ಒಂದೇ ರೀತಿಯ ಪುಲಾವ್ ತಿಂದ ಬೇಜಾರಾಗಿದ್ರೆ ಕೇವಲ 15 ನಿಮಿಷದಲ್ಲಿ ಮಹಾರಾಷ್ಟ್ರ ಶೈಲಿಯ ‘ಥೇಚಾ ಪುಲಾವ್’ ತಯಾರಿಸಿ
ಪ್ರತಿದಿನ ಒಂದೇ ರೀತಿಯ ಪುಲಾವ್ ತಿಂದು ಬೇಜಾರಾಗಿದ್ಯಾ? ಹಾಗಾದ್ರೆ ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಹುರಿದ ಶೇಂಗಾದಿಂದ ತಯಾರಿಸಿ ಮಹಾರಾಷ್ಟ್ರದ ಫೇಮಸ್ ಥೇಚಾ ಪುಲಾವ್. ಇದು ಮಕ್ಕಳ ಲಂಚ್ ಬಾಕ್ಸಿಗೂ ಬೆಸ್ಟ್.
ಪುಲಾವ್ ಎಲ್ಲರಿಗೂ ಇಷ್ಟವಾಗುವ ಅಷ್ಟೇ ರುಚಿಯಾದ ಒನ್–ಪಾಟ್ ಡಿಶ್. ಇದನ್ನು ತಯಾರಿಸುವುದು ಕೂಡಾ ಅಷ್ಟೇ ಸುಲಭ. ಇದು ಕೆಲಸಕ್ಕೆ ಹೋಗುವ ಮಹಿಳೆಯರಿಂದ ಹಿಡಿದು ಬ್ಯಾಚುಲರ್ಸ್ವರೆಗೂ ಅತ್ಯಂತ ಸುಲಭದಲ್ಲಿ ಹಾಗೂ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಅಡುಗೆ. ಪುಲಾವ್ ಎಂದ ತಕ್ಷಣ ಹಲವು ಬಗೆಯ ಪುಲಾವ್ಗಳು ನಮಗೆ ಕಾಣಿಸುತ್ತವೆ. ಕೆಲವೊಂದನ್ನು ತಯಾರಿಸಲು ಸ್ವಲ್ಪ ಸಮಯದ ಅಗತ್ಯವಿದ್ದರೆ, ಕೆಲವೊಂದಕ್ಕೆ ಕಡಿಮೆ ಸಮಯ ಸಾಕು. ಅತ್ಯಂತ ಕಡಿಮೆ ಸಮಯದಲ್ಲಿ ರುಚಿಯಾದ ಪುಲಾವ್ ತಯಾರಿಸುವುದಿದ್ದರೆ ಮಾಹಾರಾಷ್ಟ್ರ ಶೈಲಿಯ ಥೇಚಾ ಪುಲಾವ್ ತಯಾರಿಸಬಹುದು. ಕೇವಲ 15 ನಿಮಿಷದಲ್ಲಿ ತಯಾರಾಗುವ ಈ ಪುಲಾವ್ ಮಕ್ಕಳ ಲಂಚ್ ಬಾಕ್ಸಿಗೂ ಬೆಸ್ಟ್. ಒಂದೇ ತರಹದ ಪುಲಾವ್ ತಿಂದು ಬೇಜಾರಾಗಿದ್ರೆ ಥೇಚಾ ಪುಲಾವ್ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು
ಥೇಚಾ ಪೇಸ್ಟ್ಗಾಗಿ
ಮೀಡಿಯಂ ಖಾರದ 4 ರಿಂದ 5 ಮೆಣಸಿನಕಾಯಿ
ಬೆಳ್ಳುಳ್ಳಿ ಎಸಳುಗಳು 5 ರಿಂದ 6
ಹುರಿದ ಶೇಂಗಾ 3 ಚಮಚ
ಕೊತ್ತಂಬರಿ ಸೊಪ್ಪು ಅರ್ಧ ಕಪ್
ಜೀರಿಗೆ 1 ಚಮಚ
ಎಣ್ಣೆ 1 ಚಮಚ
ಪುಲಾವ್ಗಾಗಿ
ಬಾಸ್ಮತಿ ಅಕ್ಕಿ – 1 ಕಪ್
ಈರುಳ್ಳಿ – 1 ದೊಡ್ಡದು
ಬಟಾಣಿ, ಕ್ಯಾರೆಟ್, ಬೀನ್ಸ್ – ತಲಾ ಅರ್ಧ ಕಪ್
ಸಾಸಿವೆ, ಜೀರಿಗೆ – ಅರ್ಧ ಚಮಚ
ಕರಿಬೇವಿನ ಎಲೆ – 7–8
ಅರಿಶಿನ ಪುಡಿ 1/4 ಚಮಚ
ಗರಂ ಮಸಾಲ – ಅರ್ಧ ಚಮಚ
