷ್ಟು ಸಣ್ಣ ವಯಸ್ಸಿನ ಮಗುವಿಗೆ ಸಂಭವಿಸಿರುವುದು ಜನರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ. ಮೃತ ತ್ರಿಲೋಕ್ ಜೈನ್‌ಗೆ ಮೊದಲಿನಿಂದ ಯಾವುದೇ ರೀತಿಯ ಹೃದಯ ಸಂಬಂಧಿ ಕಾಯಿಲೆಗಳಾಗಲಿ ಅಥವಾ ಇತರ ಆರೋಗ್ಯ ಸಮಸ್ಯೆಗಳಾಗಲಿ ಇರಲಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಎಂದಿನಂತೆ ಬೆಳಗ್ಗೆ ಆರೋಗ್ಯವಾಗಿಯೇ ಶಾಲೆಗೆ ತೆರಳಿದ್ದ ಮಗ ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿರುವುದು ಪೋಷಕರಿಗೆ ಭರಿಸಲಾಗದ ದುಃಖ ತಂದಿದೆ. ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.ಈ ದುರದೃಷ್ಟಕರ ಘಟನೆಗೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮುಖ್ಯ ಶಿಕ್ಷಕರು ಹಾಗೂ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿಯೂ ಕಾಣಿಸಿಕೊಳ್ಳುತ್ತಿರುವ ಇಂತಹ ಹೃದಯ ಸಂಬಂಧಿ ಸಮಸ್ಯೆಗಳು ಮಕ್ಕಳ ಆರೋಗ್ಯದ ಕಡೆಗೆ ಪೋಷಕರು ಮತ್ತು ವೈದ್ಯಕೀಯ ವಲಯ ಹೆಚ್ಚಿನ ನಿಗಾ ಹಾಗೂ ಜಾಗೃತಿ ವಹಿಸಬೇಕಾದ ಅಗತ್ಯವನ್ನು ಎತ್ತಿ ತೋರಿಸಿವೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories