ವಾಹನ ಸವಾರರೇ ಗಮನಿಸಿ… ಟ್ರಾಫಿಕ್ ದಂಡ ಪಾವತಿಸುವವರಿಗೆ ಬಂಪರ್ ಆಫರ್: ಇಂದಿನಿಂದಲೇ ಶೇ. 50 ರಿಯಾಯಿತಿ ಅನ್ವಯ!
ವಾಹನ ಸವಾರರು ಜುಲೈ 10ರ ಒಳಗೆ ತಮ್ಮ ಬಾಕಿ ದಂಡವನ್ನು ಅರ್ಧ ಬೆಲೆಯಲ್ಲಿ ಪಾವತಿಸಿ ಪ್ರಕರಣಗಳಿಂದ ಮುಕ್ತಿ ಪಡೆಯಲು ಸುವರ್ಣ ಅವಕಾಶ ಕಲ್ಪಿಸಲಾಗಿದೆ.

ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ರಾಜ್ಯದ ವಾಹನ ಸವಾರರಿಗೆ ಸರ್ಕಾರವು ನೀಡಿರುವ ಸಂಚಾರ ದಂಡ ಮೊತ್ತದಲ್ಲಿ ಶೇಕಡಾ 50ರಷ್ಟು ವಿನಾಯಿತಿ ಇಂದಿನಿಂದ ಆರಂಭಗೊಂಡಿದೆ. ವಾಹನ ಸವಾರರು ಜುಲೈ 10ರ ಒಳಗೆ ತಮ್ಮ ಬಾಕಿ ದಂಡವನ್ನು ಅರ್ಧ ಬೆಲೆಯಲ್ಲಿ ಪಾವತಿಸಿ ಪ್ರಕರಣಗಳಿಂದ ಮುಕ್ತಿ ಪಡೆಯಲು ಸುವರ್ಣ ಅವಕಾಶ ಕಲ್ಪಿಸಲಾಗಿದೆ.
ರಾಜ್ಯಾದ್ಯಂತ ಸದ್ಯ ಒಟ್ಟು 5.05 ಕೋಟಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಬರೋಬ್ಬರಿ 2,727 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ದಂಡದ ಹಣ ಸರ್ಕಾರಕ್ಕೆ ಪಾವತಿಯಾಗಬೇಕಿದೆ. ಇಷ್ಟೊಂದು ಬೃಹತ್ ಪ್ರಮಾಣದ ಮೊತ್ತ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಹೊರೆಯಾಗದಂತೆ ವಸೂಲಿ ಮಾಡಲು ಸರ್ಕಾರ ಈ ರಿಯಾಯಿತಿ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆ 2023 ಮತ್ತು 2025ರ ಅವಧಿಯಲ್ಲಿ ಐದು ಬಾರಿ ಇಂತಹ ವಿನಾಯಿತಿ ನೀಡಲಾಗಿದ್ದು, ಇದೀಗ ಆರನೇ ಬಾರಿಗೆ ಈ ವಿಶೇಷ ರಿಯಾಯಿತಿ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಇದನ್ನೂ ಓದಿ : ಮೈಸೂರು ದಸರಾದಲ್ಲಿ ಹೊಸ ಇತಿಹಾಸ: ನಾಡಹಬ್ಬದ ವೇದಿಕೆಯಲ್ಲಿ ಕರಾವಳಿಯ ‘ಕಂಬಳ’ ವೈಭವ!
ಈ ರಿಯಾಯಿತಿ ಅವಧಿಯಲ್ಲಿ ಸಂಚಾರ ಪೊಲೀಸರು ರಸ್ತೆಗಿಳಿದು ವಾಹನಗಳ ತಪಾಸಣೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿ ತೀವ್ರಗೊಳಿಸಲಿದ್ದಾರೆ. ತಪಾಸಣೆ ನಡೆಸುವ ಸಮಯದಲ್ಲಿ ವಾಹನದ ಮೇಲೆ ಹಳೆಯ ದಂಡದ ಪ್ರಕರಣಗಳು ಪತ್ತೆಯಾದಲ್ಲಿ, ಸವಾರರು ಸ್ಥಳದಲ್ಲೇ ಶೇ.50ರಷ್ಟು ದಂಡದ ಮೊತ್ತವನ್ನು ಪಾವತಿಸಿ ರಶೀದಿ ಪಡೆಯಬಹುದಾಗಿದೆ ಎಂದು ಹಿರಿಯ ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಿಗದಿತ ಜುಲೈ 10ರ ಗಡುವು ಮುಗಿದ ನಂತರ ಪೂರ್ಣ ಪ್ರಮಾಣದ ದಂಡ ತೆರಬೇಕಾಗುವುದರಿಂದ, ಸವಾರರು ಈ ರಿಯಾಯಿತಿಯ ಲಾಭ ಪಡೆದು ತಮ್ಮ ವಾಹನಗಳ ಮೇಲಿರುವ ಕೇಸ್ಗಳನ್ನು ಇತ್ಯರ್ಥಪಡಿಸಿಕೊಳ್ಳಲು ಕೋರಲಾಗಿದೆ.