ತುಪ್ಪ ಅಥವಾ ಎಣ್ಣೆ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆ ರಸ – 1 ಚಮಚ
ಇದನ್ನೂ ಓದಿ : ಮಳೆಗಾಲದ ಸ್ಪೆಷಲ್ : ಗರಿಗರಿಯಾದ ಈರುಳ್ಳಿ ಪಕೋಡ
ತಯಾರಿಸುವ ವಿಧಾನ
- ಮೊದಲಿಗೆ ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ. ಅದಕ್ಕೆ ಜೀರಿಗೆ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಹುರಿಯಿರಿ. ಒಲೆಯನ್ನು ಬಂದ್ ಮಾಡಿ ಅದಕ್ಕೆ ಹುರಿದ ಶೇಂಗಾ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಮಿಶ್ರಣ ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ನೀರು ಸೇರಿಸದೆ ತರಿ ತರಿಯಾಗಿ ರುಬ್ಬಿಕೊಳ್ಳಿ.
- ಈ ಪುಲಾವ್ ಮಾಡುವ ಸಲುವಾಗಿ ಪ್ರಶರ್ ಕುಕ್ಕರ್ನಲ್ಲಿ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿಯಾದ ನಂತರ ಅದಕ್ಕೆ ಸಾಸಿವೆ, ಜೀರಿಗೆ ಮತ್ತು ಕರಿಬೇವು ಸೇರಿಸಿ ಸ್ವಲ್ಪ ಹುರುದುಕೊಳ್ಳಿ. ಅದಕ್ಕೆ ಕತ್ತರಿಸಿದ ಈರುಳ್ಳಿ ಸೇರಿಸಿ ಹೊಂಬಣ್ಣ ಬರುವವರಗೆ ಹುರಿಯಿರಿ. ಅದಕ್ಕೆ ಹೆಚ್ಚಿಟ್ಟುಕೊಂಡ ತರಕಾರಿಗಳನ್ನು ಸೇರಿಸಿ, 2 ನಿಮಿಷ ಹುರಿಯಿರಿ.
- ಈಗ ಅದಕ್ಕೆ ಮಾಡಿಟ್ಟುಕೊಂಡಿರುವ ಥೇಚಾ ಪೇಸ್ಟ್ ಸೇರಿಸಿ. 2 ನಿಮಿಷ ಹುರಿಯಿರಿ. ನಂತರ ಅದಕ್ಕೆ ಅರಿಶಿಣ, ಗರಂ ಮಸಾಲ ಸೇರಿಸಿ ಇನ್ನೊಮ್ಮೆ ಹುರಿಯಿರಿ.
- ಬಳಿಕ ಅಕ್ಕಿಯನ್ನು ಹಾಕಿ, ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅದಕ್ಕೆ 2 ಕಪ್ಪ ಬಿಸಿ ನೀರನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆ ರಸ ಸೇರಿಸಿ.
- ಪ್ರೆಶರ್ ಕುಕ್ಕರಿನ ಮುಚ್ಚಳ ಹಾಕಿ 2 ವಿಸಲ್ ಹಾಕಿಸಿ. ಕುಕ್ಕರ್ ತಣ್ಣಗಾದ ನಂತರ ಮುಚ್ಚಳ ತೆಗೆದು ಎಲ್ಲವನ್ನು ಮಿಕ್ಸ್ ಮಾಡಿ. ಅದಕ್ಕೆ ಮೇಲಿನಿಂದ ಸ್ವಲ್ಪ ಕೊತ್ತೊಂಬರಿ ಸೊಪ್ಪು ಹಾಕಿ. ಈಗ ರುಚಿಯಾದ ಥೇಚಾ ಪುಲಾವ್ ಸವಿಯಲು ಸಿದ್ಧ.



